ಟಿಪ್ಪುಡ್ರಾಪ್‌ಗೆ ಆತುಕುಳಿತ
ಪ್ರೇಮಿಗಳ ನಗು ಅಂಚು ಅಂಚು
ಫಳಾರನೆ ಹೊಳೆವ ಅಲಗು
ತೂಕ ತಪ್ಪಿದರೆ ನಾಪತ್ತೆಯಾಗುವ
ಎಲಬುಗಳು. ಹೆಚ್ಚಾದರೆ
ಇಂಚು ಇಂಚಿಗೂ ಬೆಳೆದ
ಬೆಟ್ಟದ ದಟ್ಟ ಹೂವುಗಳ ಮಕರಂದ

ಪ್ರವಾಸಿ ಕಾಲೇಜು ಹುಡುಗರ
ಮೋಜು ನಗು ಫೋಟೊ
ಎಷ್ಟೊಂದು ಸ್ನಿಗ್ಧ ಎಷ್ಟೊಂದು ಸಿಹಿ.
ಮಕ್ಕಳಿಗೆ ಐಸ್‌ಕ್ರೀಂ ಕೊಡಿಸಿ
ಏನೋ ಸಮಸ್ಯೆ ಬಗೆಹರಿಸಿಕೊಳ್ಳುವ
ಇತರ ಇತರ ಜನರ ಮುಖಚಹರೆ

ಮೆಳ್ಳೆಗಣ್ಣಿನ ಬಂಡೆ ಬಸವನಿಗೆ
ಕೋಲೆ ಬಸವ ಎಂದದ್ದು ತಪ್ಪಾದೀತು,
ಮೈ ಝಾಡಿಸಿ ಎದ್ದು
ಕಣ್ಣು ಕೂಡಿಸಿ ಬೆಟ್ಟದಂಚಿಗೆ ನಿಂತು
ಕೂಗಿದರೆ ಪ್ರಳಯವಾಗುವ ಚಿತ್ರ
ಕೊಟ್ಟು
ಹೊಟ್ಟೆ ತುಂಬಕೊಳ್ಳುವ ಪೂಜಾರಿ.
*****