ಮೂಲ: ಟಿ ಎಸ್ ಎಲಿಯಟ್
“ಶಬ್ದ (ಪದ) ವೆನ್ನುವುದು ಎಲ್ಲರಿಗೂ ಒಂದೇ ಆಗಿದ್ದರೂ ಬಹಳ ಜನ ಅದರ ಬಗ್ಗೆ ತಮ್ಮದೇ ಆದ ವಿಶಿಷ್ಟ ತಿಳುವಳಿಕೆ ಉಳ್ಳವರಂತೆ ಬಾಳುತ್ತಾರೆ”
“ಮೇಲೆ ಏರುವ ದಾರಿ ಮತ್ತು ಕೆಳಗೆ ಇಳಿಯುವ ದಾರಿ ಎರಡೂ ಒಂದೇ ಆಗಿವೆ೨
-ಹಿರಾಕ್ಲಿಟಸ್
ಭೂತಕಾಲ ವರ್ತಮಾನ ಎರಡೂ ಬಹುಶಃ
ಭವಿಷ್ಯತ್ ಕಾಲದ ಬಸಿರಲ್ಲಿವೆ,
ಭವಿಷ್ಯತ್ತು ಭೂತದೊಳಗೇ ಹುದುಗಿದೆ
ಎಲ್ಲ ಕಾಲವೂ ಸದಾ ವರ್ತಮಾನವಾಗಿದ್ದಲ್ಲಿ
ಕಾಲವೆಲ್ಲಾ ಅಪರಿಹಾರ್ಯ.೩
ಏನಾಗಬಹುದಿತ್ತು ಎಂಬ ಕಲ್ಪನೆಯೆಲ್
ನಮ್ಮ ಊಹಾಪೋಹ ಲೋಕದಲ್ಲಿ
ಎಂದೆಂದಿಗೂ ಒಂದು ಸಂಭವನೀಯವಾದ
ಕೇವಲ ಅಮೂರ್ತ ಮಾತ್ರ.
ಏನಾಗಬಹುದಿತ್ತೊ, ಏನಾಗಿದೆಯೊ ಅವು
ಬೆರಳು ಮಾಡುತ್ತವೆ ಒಂದೇ ಒಂದು ತುದಿಗೆ,
ಯಾವತ್ತೂ ವರ್ತಮಾನವಾದದ್ದರೆಡೆಗೆ.
ಹೆಜ್ಜೆ ಸಪ್ಪಳ ಪ್ರತಿಧ್ವನಿಸುತಿವೆ ನೆನಪಿನಲ್ಲಿ
ನಾವು ತಿಳಿಯದೆ ಬಿಟ್ಟ ಹಾದಿಯುದ್ದಕ್ಕೆ
ನಾವು ತೆರೆಯದ ಬಿಟ್ಟ ಕದದ ಕಡೆಗೆ, ಗುಲಾಬಿ
ತೋಟದೆಡೆಗೆ.೪ ಈಗ ನನ್ನ ಮಾತೂ ಕೂಡ
ಹೊಳಲುಗೊಡುತಿದೆ ನಿಮ್ಮ ಮನದಲ್ಲಿ.
ಆದರೆ
ಗುಲಾಬಿದಳಗಳ ಮೇಲೆ ಕೂತ ಧೂಳನ್ನು
ಯಾಕೆ ಕೆದಕುವುದೊ ನಾನು ತಿಳಿಯೆ.
ತೋಟದೊಳಗಿವೆ ಬೇರೆ
ಪ್ರತಿಧ್ವನಿಗಳು. ಅವನ್ನು ಹಿಂಬಾಲಿಸೋಣವೇ ?
ಹಕ್ಕಿ ಹೇಳಿತು. ಬೇಗ, ಬೇಗ ಹಿಡಿಯಿರಿ ಅವನ್ನು
ಮೂಲೆ ಬಳಿಯಲ್ಲಿ, ಮೊದಲ ಗೇಟನ್ನು ದಾಟಿ
ನಮ್ಮ ಮೊದಲ ಪ್ರಪಂಚಕ್ಕೆ ಹಕ್ಕಿಯ ವಂಚಕ ದನಿಯ
ನೆಚ್ಚಿ ಸಾಗೋಣವೇ, ಮೊದಲ ಲೋಕದೊಳಕ್ಕೆ?
ಅಲ್ಲಿದ್ದರವರು ಘನವಂತರು, ಅದೃಶ್ಯರಾಗಿ,
ಉದುರಿದೆಲೆ ಮೇಲೆ ಸಾಗುತ್ತ ಹಗುರಾಗಿ. ಪುಟ್ಟ
ಪೊದೆಯಲ್ಲಿ ಹುದುಗಿದ್ದ ಅಶ್ರುತ ಸಂಗೀತಕ್ಕೆ
ಪ್ರತ್ಯುತ್ತರವ ನೀಡಿ ಕೂಗಿ ಕರೆಯಿತು ಹಕ್ಕಿ,
ದಾಟಿಹೋದವು ಕಣ್ಣ ಕಿರಣ ಅದೃಶ್ಯವಾಗಿ,೫
ಯಾರೋ ನೋಡಿದ್ದಂತೆ ಕಂಡವು ಗುಲಾಬಿ.
ಅಲ್ಲಿದ್ದರವರು, ಅತಿಥಿಗಳಾಗಿ ನಮಗೆ ಸಮ್ಮತರಾದವರು,
ಸಮ್ಮತಿಯ ನೀಡುತ್ತ. ಹಾಗೇ ನಡೆದೆವು ನಾವು,
ಅವರೂ ಕ್ರಮವತ್ತಾದ ವಿನ್ಯಾಸದಲ್ಲಿ, ಖಾಲಿ
ಹಾದಿಯುದ್ದಕ್ಕೆ ಬಾಕ್ಸ್ ಪೊದೆಯ ವೃತ್ತದೊಳಕ್ಕೆ
ಒಣಗಿದ್ದ ತಳದ ಕೊಳವನ್ನು ಕಾಣುವುದಕ್ಕೆ.
ಒಣಗಿ ಹೋಗಿದ್ದ ತಳ, ಒಣಗಿದ್ದ ಕಾಂಕ್ರೀಟು, ಕಂದು ಅಂಚು.
ತುಂಬಿಕೊಂಡಿತು ಕೊಳ ಬಿಸಿಲೇ ನೀರಾಗಿ ಹರಿದು
ಮೇಲಕ್ಕೆದ್ದವು ಕಮಲ ನಿಧನಿಧಾನವಾಗಿ,
ಮೇಲು ಮೈ ಹೊಳೆದಿತ್ತು ಬೆಳಕಿನ ಹೃದಯ೬ ತೆರೆದು.
