ಕೃಷ್ಣ ನಮ್ಮ ಈ ಗೋಕುಲಕೆ
ಬಂದುದೇಕೆ ಗೊತ್ತೇ?
ನಮ್ಮ ಒಳಗಿನ ಮಿಂಚನು ಭೂಮಿಗೆ
ಇಳಿಸಿ ಹೊಳೆಸಲಿಕ್ಕೆ

ಬಾನಿನ ಬೆಳಕಿಗೆ ಭೂಮಿಯ ತಮವ
ಗುಡಿಸಿ ಹಾಕುವಂಥ
ಬಲವಿದೆ, ಹಾಗೇ ಒಲವಿದೆ ನಮ್ಮೊಳು
ಸ್ವಾರ್ಥವ ಗೆಲುವಂಥ

ತೆತ್ತುಕೊಳ್ಳುವ ಪ್ರೇಮವೆ ಸಾಲದು
ಬಾಳಿನ ಸಂತಸಕೆ
ತುತ್ತುಗೊಳ್ಳುವ ಬೆಳಕೂ ಬೇಕು
ಪ್ರೀತಿಯ ಪೂರ್ಣತೆಗೆ
ಕೃಷ್ಣನ ತಬ್ಬಿ ಬಿಡಿಸಿಕೊಂಡೆವು
ಎಲ್ಲ ಮಾಯೆಯಿಂದ
ಕೊಳಲು ನುಡಿಸಲು ತುಂಬಿಹೋಯಿತು
ಬದುಕು ರಾಗದಿಂದ
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)