ಕಣ್ಣೊಳಗೆ ನೋಡಿ ಕುಲುಕಾಟವಾಡಿ
ಮಣ್ಣೊಳಗೆ ಬೆರೆವ ತವಕ
ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ
ತಣ್ಣಗಿದೆ ಎಮ್ಮೆ ಕುಡುಕ

ತಿಂದಿದ್ದ ಒಂದು ಬೆಂದಿದ್ದೆ ಒಂದು
ನಿಂದಿದ್ದೆ ನಿಲುವು ಗೆಲುವು
ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ
ಕಂದಿದ್ದು ಚಿಗುರು ನಲಿವು

ಆಗಸಕೆ ಏರಿ ಚಿಕ್ಕೆಗಳ ಸಾರಿ
ಸೋಗಿನಲಿ ಬೀರಿ ಮೀರಿ
ಬಾಗಿಲನು ಬಡಿದು ನಿದ್ದೆಯಲಿ ನಡೆದು
ಬೇಗೆಯಲಿ ತೊರೆದು ದಾರಿ

ಕಳಸದಲಿ ಪಾನ ಬಳಸದೆಯೆ ಮೌನ
ತುಳುಕಾಡದಂಥ ಬಿಗುವು
ತಳಕಿತ್ತಿ ಬುಟ್ಟಿ ಚೆಲ್ಲಾಡೆ ಬುತ್ತಿ
ಹಳಸಿದ್ದು ನಾಯಿ ನಗುವು

ಓಡುತಿವೆ ಮೋಡ ಬೀಡಿ ಹೊಗೆ ಕೂಡ
ನಾಡಿಯಲಿ ಕಾಲ ಮಾನ
ಬಾಡುತಿಹ ಹೂವು ಬಿದ್ದಿರಲು ಕೆಳಗೆ
ಕಾಡುತಿದೆ ಸ್ಥಾನ ಮಾನ

ನನಗಾಗಿ ನಾನು ನಿನಗಾಗಿ ನೀನು
ಸೊಣಗನದೆ ಬಣಗು ಮೂಗು
ಮನ ಬೆತ್ತಲಾಗೆ ದಿನ ಕತ್ತಲಾಗೆ
ಘನವಾಯ್ತು ಹಗಲ ಸೋಗು

ಎತ್ತೆತ್ತಲಿಂದೊ ಸಂದೇಶ ಬಂದು
ಹತ್ತಿಲೇ ಗುಯ್ಯಿಗುಡಲು
ಹೊತ್ತಲೇ ಇಲ್ಲ ವಿದ್ಯುತ್ತು ಮೈಗೆ
ಮತ್ತೆಲ್ಲೋ ತರಗು ಸುಡಲು

ಭೂಕೇಂದ್ರದಿಂದ ತರತರವ ದಾಟಿ
ಸೋಕುತ್ತ ಬಿಡಲು ಚರ್ಮ
ಆಕಾಶದಿಂದ ನರನರವ ಮೀಟಿ
ಜೀಕುತಿದೆ ದೇವ ಮರ್ಮ

ಮೈಯನ್ನು ಮಣಿಸಿ ಬಾಯನ್ನು ತಣಿಸಿ
ಬೀಯಗವು ಆಯವ್ಯಯವು
ಸಾಯದಿದೆ ಸಾವು ಬದುಕದಿದೆ ಬದುಕು
ನೋಯದಿಹ ಇಹದ ದ್ವಯವು
*****