ನಮ್ಮ ಹಿಂದಿದ್ದರವರು, ಕೊಳದಲ್ಲಿ ಪ್ರತಿಬಿಂಬ,
ಹಾದು ಹೋಯಿತು ಒಂದು ಮೋಡ, ಕೂಡಲೆ ಕೊಳ ಪೂರ್ತಿ ಖಾಲಿ.
ಹೋಗು ಎಂದಿತು ಹಕ್ಕಿ, ಎಲೆಗಳ ತುಂಬ ಮಕ್ಕಳು,
ಅಡಗಿದ್ದರೆಲ್ಲ ನಗು ತಡೆದು ಸಂಭ್ರಮದಲ್ಲಿ.
ಹೋಗು, ಹೋಗು, ಹೋಗು ಮತ್ತೆ ಕೂಗಿತು ಹಕ್ಕಿ
ತಾಳಲಾರ ಮರ್ತ್ಯ ಹೆಚ್ಚು ವಾಸ್ತವವನ್ನು.
ಭೂತಕಾಲ ಮತ್ತು ಭವಿಷ್ಯತ್ತು ಎರಡೂ
ಏನಾಗಬಹುದಿತ್ತೊ, ಏನಾಗಿದೆಯೊ ಎರಡೂ
ಬೆರಳು ತೋರುತ್ತವೆ ಆ ಒಂದೆ ತುದಿಗೆ
ಯಾವತ್ತೂ ವರ್ತಮಾನವಾದದ್ದರೆಡೆಗೆ.
II
ಬೆಳ್ಳುಳ್ಳಿ ನೀಲಮಣಿ ಗಾಲಿಯಚ್ಚನ್ನು
ಕೆಸರೊಳಗೆ ಬಿಗಿ ಹಿಡಿದು ನಿಲಿಸುತ್ತವೆ.೭
ನೆತ್ತರಲ್ಲಿ ನಿನದಿಸುತ್ತಿರುವ ತಂತಿ
ನೆಲೆ ನಿಂತ ಗಾಯದ ಕಲೆಗಳ ಕೆಳಗೆ ಹಾಡುತ್ತ
ಮರೆತ ಯುದ್ಧಕ್ಕೆ ಹೊಂದಿಕೊಳ್ಳುತ್ತದೆ.
ಅಪಧಮನಿಯುದ್ದಕ್ಕೂ ನಡೆವ ನೃತ್ಯ ಮತ್ತು
ಸುತ್ತಿ ಹಾಯುವ ದುಗ್ಧರಸದ ಚಲನೆ
ನಕ್ಷತ್ರ ಚಲನೆಯಲ್ಲಿ ಕಾಣುತ್ತವೆ
ಮರದಲ್ಲಿ ಬೇಸಿಗೆಗೆ ಏರುತ್ತವೆ.
ಕಡದ ಎಲೆಗಳ ಹೂಳೆವ ಬೆಳಕಿನಲ್ಲಿ-ನಾವು
ತೂಗುವ ಮರಗಳ ಮೇಲೆ ಸಾಗುತ್ತೇವೆ.
ಒದ್ದೆ ನೆಲದ ಮೇಲೆ, ಇಲ್ಲಿ ಕೆಳಗೆ
ಕಾಡುಹಂದಿ ಬೇಟೆನಾಯಿ ಎರಡೂ
ತಮ್ಮ ತಮ್ಮ ಬದುಕಿನೊಂದು ಕ್ರಮವ
ಬಾಳುತ್ತವೆ ಈಗಲೂ ಎಂದಿನಂತೆ
ತಾರೆಗಳ ಮೇಳಕ್ಕೆ ಹೊಂದುವಂತೆ.
ತಿರುಗುವ ಜಗತ್ತಿನ ಸುಸ್ಥಿರ ಬಿಂದುವಿನಲ್ಲಿ೮
ಮಾಂಸಯುತವೂ ಅಲ್ಲ ಮಾಂಸರಹಿತವೂ ಅಲ್ಲ;
ಎಲ್ಲಿಂದಲೂ ಅಲ್ಲ ಯಾವ ಕಡೆಗೂ ಅಲ್ಲ;
ಸುಸ್ಥಿರ ಬಿಂದುವಿನಲ್ಲಿ, ಅಲ್ಲೆ ನೃತ್ಯ.
ಸೆರೆಯಾದುದೂ ಅಲ್ಲ ಚಲಿಸುವಂಥದೂ ಅಲ್ಲ.
ಭೂತ ಭವಿಷ್ಯತ್ತುಗಳ ಸಂಗಮದ ಬಿಂದು,
ಸ್ಥಾಯಿಸ್ಥಿತಿ ಎಂದದನ್ನು ಕರೆಯಬೇಡಿ;
ಯಾವುದರಿಂದಲೂ ಅಲ್ಲ ಯಾವುದರೆಡೆಗೂ ಅಲ್ಲ,
ಆರೋಹಣವೂ ಅಲ್ಲ ಅವರೋಹಣವೂ ಅಲ್ಲ
ಆ ಬಿಂದು ಹೊರತು, ಆ ಸ್ಥಿರ ಬಿಂದು ಹೊರತು
ನೃತ್ಯವೆನುವುದೆ ಇಲ್ಲ, ಆದರೂ ಅಲ್ಲಿ ನೃತ್ಯವಷ್ಟೇ ಇದೆ.
ನಾವೂ ಕೂಡ ಅಲ್ಲೆ, ಆ ಅಲ್ಲೆ ಇದ್ದೇವೆ. ಅಷ್ಟು ಮಾತ್ರವೆ ನಾನು
ಹೇಳಬಲ್ಲೆ,
ಎಲ್ಲಿ ಎನ್ನುವುದನ್ನು ಹೇಳಲಾರೆ, ಎಲ್ಲಿವರೆಗೆ ಎಂದೂ ಹೇಳಲಾರೆ;
ಹಾಗೆ ಹೇಳಿದರೆ ಅದನ್ನು ಕಾಲದೊಳಗಿಟ್ಟಂತೆ.
