ಹೇಳದಿದ್ದರು ನೀನು
ಎಲ್ಲ ಬಲ್ಲೆನು ನಾನು
ಏನಿದೆ ಎಂದು ಎದೆಯಾಳದಲ್ಲಿ;
ನಿನ್ನ ಕಣ್ಣಿನೊಳೇನೊ
ನೋವು ತೇಲುತ್ತಿಹುದು
ಕರಿಮೋಡ ಸುಳಿದಂತೆ ಬಾನಿನಲ್ಲಿ
ನೂರು ಹಳೆ ನೆನಪುಗಳು
ಚೀರಿ ಹೊಮ್ಮುತ್ತಲಿವೆ
ಮರವೆಯಲಿ ಹುಗಿದರೂ ಮೇಲಕೆದ್ದು;
ನಮ್ಮ ಮೇಲೇ ಏಕೆ
ವಿಧಿಗೆ ಈ ಬಗೆ ಜಿದ್ದು
ಬೆಂದವರ ಬೆನ್ನಿಗೇ ಏಕೆ ಗುದ್ದು?
ಬಾಗುವುದು ಏಗುವುದು
ಸಹನೆಯಲಿ ಸಾಗುವುದು
ಇಷ್ಟಕೇ ಮುಗಿಯಿತೇ ನಮ್ಮ ಬಾಳು?
ಕಾಣಬಾರದ್ದೆಲ್ಲ
ಕಂಡರೂ ಕಹಿಬೇಡ
ಕನಸಿನಲಿ ಹುಗಿಯೋಣ ನಮ್ಮ ಗೋಳು.
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕೃಷ್ಣಭಕ್ತರ ಕುಣಿತ - April 15, 2021
- ಸೀನಿಯರ್ ಕ್ರಿಕೆಟಿಗನ ಸಂಜೆ - April 8, 2021
- ಅರ್ಧಸತ್ಯದ ಪ್ರಾಪ್ತಿ - April 1, 2021