ಈ ಮಧ್ಯಾಹ್ನ ಅವಳು ದಾಟಿ
ಹೋದಳು ಹಾಗೆಯೇ ಇದ್ದವು
ಅರೆತೆರೆದ ಕಣ್ಣುಗಳು ಕನಸುಗಳು
ಅದು ಅಪರೂಪದ ದೃಶ್ಯವೆಂದು
ಅನಿಸಿಕೊಂಡಾಗಲೇ ಬೆರೆಯುತ್ತಿತ್ತು
ಬೆವರ ಹನಿಗಳು ಗಾಳಿಯಲಿ,
ಅವಳು ಮೆತ್ತಗೆ ನಡೆಯುತ್ತಿದ್ದಳು.

ಗಾಳಿಯಲಿ ತೇಲಿದ ಪರಾಗ
ಸೆರಗಿನಗುಂಟ ಹರಿದು, ಅವಳ
ಮೈಗೆ ಮೆತ್ತಿಕೊಂಡಿದೆ ದಣಿವು ಗಂಧ,
ಮನೆಯಲಿ ಮಿನುಗುವ ಕಣ್ಣುಗಳು
ಮಕ್ಕಳು ಹಾರಾಡಿವೆ ಹಾಗೆ ಚಿಟ್ಟೆಗಳಾಗಿ,
ಅವಳೆದೆಯ ತುಂಬ ಕೆಂಡಸಂಪಿಗೆ
ಅವಳು ಮೌನವಾಗಿ ಸರಿದು ಹೋಗಿದ್ದಾಳೆ.

ಶೂನ್ಯದ ಕ್ಷಣಗಳಲಿ ಒಂದಾದ
ಅವಳ ಕಣ್ಣೋಟಗಳು ಯಾಕೋ
ಎದೆಗೂಡಿನೊಳಗೆ ಕಟ್ಟಿವೆ ಜೇನುಗೂಡು,
ನಾನು ಅವಳೋ ಅವಳು ನಾನೋ
ಪ್ರಭೆಯಲಿ ಒಂದಾದ ಮರಳೋ
ಸಮರ ಹೂಡಿದ ಯೋಧರಂತೆ
ಸಾಗಿದ್ದೇವೆ ಟೊಂಕಕಟ್ಟಿ ಹರವಾದ ಬದುಕಿನಲ್ಲಿ.

ಇಂದು ನಿನ್ನೆಯಂಥೆ ಇಲ್ಲ ಅವಳು
ಬದಲಾಗಿದ್ದಳು ವಿಸ್ಮಯಗಳು ಘಟಿಸಿವೆ
ಯಾರೂ ಹೊರಳದ ದಾರಿಯ ತಿರುವಿನಲಿ
ಸಂಜೆಯ ಬಿಸಿಲಿನ ನೆರಳುಗಳು ಮುಳುಗಿ
ಹರಿದು ಹೋಗುತ್ತದೆ ನದಿಯ ಅಲೆ ಅಲೆಗಳು
ನಮ್ಮ ಕುರುಹುಗಳು ಅಲ್ಲಿ ಕಾಣುವವು
ಒಂದರೊಳಗೊಂದು ಇಳಿದಂತೆ ಹೊಕ್ಕಳ ಬಳ್ಳಿ ಬೇರುಗಳು!
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)