ಫಲದ ಬಯಕೆಯ ನೀಗಿ ಪಡೆದ ಒಳಸ್ವಾತಂತ್ರ್ಯ,
ಎಲ್ಲ ನೋವುಗಳಿಂದ ಕರ್ಮಗಳಿಂದ, ಬಿಡುಗಡೆ,೯
ಒಳಗಿನ ಹೊರಗಿನ ಎಲ್ಲ ಒತ್ತಡದಿಂದ ಮುಕ್ತಿ,
ಪ್ರಜ್ಞೆಯ ಕೃಪೆಯೇ ಸುತ್ತ ಬಳಸಿ ನಿಂತಿರುವ,
ಸ್ಥಿರವಿದ್ದೂ ಚಲಿಸುವ, ಶುಭ್ರಪ್ರಕಾಶದ೧೦
ನಿಶ್ಚಲಿತ ಆನಂದದ ಅತ್ಯುನ್ನತಿ,೧೧ ಯಾವುದೂ ಹೊರಗುಳಿಯದೇಕಾಗ್ರತೆ;
ಹೊಸ ಹಳೆ ಜಗತ್ತೆರಡೂ ಸುಸ್ಪಷ್ಟವಾಗಿರುತ್ತ
ಆಂಶಿಕ ಸಮಾಧಿಯ ಆನಂದ ಪೂರ್ಣತೆಯಲ್ಲಿ
ಅದರ ಆಂಶಿಕ ಭೀಕರತೆಯ ಪರಿಹಾರ.೧೨
ಆದರೂ ನಿತ್ಯವ್ಯತ್ಯಾಸಕ್ಕೆ ತುತ್ತಾದ ಮೈಯ ದೌರ್ಬಲ್ಯದಲ್ಲಿ
ಹೆಣೆದಿರುವ ಭೂತ ಭವಿಷ್ಯತ್ತುಗಳ ಸಂಕೋಲೆ
ರಕ್ತಮಾಂಸದ ಮಣ್ಣಪಿಂಡ ತಾಳಲು ಬರದ ನಾಕ ನರಕಗಳಿಂದ
ರಕ್ಷಿಸುತ್ತದೆ ಇಡೀ ಮರ್ತ್ಯಕುಲವನ್ನು
ಭೂತಕಾಲ ಮತ್ತು ಭವಿಷ್ಯತ್ತು
ಕೊಂಚ ಪ್ರಜ್ಞೆಯನಷ್ಟೆ ಹಾಯಲು ಬಿಡುತ್ತವೆ.
ಪ್ರಜ್ಞೆಯಿದ್ದಾಗ ಕಾಲದೊಳಗೆ ಇದ್ದಂತಲ್ಲ.೧೩
ಗುಲಾಬಿತೋಟದ ಆ ಮುಹೂರ್ತಗಳು, ಭೋರೆಂದು
ಮಳೆಸುರಿವ ಬಳ್ಳಿಮನೆ ಗಳಿಗೆಗಳು, ಹೊಗೆಯಿಳಿವ
ಹೊತ್ತಲ್ಲಿ ಗಾಳಿ ನುಗ್ಗುವ ಕ್ರೈಸ್ತಮಂದಿರದ
ಕ್ಷಣಗಳೇನಿದ್ದರೂ ಭೂತ ಭವಿಷ್ಯತ್ತು ಕೋದುಕೊಂಡಿರುವ
ಕಾಲದೊಳಗಡೆ ಮಾತ್ರ ಸರಿಸಬರುವಂಥವು.೧೪
ಕಾಲದಿಂದಲೆ ಕಾಲವನ್ನು ಗೆಲ್ಲಲು ಸಾಧ್ಯ.
III
ಇಲ್ಲಿದೆ ಒಂದು ಅಸಮಾಧಾನದ ನೆಲೆ
ಕಳೆದ ಕಾಲ ಮತ್ತು ಬರುವ ಕಾಲ ಮಬ್ಬು ಬೆಳಕಲ್ಲಿವೆ:
ಆಕೃತಿಗೆ ಸ್ಪಷ್ಟ ನಿಶ್ಚಲತೆ ನೀಡುತ್ತ
ನೆರಳನ್ನೂ ಸದ್ಯಕ್ಕೆ ಚೆಲುವಾಗಿಸುತ್ತ
ನಿಧಾನ ಸುತ್ತುತ್ತಲೇ ನಿತ್ಯವನ್ನು ಧ್ವನಿಸುವ
ಹಗಲ ಬೆಳಕೂ ಅಲ್ಲ; ಅಥವಾ ವ್ರತಸ್ಥವಾಗಿ
ಇಂದ್ರಿಯಾತ್ಮಕವನ್ನು ಬರಿದು ಮಾಡಿ
ಪ್ರೀತಿಯನ್ನು ಕಾಲದಿಂದತ್ತಿ ಶುಚಿಗೊಳಿಸಿ
ಆತ್ಮವನ್ನು ಶುದ್ಧಗೊಳಿಸುವ ಕತ್ತಲೂ ಅಲ್ಲ.೧೫
ತುಳುಕುವಂಥದೂ ಅಲ್ಲ ಪೂರ ಬರಿದೂ ಅಲ್ಲ.
ಮತ್ತೆ ಮತ್ತೆ ಚಿತ್ತ ಭ್ರಮಣಕ್ಕೊಳಗಾಗಿ
ಬಳಲಿರುವ ಕಾಲಹತ ಮುಖಗಳ ಮೇಲೆ
ಒಂದು ಕಿರುಮಿನುಗು, ಭ್ರಮೆಗಳೇ ತುಂಬಿರುವ
ಚಿತ್ತೈಕಾಗ್ರತೆ ಇರದೆ ಬಾತು ಜಡಗೊಂಡಿರುವ
ಮನುಷ್ಯರನ್ನು ಮತ್ತು ಕಾಗದದ ತುಂಡುಗಳನ್ನು
ಅನಾದಿ ಅನಂತಕಾಲ ಬೀಸುತ್ತಲೇ ಇರುವ
ಚಳಿಗಾಳಿ ಗಿರಗಿರನೆ ಸುತ್ತಾಡಿಸುತ್ತದೆ
ಸ್ವಸ್ಥವಿಲ್ಲದ ಶ್ವಾಸಕೋಶ ಆಡುವ ಉಸಿರು
ಕಳೆದ ಕಾಲ ಮತ್ತು ಬರುವ ಕಾಲ.
