ಇರುಳ ನಡುವೆ ಸದ್ದು ನಿಂತ ನಿದ್ದೆ ಹೊತ್ತು- ನಿಮ್ಮ ನೆನಹು
ಹರಿವುವೆತ್ತ ಹೊಳೆಯುತ?
ಮರುಳರೆಣಿಕೆಯಂತೆ, ಸಾವು ಸೆರೆಯ ಕೆಡಹಿದೆನ್ನ ಬಳಿಯೆ
ಒಮ್ಮೆ ಎಂತು ನಮ್ಮ ನೊಲಿದ! ಒಲಿವವನನೆಂತು ನಾವು!
ಎನುತ ಮರುಗುತ?
ಆಹ! ಒಲಿದೆ, ಒಲಿದಿರಂತು! ನೀವು ನನ್ನನರಿದುದಿಂತು!
ನಂಟೆ ನನಗೆ ನೆಲದಲಿ
ಮೋಹಮುರಿಯದಲಸುವರಲಿ, ಸೊಗಸುವರಲಿ, ಹೆಣ್ಣಿಗಿರಲಿ?
ಗುರಿಯೆ? ಹುರಿಯೆ? ಕೆಚ್ಚೆ? ನೆಚ್ಚೆ? ಅವರ ಹುಚ್ಚು ಹರಟೆ, ನಾನೆ?
ಆರು ಕಾಣಿರೆ?
ಎಂದು ಬೆನ್ನ ತೋರದವನು; ಎದೆಯ ಕೊಟ್ಟು ನುಗ್ಗಿದವನು;
ಮುಗಿಲು ಕವಿಯೆ ಜಗಿಯನು;
ಸರಿಯೊಲೆದರು, ತಪ್ಪು ಗೆಲುವುದೆಂದು ಕನಸುಗಾಣದವನು;
ಬೀಳು ನಮಗೆ, ಏಳುವುದಕೆ; ಸೋಲು, ಕಲಿತು ಕಾದುವುದಕೆ;
ಒರಗು, ಎಚ್ಚರೆಂಬನು.
ಇಲ್ಲ! ಆಳು ಹಗಲ ನಡುವೆ ಸಂಭ್ರಮದಲಿ ದುಡಿವ ಹೊತ್ತು,
ಕಾಣದವನ ಹರಸಿರಿ!
ನುಗ್ಗು ಮುಂದೆ ಎಂದು ಹೇಳಿ ಎದೆಯ, ಬೆನ್ನ, ನೇರ ತಾಳಿ;
ಹೋರು, ಮೀರು ಎಂದು ಕೂಗಿ – ಗೆಲ್ಲು, ಬದುಕು, ಏಳ್ಗೆಯಾಗಿ
ಇಲ್ಲಿಯಂತೆ ಅಲ್ಲಿಯೂ!
*****
BROWNING : Epilogue to Asolando






