ಉತ್ತು ಹೊಡೆಮರಳಿದ ಮಣ್ಣಿಗೆ ಹೆಣ್ಣಿನ ಮುಖ
ಬೆಳೆದ ಪೈರಿನ ಬಯಲಿಗೆ ಬಸುರಿಯ ಮುಖ
ಗ್ರೀಷ್ಮದಲ್ಲಿ ಭೂಮಿಗೆ ವೃದ್ಧೆಯ ಮುಖ
ಮಳೆ ಬಂದ ಪ್ರಕೃತಿಗೆ ಮತ್ತೆ ಹುಟ್ಟಿದ ಸುಖ

ಕಾಣಿಸಿತಲ್ಲ ಇದೆಲ್ಲ ಒಮ್ಮೊಮ್ಮೆ ನೇರ
ಒಮ್ಮೊಮ್ಮೆ ಊರ ಕೆರೆಯಲ್ಲಿ ಬಿದ್ದು
ಕೆರೆ ಬತ್ತಿದಾಗ ಮೋಡಗಳೆದ್ದು
ಗುಡ್ದಗಳ ಹಿ೦ದೆ ಮರೆಯಾಗಿ ಕದ್ದು

ಕಾರಡ್ಕ ಮುಳ್ಳೆರಿಯ ಕಾನತ್ತೂರು ಕರಣಿ
ವಿಚಿತ್ರ ಹೆಸರುಗಳ ಸರಣಿ
ಹೊತ್ತ ಈ ಧರಣಿ ನಮ್ಮ ಪಡೆದಾಗ
ಇನ್ನೂ ತರುಣಿ

ಪಂಡಿತರ ಮನೆಯಂಗಳದಲ್ಲಿ ಬಿತ್ತಾವ ಶಕುನದ ಹಕ್ಕಿ
ಎರಡು ತಲೆಗಳ ಗಂಡಬೇರುಂಡವೆ ಅಥವ ಇನ್ನೊಂದೆ ?
ಯಾರಿಗೆ ಗೊತ್ತು? ಜಜ್ಜಿ ಹೋಗಿತ್ತು ರುಂಡ
ಎಲ್ಲರಿಗಿಂತ ಮೊದಲೇ ಎದ್ದ ಭಂಡ ಕಾಗೆ
ಕುಕ್ಕಿ ಎಳೆಯುತ್ತಿತ್ತು ಅದರ ಕರುಳ
ಅಂದು ಮೇಯಲು ಹೋದ ದನ ಮರಳಿ ಬರಲಿಲ್ಲ
ಹೆರಿಗೆಗೆ ಬಂದ ಮಗಳು ಗಂಡನಮನೆ ಸೇರಲಿಲ್ಲ
ನೆರೆಮನೆಯಾಕೆ ಎರಡು ಮಕ್ಕಳ ತಾಯಿ
ಓಡಿಹೋದಳು ಘಟ್ಟದಿಂದ ಬಂದವನ ಜತೆ
ಅಜ್ಜಿಯೆಂದಳು-ಇದು ಕಲಿಯುಗದ
ಮೂರನೆಯ ಅಥವ ನಾಲ್ಕನೆಯ ಪಾದ
ಕಳವು ಕೊಲೆ ದಗೆ ಹಾದರ
ಇವೆಲ್ಲ ಲಕ್ಷಣಗಳದರ
ಮೊದಲು ಬರುವುದು ಭೀಕರ ಕ್ಷಾಮ
ಅಮೇಲೆ ಬರುವುದೆ ಪ್ರಳಯ
ಗಂಗಾಜಲದ ಚೊಂಬು ತಲೆಯ ಬಳಿಯಿರಿಸಿ
ಕಾಯುತಿದ್ಡಳು ಆಕೆ ಉತ್ತರಾಯಣವ
ಕಾಯಲಿಲ್ಲ ಮರಣ

ಕೊನೆಯ ಎತ್ತಿನ ಗಾಡಿ
ಹೊರಟು ಹೋಯಿತು ಎ೦ದು?
ಊರ ಚೌಕದಲಿತ್ತು ತಿಂಗಳಿಂದಲು ಹಾಗೆ
ಎಷ್ಟೋ ದಾರಿಗಳ ಸುತ್ತುಹಾಕಿದ ಗಾಲಿ
ಎಷ್ಟೋ ಹೊಲಗಳ ಹುಲ್ಲು ಮೋದ ಜೊಡೆತ್ತು
ಒ೦ದು ದಿನ ಮುಂಜಾನೆ ಕಾಣಿಸಲಿಲ್ಲ ಎಲ್ಲು
ಅಂದುಕೊಂಡೆವು ನಾವು-ಹೋಗಿರಬಹುದು
ಕುಂಬಳೆಗೆ ಅಥವ ಉಪ್ಪಿನಂಗಡಿಗೆ
ಉಳ್ಳಾಲ ಅಥವ ಮಂಜೇಶ್ವರಕ್ಕೆ
ಹೊದೆವ ಹಂಚುಗಳನ್ನು ಅಥವ
ಉಪ್ಪಿನ ಚೀಲಗಳನ್ನು ತರಲು
ಕಾದು ಕುಳಿತವು ಎಲ್ಲರೂ
ಗಾಡಿ ಬರುವುದನ್ನು

