ಗೋಡಿಹಾಳ ಗ್ರಾಮ ಚಿಕ್ಕದಾದರೂ ಅಲ್ಲಿಯ ಗೌಡರು ದೊಡ್ಡವರಾಗಿದ್ದರು. ಶ್ರೀಮಂತಿಕೆಗಿಂತ ಅವರಲ್ಲಿ ತಿಳಿವಳಿಕೆ ಹೆಚ್ಚಾಗಿತ್ತು. ವಯಸ್ಸಿನಿಂದಲೂ ಹಿರಿಯರಾಗಿದ್ದರು. ಮಕ್ಕಳೆಲ್ಲ ಕೈಗೆ ಬಂದಿದ್ದರು. ಹಿರೇಮಗ ಗೌಡಿಕೆಯನ್ನೂ, ಚಿಕ್ಕವನು ಹೊಲಮನೆಗಳ ಮೇಲ್ವಿಚಾರಣೆಯನ್ನೂ ನಿಸ್ತರಿಸುತ್ತಿದ್ದನು. ದೊಡ್ಡ ಗೌಡರು ವೇದಾಂತಗ್ರಂಥಗಳನ್ನು ಓದುವುದರಲ್ಲಿ ಆಸಕ್ತಿಯುಳ್ಳವರು. ಬಂದವರೊಡನೆ ಚರ್ಚೆ ಮಾಡುವುದರಲ್ಲಿ ಅವರಿಗೆ ವೇಳೆಯೇ ಸಾಲುತ್ತಿರಲಿಲ್ಲ.

ಚಳಿಗಾಲದ ಮುಂಜಾವಿನಲ್ಲಿ ಮನೆಯ ಮುಂದಿನ ಕಟ್ಟೆಯ ಮೇಲೆ ಬಿಸಿಲು ಕಾಯಿಸಿಕೊಳ್ಳುತ್ತ ಕುಳಿತರೆಂದರೆ, ಅವರ ಮಗ್ಗುಲಲ್ಲಿ ಒಂದು ನಾಯಿ ಯಾವಾಗಲೂ ಪವಡಿಸಿರುತ್ತಿತ್ತು. ಗೌಡರ ಸಲುವಾಗಿ ಅದೆಷ್ಟೋ ಜನರು ಅಲ್ಲಿಗೆ ಬಂದಾಗ ಆ ನಾಯಿ ಜಗ್ಗನೆದ್ದು ಕವ್ವನೇ ಬೊಗಳಿ ಹೆದರಿಸುವದು. ಒಮ್ಮೊಮ್ಮೆ ಚಂಗನೆ ನೆಗೆದು ಬಂದವರ ಮೈಮೇಲೆ ಏರಿಹೋಗುವದು. ಆಗ ಗೌಡರು ಬೆದರಿಸಿ ಅದನ್ನು ಹತ್ತಿರ ಕರೆದು ಕುಳ್ಳಿರಿಸಿಕೊಳ್ಳುವರು. ಅದರಿಂದ ಸಂದರ್ಶನಾರ್ಥಿಗಳಿಗೆ ನಿರ್ಬಾಧವಾಗುವದು.