ಮಂಕಾದ ಲಂಡನ್ ಗುಡ್ಡಗಳ ಮೇಲೆ
ಹ್ಯಾಂಪ್‌ಸ್ಟೆಡ್ ಕ್ಲರ್ಕನ್‌ವೇಲ್, ಕ್ಯಾಂಪ್ಡನ್, ಪುಟ್ನೀ
ಹೈಗೇಟ್, ಪ್ರಿಮ್‌ರೋಸ್, ಲ್ಯುಡ್‌ಗೇಟುಗಳ ಮೇಲೆ
ಹಾದು ಹೋಗುವ ಗಾಳಿಯನ್ನು ಜಡವಾಗಿಸಿದೆ
ಮಾಸಿದ ಗಾಳಿಗೆ ಬೆರೆತ ಅಸ್ವಸ್ಥ ಆತ್ಮಗಳ ಕಮರುತೇಗು.
ಇಲ್ಲಲ್ಲ, ಇಲ್ಲಲ್ಲ ಪೂರ್ಣಾಂಧಕಾರ ಈ
ಉದ್ರೇಕದಿಂದ ತತ್ತರಿಸುವ ಜಗತ್ತಿನಲ್ಲಿ.
ಕೆಳಗೆ ಇಳಿ, ಸುಮ್ಮನೆ ಇಳಿ
ಸಂತತ ಏಕಾಂತದ ಲೋಕದಾಳಕ್ಕೆ,
ಲೋಕವೆಂದರೆ ಲೋಕವಲ್ಲ ನಿಜವಾಗಿ
ಯಾವುದು ಲೋಕವಲ್ಲವೋ ಅದರೊಳಕ್ಕೆ,
ಅಂತರಂಗದ ಅಂಧಕಾರದಾಳಕ್ಕೆ ಎಲ್ಲ ಗುಣಗಳಿಂದ
ಮುಕ್ತವಾಗಿರುವ, ಇಂದ್ರಿಯಜ್ಞಾನದ ಸೋಂಕೇ ಇಲ್ಲದ
ಭ್ರಮೆ ಕಲ್ಪನೆಗಳಿಂದ ಪೂರ್ಣ ಬಿಡುಗಡೆಗೊಂಡ
ಕ್ರಿಯೆಯ ಕಾಳಜಿ ಇರದ ನಿಷ್ಕ್ರಿಯ ಲೋಕದಾಳಕ್ಕೆ.
ಇರುವುದು ಇದೊಂದೆ ದಾರಿ, ಇನ್ನೊಂದೂ ಸಹ ಇದೇ,
ಚಲನೆಯಲ್ಲಲ್ಲ, ಚಲನ ವಿಮುಖತೆಯಲ್ಲಿ;
ಲೋಕ ಚಲಿಸುತ್ತಿರಲು ತನ್ನ ಪ್ರವೃತ್ತಿಯಲ್ಲಿ,
ಭೂತಕಾಲ ಮತ್ತು ಭವಿಷ್ಯತ್ ಕಾಲಗಳ
ಜಲ್ಲಿ ಹಾಸಿರುವಂಥ ತನ್ನ ಬೀದಿಗಳಲ್ಲಿ.
IV
ಕಾಲ ಘಂಟೆಗಳಲ್ಲಿ ಹೂತುಹೋಗಿದೆ ಹಗಲು,
ಕರಿಮೋಡ ಒಯ್ದಿದೆ ಸೂರ್ಯನನ್ನೇ.
ತಿರುಗೀತೆ ನಮ್ಮತ್ತ ಸೂರ್ಯಕಾಂತಿಯ ಹೂವು,
ಹಬ್ಬು ಪೊದೆ ಬಾಗುವುವೆ ನಮ್ಮ ಕಡೆಗೆ?
ತಬ್ಬಿಕೊಳ್ಳುವುದೆ ನಮ್ಮ ಬಳ್ಳಿ ಹೂಗೊಂಚಲು?
ಗಡ್ಡೆಗಟ್ಟಿದ ತಂಪು ‘ಯೂ’ ಮರದ ಬೆರಳು೧೬
ಗುಂಗುರಾಗಿಳಿಯುವುದೆ ತಲೆಯ ಮೇಲೆ?
ತನ್ನ ಬೆಳಕಿಂದಲೇ ಬೆಳಕನ್ನುತ್ತರಿಸಿದ೧೭
ಮಿಂಚುಳ್ಳಿ ರೆಕ್ಕೆ ಮೌನದಲ್ಲಿರುವಾಗ
ಸ್ತಬ್ಧವಾಗಿದೆ ಬೆಳಕು ಸುತ್ತುವ ಜಗತ್ತಿನ ಸುಸ್ಥಿರ ಬಿಂದುವಿನಲ್ಲಿ.
V
ಶಬ್ದ ಚಲಿಸುವುವು, ಸಂಗೀತ ಚಲಿಸುವುದು
ಕಾಲದಲ್ಲಷ್ಟೇ; ಬರೀ ಬದುಕಿರುವುದೆಲ್ಲ
ಸಾಯಬಲ್ಲದ್ದು ಮಾತ್ರ. ಮಾತಾದ ನಂತರ
ಶಬ್ದಗಳು ಸಾಗುತ್ತವೆ ನಿಶ್ಯಬ್ದದೊಳಗೆ.
ಶಬ್ದವಾಗಲಿ ಅಥವಾ ಸಂಗೀತವಾಗಲಿ
ಆಕಾರ ವಿನ್ಯಾಸದಿಂದ ಮಾತ್ರವೆ ಮೌನವನ್ನು ಸಾರುವುವು,
ಚೀನದ ಜಾಡಿ ತನ್ನ ನಿಶ್ಚಲತೆಯಲ್ಲಿಯೇ ಸಂತತ ಚಲಿಸುವಂತೆ.
ಸ್ವರ ಸರಿಯುವಾಗಿನ ಪಿಟೀಲಿನ ನಿಶ್ಚಲತೆಯಲ್ಲ,
ಅಷ್ಟು ಮಾತ್ರವೇ ಅಲ್ಲ, ಜೊತೆ ಜೊತೆಯ ಅಸ್ತಿತ್ವ,
ಆದಿಗಿಂತಲೂ ಮೊದಲ ಅಂತ್ಯ ಎಂದರೂ ಸರಿಯೆ,
ಅಂತ್ಯ ಆದಿಗಳೆರಡೂ ಆದಿ ಅಂತ್ಯಕ್ಕೆ ಮುಂಚೆ
ಇದ್ದುವೆಂದರೂ ಸರಿಯೆ ಎಲ್ಲವೂ ಯಾವಾಗಲೂ ವರ್ತಮಾನವೇ.