ಬರಲಿಲ್ಲ ಗಾಡಿ- ಬಂತು ಕೊರೆಯುವ ಮಾಗಿ
ಕಾದಿದ್ದ೦ತೆ ಎಲ್ಲೋ ಸಂದಿಯಲಡಗಿ
ಬಂತು ಮನೆಮನೆ ಸೂರುಗಳಿಂದ ಇಬ್ಬನಿತೂಗಿ
ಒ೦ದು ಮೈ ನಡುಕದಿಂದ ಇನ್ಮೊಂದಕ್ಕೆ ಸಾಗಿ
ಮುಟ್ವಿದುವೆಲ್ಲ ಸೊರಗಿ ಸುಕ್ಕುಗಳಾಗಿ
ಬಂತು ಮತ್ತೊಮ್ಮೆ ತಿರುಗಿ
ಮಳೆಗೊಮ್ಮೆ ಪ್ರಳಯ ಬೇಸಿಗೆಗೆಷ್ಟೋ ಕ್ಷಾಮ
ಚಲಿಸುತಿತ್ತು ಹೀಗೆ ಕಾಲಕ್ರಮ
ತತ್ತರಿಸುತಲಿತ್ತು ಗ್ರಾಮ

ಒ೦ದು ವರುಷಕ್ಕೇ ಒ೦ದು ಶಕೆ
ಅಬ್ಬ! ಅಂಥ ಸೆಕೆ
ತಿಳಿದವರು ಹೇಳುವರು-
ಮಾಗಿಯ ಹಕ್ಕಿಗಳು ಬೇಸಿಗೆಯಲ್ಲಿ ಹಾರಿಹೋಗುವುವು
ಮಳೆಗಾಲದ ಕಪ್ಪೆಗಳು ನೆಲದೊಳಗೆ ಕುಳಿತುಕೊಳ್ಳುವುವು
ಮೀನುಗಳೂ ಹಾಗೆ ಇನ್ನೆಲ್ಲೋ ಅವಿತುಕೊಳ್ಳುವುವು
ಭೂಮಿ ತನ್ನೊಳಗೆ ಬೀಜಗಳನ್ನು ಇಟ್ಟುಕೊಳ್ಳುವುವು
ಅದು ಎಲ್ಲಿವನ್ನೂ ಸಹಿಸುವುದು

ಅವರು ಬಂದರು-
ಮೊದಲು ಬಸ್ಸುಗಳಲ್ಲಿ ಅಮೇಲೆ ಕಾರು ಜೀಪುಗಳಲ್ಲಿ
ಮೆಟಡೋರು ಟ್ರಕ್ಕುಗಳಲ್ಲಿ ನೆಲನಡುಗಿಸುವ ಯಂತ್ರಗಳಲ್ಲಿ
ಯಾರವರ ನೇತಾರ ಕಪ್ಪುಚಷ್ಮದ ಧೀರ
ನೊಡಿರವನ ಉಡುಗೆ ತೊಡುಗೆಯ ಗತ್ತು
ಮಾತುಮಾತಿಗೆ ವಿಚಿತ್ರ ಒತ್ತು
ಕಾಲನಡೆಯಲ್ಲೂ ಬೇರೆ ಒತ್ತಡವಿತ್ತು
ಕಲಿಯೊ ಕಲ್ಕಿಯೊ ಕಲ್ಕಿಯ ಮಗನೊ
ತಿಳಿಯುವುದಿಲ್ಲ ಊಹೆಗೂ ನಿಲುಕದ ಮಲ್ಲ
ಬಿಸಿಲ ಝಳದಲ್ಲಿ ತೊಳಗುತ್ತ ತಳತಳ
ನಮ್ಮ ಬೆವರುಗಣ್ಣಿನಲ್ಲಿ ಒಂದು ಎರಡಾಗುವನು
ಎರಡು ಮೂರಾಗುವನು ನೂರಾಗುವನು
ನೂರು ಸಾವಿರವಾಗುವನು
ತನ್ನ ಪ್ರಭಾವಲಯದೊಳಗೆ ಆಳುವನು
ಈ ಊರ ಸೃಷ್ಟಿ ಸ್ಥಿತಿ ಲಯಗಳನ್ನು
ಅದರ ಹೇಳಲಾರದ ಭಯಗಳನ್ನು
******

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)