ಕೆಲವು ತೋಳ ಹದ್ದು ಹೆಗ್ಗಣ ಹಂದಿ ಕಿರುಬಗಳು
ಸಾವಿರ ಲಕ್ಷ ಕೋಟಿಗಟ್ಟಲೆ ಹರಾಮಿ ಹಣ ನುಂಗುತ್ತ
ಬಂಗಲೆ ಕಾರು ಫರ್ಮು ಫಾರ್ಮು ಫ್ಯಾಕ್ಟರಿಗಳ ಬೆಳೆಸುತ್ತ
ತಲೆಹಿಡುಕ ರಾಜಕಾರಣದ ವೇಷದಲ್ಲಿ
ನಾಯಿಗೆ ಒಣರೊಟ್ಟಿ ಚೂರು ಹಾಕಿದಂತೆ
ಬಡಬಗ್ಗರಿಗೆ ಬಟ್ಟೆ ಬರೆ ಹಂಚುತ್ತ
ಬೊಜ್ಜು ಬೆಳೆಸುವ ಭಂಡದಾರಿಗಳನ್ನು
ರಾಜ ಮಾರ್ಗಗಳನ್ನಾಗಿ ಮಾಡಿಕೊಳ್ಳುತ್ತ
ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತ
ದೇಶದ ಜನತೆಯ ಸುಲಿಯುತ್ತ
ಪಾತಾಳಕ್ಕೆ ನೂಕುತ್ತ ಸುಲಿಯುತ್ತ ನೂಕುತ್ತ
ಬೀದಿ ಕೊಳಚೆ ರೊಚ್ಚೆ ಪಾಲು ಮಾಡುತ್ತಿರುವವರು

ವೈಭವೋಪೇತ ಗುಡಿ ದೇವರುಗಳಿಗೆ
ಮಹಾಮಂಗಳಾರತಿ ಮಹಾಭಿಷೇಕ
ಯಜ್ಞಯಾಗಾದಿಗಳ ಮಾಡಿಸುತ್ತ
ಪುಣ್ಯ ಗಳಿಸಿಕೂಳ್ಳುವುದನ್ನು ನೋಡಿದಾಗ
ಕೈಯೊಡ್ಡಿದ ಎಲಬು ಕೈಗಳ ಮೇಲೆ
ಐದು ಪೈಸೆ ಎಸೆದು
ಧರ್ಮ ಮಾಡುವುದನ್ನು ನೋಡಿದಾಗ
ಈ ಭಿಕ್ಷ ಲಕ್ಷ ಕೋಟಿ ಕೋಟಲೆಗಳ ಒಳಗಡಗಿರುವ
ಲೆಕ್ಕಾಚಾರ
ನಮ್ಮಂಥ ಕೋಟಿಕೋಟಿ ಪಾಮರರಿಗೆ ಸಿಗುವುದಿಲ್ಲ
ಈ ರೊಕ್ಕದ ಅಕ್ರಾಳ ವಿಕ್ರಾಳವಾದ
ಲೆಕ್ಕದ ಲೆಕ್ಕಾಚಾರ ಸಿಗುವುದಿಲ್ಲ
****************************
12-4-86

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)