ಶಬ್ದ ಒದ್ದಾಡುವುವು, ಸಿಡಿಯುವುವು ಕೆಲವು ಸಲ,
ಭಾರದಡಿಯಲ್ಲಿ ಬಿದ್ದು ಜಾರುವುವು ಎಡಹುವುವು,
ಒತ್ತಡದಲ್ಲಿ ಸಿಕ್ಕಿ ನಾಶವಾಗುವುವು, ಖಚಿತತೆ ಇರದೆ
ನಶಿಸುವುವು, ನೆಲೆತಪ್ಪುವುವು, ಸ್ಥಿರತೆಗೆಡುವುವು.
ನಿಂದಿಸುವ, ಅಣಕಿಸುವ ಅಥವಾ ಬರೀ ಹರಟುವ
ದನಿಗಳು ಅವುಗಳ ಮೇಲೆ ದಾಳಿ ಮಾಡುವುವು.
ಪ್ರಲೋಭನೆಯ ದನಿಗಳು, ಅಂತ್ಯಕ್ರಿಯೆಯ ನೃತ್ಯದಲ್ಲಿ ಚೀರಿಡುವ ನೆರಳು
ಅಸ್ಪಷ್ಟವಾದ ವಿಚಿತ್ರಾಕೃತಿಯ ಹುಯ್ಯಲು
ಮರುಭೂಮಿಯಲ್ಲಿನ ಪದದ ಮೇಲೇ ಹೆಚ್ಚು ಆಕ್ರಮಣ ನಡೆಸುವುವು೧೮
ಹತ್ತು ಮೆಟ್ಟಿಲ ಏಣಿಯ ಚಿತ್ರದಲ್ಲಿರುವಂತೆ
ವಿನ್ಯಾಸವೊಂದರ ವಿವರಣೆಯ ಚಲನೆ೧೯
ಬಯಕೆಯೇ ಚಲನೆ ಆದರೂ ತನಷ್ಟಕ್ಕೇ
ಬಯಸಬಹುದಾದ್ದಲ್ಲ, ಪ್ರೇಮ ತನ್ನಷ್ಟಕ್ಕೇ
ನಿಷ್ಚಲ, ಚಲನೆಗದು ಬರಿಯ ಕಾರಣ ಮತ್ತು ಅಂತ್ಯ ಮಾತ್ರ;
ಅಸ್ತಿತ್ವ ನಾಸ್ತಿತ್ವ ಎರಡಕ್ಕೂ ನಡುವೆ
ಮಿತಿಯ ಆಕೃತಿಯೊಳಗೆ ಸೆರೆಯಾದ ಕಾಲವನ್ನು
ಹೊರತುಪಡಿಸಿದರೆ
ಕಾಲ ಬಯಕೆಗಳಿಂದ ಮುಕ್ತವಾದದ್ದು ಪ್ರೇಮ.
ಬಿಸಿಲ ಕೋಲಿನ ನಡುವೆ ಧೂಳಿನ ಕಣ ಇನ್ನೂ
ಚಲಿಸುತ್ತಿರುವಾಗಲೇ
ಎಲೆಗೊಂಚಲಲ್ಲಿ ಅಡಗಿದ್ದ ಮಕ್ಕಳ ಕೇಕೆ
ಮೇಲೆ ಚಿಮ್ಮುತ್ತದೆ ಇದ್ದಕ್ಕಿದ್ದಂತೆ
ಈಗ, ಈ ಕ್ಷಣದಲ್ಲೆ ಇಲ್ಲೆ, ಯಾವಾಗಲೂ-
ಹಿಂದಕ್ಕೂ ಮುಂದಕ್ಕೂ ಚಾಚಿಕೊಂಡಿರುವ
ವ್ಯರ್ಥ ವಿಷಣ್ಣಕಾಲ ಹಾಸ್ಯಾಸ್ಪದ.
*****
೧೯೩೬
೧. ಬರ್ನ್ಟ್ ನಾರ್ಟನ್ ಎನ್ನುವುದು ಗ್ಲಾಸ್ಟರ್‌ಲೈರ್‌ನಲ್ಲಿ, ಎಬ್ರಿಂಗ್‌ಟನ್ ಎಂಬ ಹಳ್ಳಿಯಲ್ಲಿದ್ದ ಒಂದು ದೊಡ್ಡ ಪಾಳುಮನೆಯ ಹೆಸರು.
ಬರ್ನ್ಟ್‌ನಾರ್ಟನ್ ಕವನದ ರಚನೆಯಾದದ್ದು ೧೯೩೬ರಲ್ಲಿ ಎಲಿಯಟ್ ಇದನ್ನು ಚತುಷ್ಕ ಎಂದು ಕರೆದಿದ್ದಾನೆ. ಇದು ಐದು ಭಾಗಗಳಿಂದ ಕೂಡಿರುವ ದೀರ್ಘ ಕವನ, ಎಲಿಯಟ್ ಬರೆದ ಒಟ್ಟು ನಾಲ್ಕು ಇಂಥ ಚತುಷ್ಕಗಳಲ್ಲಿ ಇದು ಮೊದಲಿನದು. ೧೯೩೬ರಲ್ಲಿ ಹೊರಬಂದ ಎಲಿಯಟ್‌ನ ಸಂಗ್ರಹಿತ ಕವನ (Collected Poems)ಗಳಲ್ಲಿ ಇದನ್ನು ಸೇರಿಸಲಾಯಿತು. ಮುಂದೆ ಎಲಿಯಟ್ ‘ಈಸ್ಟ್ ಕಾಕರ್’ (೧೯೪೦), ‘ದಿ ಡ್ರೈ ಸ್ಯಾಲ್ವೇಜಸ್’ (೧೯೪೧) ಮತ್ತು ‘ಲಿಟ್ಲ್ ಗಿಡಿಂಗ್’ (೧೯೪೨) ಎಂಬ ಇತರ ಮೂರು ಚತುಷ್ಕಗಳನ್ನು ಬರೆದ. ೧೯೪೩ರಲ್ಲಿ ಈ ನಾಲ್ಕು ಕವನಗಳೂ ‘ಫೋರ್ ಕ್ವಾರ್ಟೆಟ್ಸ್ (ನಾಲ್ಕು ಚತುಷ್ಕಗಳು) ಎಂಬ ಹೆಸರಿನಲ್ಲಿ ಒಂದು ಪ್ರತ್ಯೇಕ ಸಂಗ್ರಹವಾಗಿ ಪ್ರಕಟವಾದುವು.
