ಒಂದನ್ನೊಂದು ಅಣಕಿಸುವಂತಿವೆ ಅವು!
ಅದೇ ಮೈ ಅದೇ ಬಣ್ಣ ಅದೇ ನಿಲುವು
ಅದೇ ಬಾಲದ ಅದೇ ಡೊಂಕು
ಕಣ್ಣುಗಳಲ್ಲೂ ಅದೇ ಕವಿದ ಮಂಕು

ಆದರೆ-ತಿಂಗಳು ನೆತ್ತಿಯ ಮೇಲೆ ಎದ್ದು
ತೆಂಗಿನ ಸೋಗೆಗಳಲ್ಲಿ ಆದಾಗ ಸದ್ದು
ಒ೦ದು ಭಯದಿಂದ ಹುಯ್ಯಲಿಡುತ್ತದೆ
ಇನ್ನೊಂದು ಮಾತ್ರ ಸುಮ್ಮನಿರುತ್ತದೆ

ಅಥವ -ಧಾವಿಸಿ ಒಮ್ಮೆಲೆ ಬಿಸಿರಕ್ತದ ಹುರುಪು
ಆಗಿ ತನ್ನ ಒಂಟಿತನದ ನೆನಪು
ಒಂದು ಅಯ್ಯೋ ಎಂದು ಮೊರೆಯಿಡುತ್ತದೆ
ಇನ್ನೊಂದು ಮಾತ್ರ ಗಂಭೀರವಾಗಿರುತ್ತದೆ

ಅಥವ-ಮೈ ಕೊರೆವ ಮಾಗಿಯ ಚಳಿಗೆ
ಸಾಯುತ್ತಿರಲು ಗತಿಯಿರದೆ ಹೊಟ್ಟೆ ಬಟ್ಟೆಗೆ
ಒಂದು ಸತ್ತೇ ಎಂದು ಕೂಗಾಡುತ್ತದೆ
ಇನ್ನೊಂದು ಮಾತ್ರ ನಿಶ್ಚಲವಾಗಿರುತ್ತದೆ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)