ಯಾವ ಕಾಣದ ಭಾವಸೂತ್ರ ಅರಿವನು ಮೀರಿ
ಕಟ್ಟಿ ಎಳೆಯಿತು ನನ್ನ ನಿನ್ನ ಬಳಿಗೆ?
ಏನೋ ಕೇಳಿತು ನಿನ್ನ ಕಣ್ಣು, ಮಾವಿನ ಹಣ್ಣು
ಕಳಚಿ ಬಿದ್ದಿತು ನನ್ನ ಮಡಿಲಿನೊಳಗೆ

ಮುಗಿಲು ಸಾಗುವ ಲಯಕೆ ತೂಗಿ ಬೆಳೆಯಿತು ಬಯಕೆ
ಮಂದಾರ ಬೀದಿಯಲಿ ದುಂಬಿಗಾನ
ನರನಾಡಿಯಲ್ಲೆಲ್ಲ ಏನೊ ಚಿಗುರಿನ ಸುಗ್ಗಿ
ಮರ ಬಳ್ಳಿ ಹೂ ಮರೆಗೆ ಮದನಬಾಣ

ಎಲ್ಲವೂ ಹುಸಿಯಾಗಿ ಪ್ರೀತಿಯೇ ಉಸಿರಾಗಿ
ನೆನಪೆಲ್ಲ ಬಿಸಿಯಾಗಿ ನಿನ್ನ ಧ್ಯಾನ
ಅಂದಿನಿಂದಿಂದಿಗೂ ಬದುಕೆಲ್ಲ ಕನವರಿಕೆ
ನೀನೆ ಕನಸಿನ ಸೂತ್ರ ನನ್ನ ಪ್ರಾಣ

***********