೨. ಈ ಎರಡು ಉದ್ಧರಣಗಳನ್ನೂ ಹಿರಾಕ್ಲಿಟಸ್ (ಕ್ರಿ.ಪೂ. ೫೪೦-೪೭೫?) ಎಂಬ ಗ್ರೀಕ್ ದಾರ್ಶನಿಕನ ಬರೆಹಗಳಿಂದ ಆಯಲಾಗಿದೆ. ಹಿರಾಕ್ಲಿಸ್ ‘ಏಕತೆ’ (Unity) ಮತ್ತು ‘ನಿರಂತರ ಚಲನೆ’ (Flux) ಎಂಬ ಎರಡು ಪರಿಕಲ್ಪನೆಗಳನ್ನು ಅರ್ಥೈಸಿ ಪ್ರತಿಪಾದಿಸಿದವನು. ಎಲ್ಲ ವಸ್ತುಗಳೂ ಮೂಲದಲ್ಲಿ ಒಂದರಿಂದಲೇ ಸಂಭವಿಸುತ್ತವೆ (ಏಕತೆ) ಎನ್ನುವುದು ಮೊದಲಿನದು. ಜೀವನ ಒಂದು ಹರಿಯುವ ನದಿಯಂತೆ; ಅಲ್ಲಿ ನೀರು ಸದಾ ಬದಲಾಗುತ್ತಿರುತ್ತದೆ. ಹರಿಯುವ ನೀರಿನಲ್ಲಿ ಕಾಲಿಡುವವರು ಪ್ರತಿಸಲವೂ ಹೊಸ ನೀರಿನಲ್ಲಿ ಕಾಲಿಡುತ್ತಾರೆ (ನಿರಂತರ ಚಲನೆ) ಎನ್ನುವುದು ಎರಡನೆಯದು. ಜೀವನದಲ್ಲಿ ನಡೆಯುವ ಮಾರ್ಗಕ್ರಮಣವು ಮಾರ್ಗ ನಿಷ್ಕ್ರಮಣವೂ ಹೌದು ಎಂಬ ವಿಚಾರವನ್ನೂ ಅವನು ಹೇಳುತ್ತಾನೆ.
೩. ಕಾಲವೆಲ್ಲಾ ಅಪರಿಹಾರ್ಯ “ದೇವರು ಏನನ್ನು ಮಾಡುತ್ತಾನೋ ಅದು ಎಂದೆಂದಿಗೂ ಇರುವಂಥದು. ಈವರೆಗೂ ಇದ್ದದ್ದೇ ಈಗಲೂ ಇದೆ. ಮುಂದೆ ಇರಬೇಕಾದದ್ದೂ ಈಗಾಗಲೇ ಇದ್ದುಬಿಟ್ಟಿದೆ. ಈಗಾಗಲೇ ಆಗಿ ಹೋಗಿರುವುದನ್ನೇ ದೇವರು ಬಯಸುತ್ತಾನೆ” (ಎಕ್ಲೆಸೆಯಾಸ್ಟೆಸ್,III, ೧೪-೧೫)
೪. ಗುಲಾಬಿ ತೋಟದೆಡೆಗೆ : ಗುಲಾಬಿ ತೋಟದಲ್ಲಿರುವವರು ಮಕ್ಕಳು ಎನ್ನುವುದು ಕವನದಲ್ಲಿ ಮುಂದೆ ಸೂಚಿತವಾಗಿದೆ. ಲೈಂಗಿಕ ಮತ್ತು ಆಧ್ಯಾತ್ಮಿಕ ಅಂಶಗಳು ಕಲೆಸಿಕೊಂಡ ಅಂತರ್ಬೋಧೆ ತೋಟದಲ್ಲಿ ಆಡುತ್ತಿರುವ ಮಕ್ಕಳಲ್ಲಿ ಇದೆಯೆಂಬ ಸೂಚನೆ ಎಲಿಯಟ್‌ನ ಪದ್ಯಗಳಲ್ಲಿ ಹಲವು ಸಲ ಬರುತ್ತದೆ. ‘ಬರ್ನ್ಟ್‌ನಾರ್ಟನ್’ ಗಿಂತ ಮುಂಚೆ ಬರೆದ ‘ನ್ಯೂ ಹ್ಯಾಂಪ್ ಶೈರ್’ ಪದ್ಯದಲ್ಲಿ, ಸೇಬಿನ ತೋಟದಲ್ಲಿ ಆಡುತ್ತಿರುವ ಹುಡುಗ ಹುಡುಗಿಯರಿಗೆ ಹಕ್ಕಿಯೊಂದು ಕಾಣಿಸಿಕೊಳ್ಳುತ್ತದೆ. ಈ ಕವಿತೆಯಲ್ಲಿಯೂ ಆ ಹಕ್ಕಿ ಬರುತ್ತದೆ. ಮಾನವನ ಮೊದಲ ಜಗತ್ತನ್ನು ಎಂದರೆ ಈಡನ್ ತೋಟವನ್ನು ನೆನಪಿಸುವ ಪ್ರತಿಧ್ವನಿಗಳು ಗುಲಾಬಿ ತೋಟದಲ್ಲಿ ಹಾಯುತ್ತವೆ. ಈ ಮೂಲಕ ಭೂತ ವರ್ತಮಾನಗಳು ಪರಸ್ಪರ ತಳುಕು ಹಾಕಿಕೊಳ್ಳುತ್ತವೆ. ಚತುಷ್ಕಗಳಲ್ಲಿ ಪುನರುಕ್ತವಾಗುವ ಗುಲಾಬಿ ಹೂವು ಕೂಡ ಆಧ್ಯಾತ್ಮಿಕ ಅಂಶಗಳು ಬೆರೆತ ಉದಾತ್ತೀಕೃತ ಲೈಂಗಿಕ ಪ್ರೀತಿಯ ಸಂಕೇತವಾಗಿದೆ. ಡಾಂಟೆ (ತನ್ನ ಡಿವೈನ್ ಕಾಮೆಡಿಯ) ಸ್ವರ್ಗದಲ್ಲಿ ವರ್ಜಿನ್ ಮೇರಿಯನ್ನು ನೋಡಿದಾಗ ಅವಳು ದೇವರ ಒಂದು ಶಬ್ದವೇ ಮೈತಾಳಿ ಗುಲಾಬಿಯಂತೆ ಕಂಡ ಮಾತಿದೆ. ಸ್ವರ್ಗದ ಅತ್ಯುನ್ನತ ಸ್ತರದಲ್ಲಿ ಸ್ವರ್ಗೀಯ ಕಾಂತಿಯಿಂದ ಹೊಳೆಯುವ ಭವ್ಯ, ಶ್ವೇತ ಗುಲಾಬಿಯಾಗಿ ಡಾಂಟೆ ಅವಳನ್ನು ವರ್ಣಿಸುತ್ತಾನೆ. ಈ ಕವನದಲ್ಲಿ ಎಲಿಯಟ್ ಕೂಡ ಅದನ್ನು ನೆನಪಿಸುತ್ತಾನೆ.
