ಬರಿಗೈಲಿ ಬಂದಿಲ್ಲ, ಮಲ್ಲಿಗೆಯ ತಂದೇನ,
ಮುಗಿಲವರು ಮುಡಿವ ಮಲ್ಲೀಗೆ!
ಮುಗಿಲವರು ಮುಡಿವ ಮಲ್ಲೀಗೆ, ಏ ನಲ್ಲೆ!
ಮುಗಿದಿಲ್ಲ ಪಯಣವಿಲ್ಲೀಗೆ!
ಕತ್ತಲಲಿ ಕಾಲ್ತೊಡಕಿ, ಮೋಡದಲಿ ಮೈ ತೊಡಕಿ,
ತೊಳಲಾಡಿಸಿರಲು ಮಾರೋಗ,
ತೊಳಲಾಡಿಸಿರಲು ಮಾರೋಗ, ಏ ನಲ್ಲೆ!
ಎದುರು ಬಂತೊಂದು ಹೊಸ ಯೋಗ!
ವಸಿಷ್ಠಋಷಿ ಬಂದಾ ನಿಂದವಳರುಂಧತಿ,
ನಿಲ್ಲಿಸುತ ನನ್ನ ಕೈನೀಡಿ,
ನಿಲ್ಲಿಸುತ ನನ್ನ ಕೈನೀಡಿ, ಏ ನಲ್ಲೆ!
ಕರುಣಿಸಿದರೆನ್ನ ಗತಿ ನೋಡಿ.
‘ನಿನ್ನ ದೈವದ ಶಿಲ್ಪಿ,-ಅಹುದು ನೀನೇ ಕಂದ’
ಎಂದಿತ್ತರೊಂದು ಮಲ್ಲಿಗೆಯ,
ಇತ್ತರಿನ್ನೊಂದು ಮಲ್ಲಿಗೆಯ ಏ ನಲ್ಲೆ!
“ತಿಳಿದಿರವೆ ಬಾಳಿನಾನಂದ!”
“ನಿನ್ನ ನಲುಮೆಯ ನೀನೇ! ನಿನ್ನ ನೇಹವು ನೀನೇ!
ಹಿಂದುಮುಂದೆಲ್ಲ ನಿನ ಸೊತ್ತು
ಹಿಂದುಮುಂದೆಲ್ಲ ನಿನ ಸೊತ್ತು!” ಏ ನಲ್ಲೆ!
ಎ೦ದರವರಾರಿಗಿದು ಗೊತ್ತು!
“ಸ್ಫೂರ್ತಿಗೆನೆ ಶರಣಾಗೋ! ಕಾರುಣ್ಯಮೂರ್ತಿಗಳ,
ಧ್ಯಾನದಲಿ ಕಾಣು ಮುಕ್ತರನು!
ಧ್ಯಾನದಲ್ಲಿ ಕಾಣು ಮುಕ್ತರನು” ಏ ನಲ್ಲೆ!
ಕಾಣೆಂದರೆಲ್ಲ ಭಕ್ತರನು!
“ಇಳೆಗೊಂದು ಶಾಸನವೂ ಹೊಳೆಗೊಂದು ಶಾಸನವೂ
ಆತುಮಕದೊಂದು ಶಾಸನವು!
ಆತುಮಕದೊಂದು ಶಾಸನವು” ಏ ನಲ್ಲೆ!
‘ತಿಳಿಯೆಂದರಿದೆ ಉಪಾಸನವು’
ಅವರಿತ್ತ ಮಲ್ಲಿಗೆಗೇ ಮುಗಿದಿತು, ಯಾತನೆಯು,
ಇಡಿದಿತ್ತು ಕಂಪು ಹೊರವೊಳಗ!
ಇಡಿದಿತ್ತು, ಕಂಪು ಹೊರವೊಳಗ, ಏ ನಲ್ಲೆ!
ಹಿಗ್ಗಲಿದಕೆನ್ನ ಎದೆಬಳಗ!
ಮಲ್ಲಿಗೆಯ ಬೆಳಕೀಗೆ ಬೆಳ್ಳ ಬೆಳಗಾಗಿತ್ತ!
ಚಿಗಿಯೀತು ನನ್ನ ಎದೆಕೊನರು:
ಚಿಗಿಯೀತು ನನ್ನ ಎದೆಕೊನರು: ಏ ನಲ್ಲೆ!
ಆಗೋಣ ಮುಕ್ತಿಕೇತನರು!
*****