ಅದೆಷ್ಟೋ ಜನರು ನಾಯಿಗಂಜಿಯೇ ಗೌಡರ ಬಳಿಗೆ ಹೋಗುವುದಕ್ಕೆ ಹಿಂಜರಿಯುತ್ತಿದ್ದರು. ನಾಯಿಯ ಆ ಸ್ವಭಾವಕ್ಕಾಗಿ ಗೌಡರಿಗೂ ಬೇಸರವೆನಿಸಿತ್ತು. ಅದರ ಸ್ವಭಾವ ಪರಿವರ್ತನೆಗೊಳಿಸುವದಕ್ಕೆ ಯಾವ ಹಂಚಿಕೆಮಾಡಬೇಕು – ಎಂದು ಯೋಚನೆಗೀಡಾದರು. ಒಂದು ಯುಕ್ತಿಯೂ ಹೊಳೆಯಿತವರಿಗೆ. ಸಿದ್ಧತೆಮಾಡಿ ಕೊಂಡರು. ನಾಯಿಯನ್ನು ಹತ್ತಿರಕ್ಕೆ ಕರೆದು ಕುಳ್ಳಿರಿಸಿಕೊಂಡರು. ಸೂಜಿಯಿಂದ ಕೇರಿನೆಣ್ಣೆ ತೆಗೆದು ನಾಯಿಯ ಪೃಷ್ಠದ್ವಾರದ ಮೇಲೆ ಅಧಿಕ ಚಿಹ್ನ ಬರೆದರು. ಅದು ಒಂದೆರಡು ದಿನಗಳಲ್ಲಿ ಗುದುಗುದಿಸಹತ್ತಿದ್ದರಿಂದ ನಾಯಿ ಎದ್ದುನಿಂತು ಮುಕಳಿಯನ್ನು ನೆಲಕ್ಕೆ ತಿಕ್ಕಿತು. ಅದರಿಂದ ಗುದದ್ವಾರವು ಕೆತ್ತಿಹೋಗಿ ಹುಣ್ಣೇ ಬಿದ್ದಿತು. ಕೀವು ಆಯಿತು. ಆದರೆ ಬಂದ ಹೊಸಬರನ್ನು ಕಂಡು, ವವ್ವ್ ಎಂದು ಬೊಗಳಿ ಅವರ ಮೈಮೇಲೆ ಹೋಗುವುದನ್ನು ಬಿಟ್ಟಿರಲಿಲ್ಲ. ಆದರೆ ವವ್ವ್ ಎಂದು ಬೊಗಳಬೇಕಾದರೆ ಗುದದ್ವಾರವನ್ನು ಬಿಗಿಹಿಡಿಯಬೇಕಾಗುತ್ತದೆ. ಹಾಗೆ ಬಿಗಿಹಿಡಿಯುವಾಗ, ಹುಣ್ಣು ಬಿದ್ದಿದ್ದರಿಂದ ಅಸಹ್ಯವಾದ
ನೋವುಂಟಾಗುವದು. ಅದೆಷ್ಟು ರಭಸದಿಂದ ಚಂಗನೆ ನೆಗೆದು ಬಂದವರ ಮೈಮೇಲೆ ಹೋಗುವದೋ, ಅಷ್ಟೇ ವೇದನೆಯಿಂದ “ಅಂಽಽಽ ಎಂದು ನರಳಿ ಹಿಂದಿರುಗಿ ಬರತೊಡಗಿತು.

ಗುದದ್ವಾರದಲ್ಲಿ ಬಿದ್ದ ಹುಣ್ಣಿನ ನೋವಿಗಂಜಿ ಅದು, ರಭಸದಿಂದ ಬೊಗಳಿ ಬಂದವರ ಮೇಲೆ ಹೋಗುವುದನ್ನು ಒಮ್ಮೆಲೇ ಕಡಿಮೆ ಮಾಡಿತು. ಅಲ್ಲಿಯವರಿಗೆ ಆ ಹುಣ್ಣು ಮಾಯಿಸುವ ಉಪಾಯವನ್ನೇ ಮಾಡಲಿಲ್ಲ ಗೌಡರು.

“ಕಳೆನೋಡಿ ಕೇರು ಹಾಕಿದರೆ ಹಾದಿಗೆ ಬಾರದವರಾರು” ಎಂದು ಗೌಡರು ಮೇಲಿಂದ ಮೇಲೆ ಮಾತಿನಲ್ಲಿ ನುಡಿಯತೊಡಗಿದರು. ಕೇಳಿದವರಿಗೆ ಅದು ಸತ್ಯವೂ ಅನಿಸಿತು.
*****

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)