ಈಗ ಈ ಹವೇಲಿಯಲ್ಲಿ ಯಾರೂ ಇಲ್ಲ.  ಇದು
ಯಾರಿಗೆ ಸೇರಿದ್ದೊ ಯಾರಿಗೂ ತಿಳಿಯದು.  ಹೊರಗೆ
ಬೀದಿಯಲ್ಲಿರುವ ಪಾನ್‌ವಾಲ ಮುದುಕನ ಕಣ್ಣುಗಳಲ್ಲಿ
ಇದರ ಚರಿತ್ರೆ ಇಳಿದುಹೋಗಿರುವಂತಿದೆ.  ಆದರೆ
ಅವನೇನೂ ಹೇಳಲೊಲ್ಲ.  ವೀಳ್ಯದೆಲೆ ಹೊಸೆಯುವ
ಅವನ ಕೈಗಳು ಯಾವಾಗಲೂ ಕಂಪಿಸುತ್ತವೆ.


ಈ ಕಟ್ಟಡದ ಬೆಮ್ಮಾಡಿಗೆ ಕಾಡುಬಳ್ಳಿಗಳು ಹತ್ತಿವೆ.
ದೊಡ್ಡದಾದ ಕಿಟಕಿಗಳಿಂದ ದೊಡ್ಡದಾದ ಜೇಡನ ಬಲೆಗಳು
ಇಳಿದಿವೆ.  ಇಷ್ಟೆಲ್ಲ ಕೋಣೆಗಳನ್ನು, ಬೈಠಕ್‌ಖಾನೆಗಳನ್ನು
ಹಿಡಿದುನಿಂತ ಗಾರೆ ಕೆಲಸವನ್ನು ಈಗಿನ ಕಾಲದಲ್ಲಿ
ಎಲ್ಲೂ ಕಾಣಲಾರೆವು.  ಆಳೆತ್ತರ ಬೆಳೆದ ಪೊದೆಗಳ
ನಡುವೆ ಅಷ್ಟೆತ್ತರ ನಿಂತಿದೆ ಈ ಮನೆ.


ಇಂಥ ಸ್ಥಳದಲ್ಲಿ ಬಹಳ ನೆರಳಿರುವುದರಿಂದ
ಇಲ್ಲಿ ನಿಂತು ಯಾರು ಏನನ್ನೂ ಬೇಕಾದರೂ
ಜ್ಞಾಪಿಸಿಕೊಳ್ಳಬಹುದು: ಅವರವರ ನಗುವನ್ನು,
ಅವರವರ ನರ್ತನವನ್ನು.  ಈ ಮಧ್ಯೆ ಒಳಗೆಲ್ಲೊ
ಬಟ್ಟೆಗಳು ಕೆಳಬಿದ್ದ ಸದ್ದು ನಿಜವಿರಬಹುದು.
ಆದರೆ ಒಂದಂತೂ ನನಗೆ ಗೊತ್ತು: ಆಳವಾದ ಈ
ಭಾವಿಯೊಳಕ್ಕೆ ಎಸೆದ ಕಲ್ಲಿನ ಸದ್ದು ಮರುಕಳಿಸುವುದಕ್ಕೆ
ಕೆಲವು ನಿಮಿಷಗಳು ಬೇಕು-ಅದರ ನಡುವಣ ಸಮಯ
ಆತಂಕದಿಂದ ತುಂಬಿದ್ದು.
*****