ಸಂಜೆಯಾಗಿತ್ತು ಇಡಿಯ ದೆಹಲಿ
ಸ್ತಬ್ದವಾಗಿತ್ತು ಎಲ್ಲೆಲ್ಲೂ
ತೆರೆದ ಬಾಗಿಲ ಖಾಲಿ ಮನೆಗಳು
ನಿನ್ನೆಮೊನ್ನೆಯ ವರೆಗೆ ಇಲ್ಲಿ
ಇಷ್ಟೊಂದು ಜನರಿದ್ದರೆಂದು
ನಂಬುವುದೆ ಕಷ್ಟವಾಗಿತ್ತು

ಇಬ್ಬರೇ ನಡೆದಿದ್ದರವರು
ದೊರೆ ಮತ್ತು ಪ್ರವಾಸಿ
ಎದಿರಾಗುವುದಕ್ಕೆ ಯಾರೂ ಇಲ್ಲ
ನಾಯಿಗಳೂ ಕೂಗುವುದಿಲ್ಲ
ಇಬ್ನ್ ಬಟೂಟಾ ಕೇಳಿದನು:
“ಅರಸ! ಏನಿದೆಲ್ಲದರ ಅರ್ಥ ?”

ಅರಸನೆಂದನು ನಕ್ಕು:
“ಚರಿತ್ರೆಯ ಕಾಲಘಟ್ಟಗಳಲ್ಲಿ ಕೆಲವೊಮ್ಮೆ
ಹೀಗಾಗುವುದು-ಈಗ
ಈ ಸಂಜೆಯ ಮೌನವನ್ನು ಸವಿ!
ಇನ್ನೊಂದು ದಿನ ಇದೇ ಬೀದಿಗಳು ತುಂಬುತ್ತವೆ
ಮತ್ತದೇ ಗುಂಪು ಅದೇ ಗುಲ್ಲು
ಸಾಧ್ಯವಿದ್ದರೆ ನಾನು
ಸಮುದ್ರವನ್ನು ಕೂಡ ಮೊಗೆಯುತ್ತಿದ್ದೆ
ಅದರ ತಳದಲ್ಲಿ ನಡೆಯಲು”

ನಂತರ ಇಬ್ನ್ ಬಟೂಟಾ ಒಬ್ಬನೇ
ದೇವರನ್ನು ಹೀಗೆ ಪ್ರಾರ್ಥಿಸಿಕೊಂಡ:
“ಮೌನವಿರುವ ಕಡೆ
ಮಾತುಗಳು ಹುಟ್ಟಲಿ
ಈ ಒಲೆಗಳು ಮತ್ತೆ
ಉರಿಯುವಂತೆ ಮಾಡು
ಸರ್ವಶಕ್ತನಾದ ಅಲ್ಲಾ
ಸಮುದ್ರದ ರಹಸ್ಯವನ್ನು
ಸರ್ವಾಧಿಕಾರಿಗಳಿಂದ ರಕ್ಷಿಸು !”
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)