ಸೃಷ್ಟಿಯಲಿ ಚೆಲುವು ದೃಷ್ಟಿಯಲಿ ಚೆಲುವು
ಕಳೆಯಲ್ಲಿ ಚೆಲುವು ಬೆಳೆಯಲ್ಲಿ ಚೆಲುವು

ಮರಮರವು ಚಿಗುರು ನಗುತಿರುವ ಚೆಲುವು
ಮೈತುಂಬ ಸೀರೆಯಂತೆ

ಬಿಳಿಹಳದಿ ಕೆಂಪು ತರತರದ ಕಂಪು
ಮುಖವರಳಿ ನಗುವಳಂತೆ

ಆಕಾಶದಲ್ಲಿ ನೀರನ್ನು ಹೊತ್ತು
ಮೋಡಗಳು ಸಾಗುತಿಹವು
ತಲೆ ಮೇಲೆ ನೀರ ಹೊತ್ತಂಥ ನೀರೆ
ಬಳುಕುತ್ತ ನಡೆವ ಚೆಲುವು

ಸಂಜೆಯಲಿ ಮುಗಿಲು ಕೆಂಬಣ್ಣವಾಗಿ
ಆರಕ್ತ ಹೂವು ಕೆನ್ನೆ
ಮುಂಜಾವ ಗಾಳಿ ಚವರಿಯನು ಬೀಸೆ
ಬೀಸುವಳು ಸೆರಗ ಚೆನ್ನೆ

ಮುದ್ದಾಗಿ ನಿದ್ದೆಗೈದಿಹುದು ಮಲೆಯು
ಮಲಗಿರುವ ಚೆಲುವೆಯಂತೆ
ಹಕ್ಕಿಗಳ ನಾದ ಕಿವಿಯಲ್ಲಿ ಬಿದ್ದು
ಕಾಲ್ಗೆಜ್ಜೆ ನುಡಿಯುವಂತೆ
*****