ಮೈ ಸೋತು ಬಳಲಿದೆ; ನಿಸರ್ಗಸಂಚಾರಿ ಮನ
ಒಡಲಿಗಿಂತಲು ಜಡವು; ಹೆಪ್ಪುಗಟ್ಟಿದ ಕೊಳವು!
ನಿದ್ದೆ ಎಚ್ಚರಗಳ ವಿಚಿತ್ರ ಮೇಳದ ಸೆಳವು!
ಮುಚ್ಚುಗಂಗಳ ಬಿಚ್ಚಲೂ ಕಷ್ಟ; ಎದೆಯ ಬನ-
ದೊಳದಾವುದೋ ಕಿಚ್ಚು- ಹೊಗೆ ಕಿಚ್ಚು! ಈ ದೇಹ
ಬೆವರಿ ಗಾಳಿಯ ತೆಳುವು ಪೊರೆ ಚುಂಬಿಸಿದೊಲಾಗೆ
ಒಂದು ಚಣ, ಅಷ್ಟೆ, ಏನೋ ತಂಪು! ಸರಿ ಬೇಗೆ
ಮೊದಲು; ತಣ್ಣಗೆ ಕೊರೆವ ಸಾವು ಬಿಸಿ? ಸತ್ತೆ! ಹಾ!
`ಸತ್ತೆ’? ಅಯ್ಯೋ ನಿನಗೆ ಕರುಣೆಯುಂಟೇ? ಹುಚ್ಚು!
ಮತ್ತೆ ನರಳಿಸಲೆಬ್ಬಿಸಿಹೆಯೆಂದು ನಾನರಿಯ-
ದವನೆ? ತಡವೇಕೆ? ಹುಂ! ಮೆತ್ತನೆಯ ಹಾಸುಗೆಯ
ಒರಟೆನಿಸು; ತಲೆಯ ತಿರುಗಿಸು; ಕಣ್ಣ, ಬಿಡೆ, ಮುಚ್ಚು!
ಎನ್ನನೊದ್ದಾಡಿಸು; ನಿರಾಸೆ ಹೆರು ಕರಗೆ ಕೆಚ್ಚು!
ಬಳಲಿಕೆಯೆ! ಬಳಲಿಕೆಯೆ ಇಲ್ಲದೊಲು ಅಳಲ ಚುಚ್ಚು!
*****








