ಈ ನೆಲ, ಕಲ್ಲು-ಮಣ್ಣು, ಈ ವಾಸ್ತವತೆ ವ್ಯವಹಾರ
ಈ ಲಿಂಗ ಬೇರು, ಈ ಅಳ, ಈ ಎಲುಬು, ಈ ಗರ್ಭಗುಡಿ
ಈ ಸಾವು ಗೋಳು, ಈ ಮಾಂಸದ ಹಸಿವು ಕರುಳಿನ ನಾಚಿಕೆಗೇಡಿತನ
ಈ ಕಾಲದ ಕರಾಳ ಹಸ್ತ, ಈ ಇರುಳ ಕಾಳ ಕುಂತಳ
ಲೋಕಗೆದ್ದ ಹಣ, ಹೆದರಿಸುವ ಹೆಣ
ಈ ಹಗರಣ ಹಗಲು, ಒಣ ದುರುಗಣ್ಣ ಬಿಸಿಲು
ನರಗಳ ನರಳಾಟ, ರೋಮಗಳ ಉದ್ರೇಕ
ಈ ರಕ್ತದ ಹರಿದಾಟ, ತಲೆಯ ಕೊಸರಾಟ
ಈ ನಾಲಿಗೆಯ ಉದ್ದ ಈ ಒಡಲ ಅಗಲ
ಈ ಜನಾಂಗಗಳ ಅನಾದಿ ಬೇರು ಬಿಳಲು
ಬದುಕಿನ ಪಾತಾಳ ಸತ್ಯಗಳು

ಇವೆಲ್ಲ ನನ್ನನ್ನು ಮೇಲೆ ಹಾರಗೊಡುವುದಿಲ್ಲ
ಹಾರಿ ಹಾರಿ ಪರಲೋಕಗಳ, ಪುರಾಣದೇವತೆಗಳ, ರಂಜಕತೆಗಳ
ಓಕುಳಿಯಾಟಗಳ ಕಲ್ಪನೆಯ ಗುಳ್ಳೆಗಳನಪ್ಪದಂತೆ ಕೆಳಗೆಳೆಯುತ್ತವೆ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)