ರಾಷ್ಟ್ರೀಯ ಶೋಕದ ಹನ್ನೆರಡು
ದಿನಗಳೂ ಮುಗಿದುವು-
ಒಂದು ಯುಗವೆ ಮುಗಿದಂತೆ
ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ
ಚೆಲ್ಲಿಯೂ ಆಯಿತು-
ನೀನು ಬಯಸಿದಂತೆ

ಕೆಂಪು ಕೋಟೆಯ ಬುರುಜುಗಳಿಂದು
ಯಮುನೆಯ ಕೆಂಪಿನಲ್ಲಿ ಕದಡಿವೆ
ಒಂಟಿ ದೋಣಿಗಳು ನಿಂತಲ್ಲೆ ನಿಂತಿದೆ
ಯಾವುದೂ ಎಂದಿನಂತಿಲ್ಲ
ಎಲ್ಲ ಬದಲಾಯಿಸಿದೆ

ಆದರೂ ಮುಂದಿನ ವರ್ಷ
ಚಿನಾರ್ ಮರಗಳ ತುಂಬ
ಮತ್ತೆ ಹೂ ಬಿಡುವುವು
ಕಾಡಿನ ದಾರಿಗಳಲ್ಲೆಲ್ಲ
ಎಲೆಗಳು ಬೀಳುವುವು
ಪರ್ವತಗಳ ಶಿಖರಗಳು ಇನ್ನೊಮ್ಮೆ
ಹಿಮದಿಂದ ಮುಚ್ಚುವುವು-
ಆಗ ನೀನಿರುವುದಿಲ್ಲ
ನಮ್ಮ ನೆನಪಿನಲ್ಲಲ್ಲದೆ ಇನ್ನೆಲ್ಲಿಯೂ

ಪ್ರಿಯದರ್ಶಿನಿ-
ನೀನಿರದ ಈ ದಾರಿಗಳನ್ನು
ಹೇಗೆ ನೆನೆಯಲಿ?
ಆ ಪರ್ವತಗಳನ್ನು
ಹೇಗೆ ನೋಡಲಿ?
ನಮ್ಮ ನೆನಪುಗಳನ್ನಾದರೂ
ಎಲ್ಲಿ ಮರೆಸಲಿ?
*****