ಏನೋ ಗಾನ ಚಿಮ್ಮುತಿದೆ ಅಂಗಾಂಗದಲಿ
ಏಕೋ ಮನ ಸೇರದು ದಿನದ ನಡೆಯಲಿ

ಸ್ವರಗಳೇರಿ ಇಳಿಯುತಿವ ತಿಳಿಗಾಳಿಯಲಿ,
ಮಧುರಗಂಧ ಹಬ್ಬುತಿದೆ ಮನದ ವನದಲಿ

ಎಂಥ ನೃತ್ಯ ಒಲಿಯಿತಿಂದು ನನ್ನ ಚಲನೆಗೆ?
ಕಲಿಯದೇನೆ ತಿಳಿಯುತಿದೆ ಎಲ್ಲ ಹೊಸ ಬಗೆ!

ಮನಸಿನಾಳದಿಂದ ಏನೋ ಆಸೆ ಚಿಮ್ಮಿದೆ
ನನ್ನ ನಾನೆ ಕೊಟ್ಟು ಕೊಳುವ ಬಯಕೆ ಕೆರಳಿದೆ

ಯಾರಿಗಂದು ಬೆಳೆದೆ ಇಂಥ ಮಧುರ ನಂದನ
ಹೋಗಲೆ ದನಿ ಕರೆವ ಕಡೆಗೆ ಮೀರಿ ಬಂಧನ?

ಎಲ್ಲಿರುವನೊ ನನ್ನ ಕರೆವ ಚದುರ ನಾಯಕ
ಎಲ್ಲೆಲ್ಲೂ ಗಾನ ಹರಿಸಿ ನಡೆದ ಗಾಯಕ?

ಬಾರೊ ನೀರ ನಿನ್ನ ಕೈಯ ಮುರಳಿಯಾಗುವೆ
ಮಧುರಗಾನದಲೆಯ ಚಿಮ್ಮಿ ಜಗವ ತೊಯಿಸುವೆ.

***