ಪ್ರಿಯದರ್ಶಿಯಾದ ಅಶೋಕನು ತನ್ನ ರಾಜ್ಯದಲ್ಲಿ
ಹೆದ್ದಾರಿಗಳನ್ನು ಕಡಿಸಿದನು ಬಾವಿಗಳನ್ನು ತೋಡಿಸಿದನು
ಸಾಲುಮರಗಳನ್ನು ನೆಡಿಸಿದನು ಧರ್ಮಸಾಲೆಗಳನ್ನು ಕಟ್ಟಿಸಿದನು
ಅಲ್ಲಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಿದನು.
ಅವನ ಕಾಲದಲ್ಲಿ ಪ್ರಯಾಣಿಕರಿಗೆ ಕಳ್ಳಕಾಕರ ಭಯವಿರಲಿಲ್ಲ
ಪೇಟೆಗಳಲ್ಲಿ ಜನರು ಮನೆಬಾಗಿಲುಗಳನ್ನು ತೆರೆದಿಟ್ಟು ಮಲಗುತ್ತಿದ್ದರು

– ಎಂದು ಉರುಹೊಡೆದುಕೊಂಡೆ ಬೆಳೆದ ಜನರೀಗ
ಇಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ
ಅಥವ ಮಾಸ್ತರರಾಗಿ ವಕೀಲರಾಗಿ ವೈದ್ಯರಾಗಿ
ಕಾರಕೂನರಾಗಿ ಈ ಪೇಟೆಯ ಹಲವು ಮುಖಗಳಾಗಿ
ಹಲ್ಲುಗಳಾಗಿ ಹೊಟ್ಟೆಯಾಗಿ ನಿದ್ದೆಯಾಗಿ ದೊಡ್ಡ
ಆಕಳಿಕೆಯಾಗಿ ಇದ್ದಾರೆ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)