ಗಿರಿ ಕಣಿವೆ ಕಂದರದಿ ಝರಿ ಜಾಣ್ಮೆ ಜಾರಿ,
ಸುತ್ತುತ್ತ ಸರಿಯುತ್ತ ತಂಬೆಲರ ಸೇರಿ;
ವಿಸ್ತರದ ಹಚ್ಚನೆಯ ಹಳುವವನು ಹೂಡಿ,
ಏರುವುದು, ಜಾರುವದು; ಜಾಣ್ಮೆಯನು ತೋರಿ
ಚಿಗಿಚಿಗಿದು, ನೆಗೆನೆಗೆದು, ಜರಗಿನಲಿಸಾಗಿ
ಕೊಪ್ಪಲಿನ ಒಕ್ಕಲಲಿ ಕೌಶಲವಹಾಡಿ
ಹರಿಯುವುದು, ಸರಿಯುವುದು ರಾಗದಲಿ ಮೊಳಗಿ.
ಝರಿ ಜಾಣ್ಮೆ ಜಾರಿತ್ತು ವೈಭವವ ನಲಿಸಿ,
ಹಳುವದಲಿ ಹೂಡಿತ್ತು ಹಚ್ಚನೆಯ ಬೆಳಗಿ;
ಮೃಗಪಕ್ಷಿ ಪ್ರೇಕ್ಷೆಯಲಿ ಸಾರಿದವು ಕೆದರಿ,
ಔನ್ನತ್ತದ ಮುಗಿಲನ್ನು ಪಾಡಿದವು ವಲಸಿ;
ರವಿಕಿರಣಕಾಂತಿಯಲಿ ರಂಜಿಸಿತು ಪ್ರಕೃತಿ,
ಸೃಷ್ಟಿಯಾತೆರೆಯಲ್ಲಿ ಮೆರಗಿ, ಮೆರಗಿ.
*****