೫. ದಾಟಿಹೋದವು ಕಣ್ಣಕಿರಣ ಅದೃಶ್ಯವಾಗಿ : ಜಾನ್ ಡನ್ ಕವಿಯ ‘ದಿ ಎಸ್ಟೆಸಿ’ ಕವನದಲ್ಲಿ ಬರುವ ಮುಂದಿನ ಸಾಲುಗಳಿಗೆ ಹೋಲಿಸಿ “our eye beams twisted and did thred our eyes upon one double string.”
೬. ಬೆಳಕಿನ ಹೃದಯ : ‘ಡಿವೈನ್ ಕಾಮೆಡಿ’ಯಲ್ಲಿ ಡಾಂಟೆ ಸ್ವರ್ಗದ ಕೆಳಸ್ತರಗಳಿಂದ ಮೇಲು ಮೇಲಕ್ಕೆ ಏರುತ್ತಾನೆ. ಒಂದೊಂದು ಹಂತದಲ್ಲೂ ಪ್ರಕಾಶ ಉಜ್ವಲವಾಗುತ್ತ ಹೋಗುತ್ತದೆ. ಕಡೆಯಲ್ಲಿ ಡಾಂಟೆಗೆ ‘ಟ್ರಿನಿಟಿ’ಯ ಒಂದು ನೋಟ ಕಾಣಸಿಗುತ್ತದೆ. ಅಲ್ಲಿ ಕಣ್ಣು ಕೋರೈಸುವ ಮಹೋಜ್ವಲ ಪ್ರಕಾಶ ಹಬ್ಬಿದೆ. ಅದನ್ನು ವರ್ಣಿಸುತ್ತ ಡಾಂಟೆ ‘ಬೆಳಕಿನ ಹೃದಯ’ ಎಂಬ ಪದಪುಂಜವನ್ನು ಬಳಸುತ್ತಾನೆ.
೭. ಬೆಳ್ಳುಳ್ಳಿ ನೀಲಮಣಿ…. ಗಾಲಿಯಚ್ಚನ್ನು…. ನಿಲಿಸುತ್ತವೆ : ಫ್ರೆಂಚ್ ಸಿಂಬಲಿಸ್ಟ್ ಕವಿ ಮಲಾರ್ಮ್ ಬರೆದ ಸಾನೆಟ್ಟೊಂದರಲ್ಲಿ Thunder and rubies at the hubs ಎಂಬ ಮಾತು ಬರುತ್ತದೆ. ಮುಂದೆ ಅಗ್ನಿಶಲಾಕೆ ಬಳಸಿ ಮಾಡಿದ ಚಕ್ರಗಳ ಕವನರಥದಲ್ಲಿ ಕುಳಿತು ಆಕಾಶದಲ್ಲಿ ವಿಹರಿಸುವ ಮಾತನ್ನಾಡುತ್ತಾನೆ ಕವಿ. ಎಲಿಯಟ್ ಪ್ರಸ್ತಾಪಿಸುತ್ತಿರುವ ಚಕ್ರ ನೆಲದ ಕೆಸರಿನಲ್ಲಿ ಹೂತುಹೋದದ್ದು.
೮. ತಿರುಗುವ ಜಗತ್ತಿನ ಸುಸ್ಥಿರ ಬಿಂದುವಿನಲ್ಲಿ: ಎಲಿಯಟ್ ಇದೇ ಪದಪುಂಜವನ್ನು ತನ್ನ ಕೊರಿಯೊಲಾನ್ ಪದ್ಯಗಳಲ್ಲಿ ಒಂದಾದ Triumphal Marchನಲ್ಲಿ ಬಳಸುತ್ತಾನೆ. ಆ ಪದ್ಯ ರಚನೆಯಾದದ್ದು ೧೯೩೧ರಲ್ಲಿ, ಡಾಂಟೆ ಬಳಸುವ unmoved mover (Eternal Being) ಎಂಬ ನುಡಿಗೆ ಸುಸ್ಥಿರ ಎನ್ನುವುದು ಹತ್ತಿರದ ಪದ ಎನ್ನಿಸುತ್ತದೆ.
೯. ಫಲದ ಬಯಕೆಯ ನೀಗಿ…. ಕರ್ಮಗಳಿಂದ ಬಿಡುಗಡೆ: ಭಗವದ್ಗೀತೆ ಬೋಧಿಸುವ ಕರ್ಮಯೋಗದ ಪ್ರಭಾವ ಇಲ್ಲಿ ಕಾಣುತ್ತದೆ. ಫಲದಲ್ಲಿ ಆಸಕ್ತನಾಗದೆ ಮಾಡಿದ ಕರ್ಮ ಬಂಧನವಾಗುವುದಿಲ್ಲ, ಯೋಗವಾಗುತ್ತದೆ, ಬಿಡುಗಡೆ ಕೊಡುತ್ತದೆ ಎಂಬ ಗೀತೋಪದೇಶವೇ ಇಲ್ಲಿ ಬೇರೆ ಮಾತುಗಳಲ್ಲಿ ಬಂದಂತಿದೆ.
೧೦. ಸ್ಥಿರವಿದ್ದೂ ಚಲಿಸುವ ಶುಭ್ರಪ್ರಕಾಶದ : ಡಿವೈನ್ ಕಾಮೆಡಿಯ ಪ್ಯಾರಡೈಸ್ ವಿಭಾಗದಲ್ಲಿ ಬರುವ ಶಾಶ್ವತ ಜ್ಯೋತಿಯ ಕಲ್ಪನೆಗೆ ಇದನ್ನು ಹೋಲಿಸಬಹುದು.
೧೧. ನಿಶ್ಚಲಿತ ಆನಂದದ ಅತ್ಯುನ್ನತಿ: ಎಲಿಯಟ್ ಇಲ್ಲಿ ಬಳಸುವ Erhebung ಶಬ್ದ ಒಂದು ಜರ್ಮನ್ ಪದ; ಅತ್ಯುನ್ನತವಾದದ್ದು, ಅತಿ ಉದಾತ್ತವಾದದ್ದು ಎಂದು ಅದರ ಅರ್ಥ.
೧೨. ಆಂಶಿಕ ಸಮಾಧಿಯ…. ಭೀಕರತೆಯ ಪರಿಹಾರ : ಅನುಭಾವಿಯು ಭಗವದನುಭವದಲ್ಲಿ ಸೇರಿಹೋಗುವ ಸಮಾಧಿ ಸ್ಥಿತಿಯ ಹಿಂದಿನ ಮೆಟ್ಟಲು ಎಂಬಂತೆ ಈ ಸ್ಥಿತಿಯನ್ನು ಭಾವಿಸಲಾಗುತ್ತದೆ. ತನ್ನ Dark Night of the Soul ಎಂಬ ಕೃತಿಯಲ್ಲಿ ಸ್ಪ್ಯಾನಿಷ್ ಅನುಭಾವಿ ಸೇಂಟ್ ಜಾನ್ (ಆಫ್ ದಿ ಕ್ರಾಸ್) ಎಲಿಯಟ್ ವರ್ಣಿಸುವ ಈ ನೆಲೆಯನ್ನು ವರ್ಣಿಸುತ್ತಾನೆ. ಕನ್ನಡದ ಅನುಭಾವಿಕವಿ ಮಧುರ ಚೆನ್ನರು ವರ್ಣಿಸುವ ಕಾಳರಾತ್ರಿ ಇದೇ ಎನ್ನುವಂತಿದೆ.
೧೩. ಪ್ರಜ್ಞೆಯಿದ್ದಾಗ ಕಾಲದೊಳಗೆ ಇದ್ದಂತಲ್ಲ : ನಾನು ಎನ್ನುವ (ಅಹಂ) ಪ್ರಜ್ಞೆ ತನ್ನ ಮುಂಚಿನ ನೆಲೆಗಳಿಂದ ಸದ್ಯದ ನೆಲೆಯನ್ನು ಬೇರ್ಪಡಿಸಿಕೊಳ್ಳಲು ತೊಡಗದಿದ್ದಾಗ ನಮ್ಮ ಪ್ರಜ್ಞಾಸ್ತರಗಳು ಪಡೆಯುವ ಸ್ಥಿತಿಯನ್ನು ತತ್ವಶಾಸ್ತ್ರಜ್ಞ ಬರ್ಗ್‌ಸನ್ ‘ಶುಭ್ರ ಅವಧಿ’ (pure duration) ಎಂದು ಕರೆಯುತ್ತಾನೆ. (ನೋಡಿ Bergson : Time and Free Will) ಶಿಷ್ಯರ ಪ್ರಶ್ನೆಗಳಿಗೆ ರಮಣ ಮಹರ್ಷಿಗಳ ಉತ್ತರಗಳನ್ನು ಒಳಗೊಂಡ Talks with Maharshi, ಎಂಬ ಕೃತಿಯಲ್ಲಿ ಪ್ರಜ್ಞೆಯ ಈ ಸ್ಥಿತಿಯನ್ನು ನಿರೂಪಿಸುವ
ಮಾತುಗಳಿವೆ.
೧೪. ಕಾಲದೊಳಗಡೆ ಮಾತ್ರ ಸ್ಮರಿಸಬರುವಂಥವು : ಮನಸ್ಸು ಮತ್ತು ಹೊರಗಿನ ವಸ್ತುಗಳ ನಡುವಿನ ಒಂದು ಅಂತರ್ವಿಭಾಗವೇ ಸ್ಮೃತಿ ಎಂದು ಬರ್ಗ್‌ಸನ್ ತನ್ನ Mother and Memory ಗ್ರಂಥದಲ್ಲಿ ನಿರೂಪಿಸುತ್ತಾನೆ.
೧೫. ಪ್ರೀತಿಯನ್ನು ಕಾಲದಿಂದೆತ್ತಿ ಶುಚಿಗೊಳಿಸಿ…. ಕತ್ತಲೂ ಅಲ್ಲ: “ಪ್ರಪಂಚವನ್ನಾಗಲಿ ಅದರೊಳಗಿನ ವಸ್ತುಗಳನ್ನಾಗಲೀ ಪ್ರೀತಿಸಬೇಡ…. ಏಕೆಂದರೆ ಜಗತ್ತಿನಲ್ಲಿರುವುದೆಲ್ಲ ಕಳೆದುಹೋಗುತ್ತದೆ…. ಭಗವಂತನ ಇಚ್ಛೆಯನ್ನು ನಡೆಸುವವನು ಮಾತ್ರವೇ ಎಂದೆಂದಿಗೂ ಉಳಿಯುತ್ತಾನೆ (೧ ಜಾನ್ ೧೧:೧೫-೧೭).
೧೬. ಗಡ್ಡಗಟ್ಟಿದ ತಂಪು ‘ಯೂ’ ಮರದ ಬೆರಳು : ಈ ಭಾವಗೀತಾತ್ಮಕ ಭಾಗದಲ್ಲಿ ಬಂದಿರುವ ಹೂವು, ಮರಗಳ ಹೆಸರುಗಳು ಎರಡೆರಡು ಅರ್ಥ ಹೊಂದಿವೆ. ಉದಾ : Sunflower ಎನ್ನುವುದು ಸೂರಕಾಂತಿಯೂ ಆಗುತ್ತದೆ, ‘ಬೆಳಕಿನ ಹೂವೂ’ ಆಗುತ್ತದೆ ‘ಯೂ’ ವೃಕ್ಷ ಸಾಂಪ್ರದಾಯಿಕವಾಗಿ ಸಾವು ಮತ್ತು ನಿತ್ಯತೆಗಳನ್ನು ಸೂಚಿಸುತ್ತದೆ.
೧೭. ತನ್ನ ಬೆಳಕಿಂದಲೇ ಬೆಳಕನ್ನುತ್ತರಿಸಿದ : ಡಿವೈನ್ ಕಾಮೆಡಿಯಲ್ಲಿ ಡಾಂಟೆ ಸ್ವರ್ಗದಲ್ಲಿ ದರ್ಶಿಸಿದ ಭಗವಂತನ ಅಲೌಕಿಕ ಜ್ಯೋತಿ “ತನ್ನ ಬೆಳಕಿಂದಲೇ ಬೆಳಕನ್ನುತ್ತರಿಸಿತು” (Paradise XXX ೧೧೧, ೧೦೯-೧೨೦)
೧೮. ಮರುಭೂಮಿಯಲ್ಲಿನ…. ಆಕ್ರಮಣ ನಡೆಸುವುವು : ಕ್ರಿಸ್ತನ ಮೇಲೆ ನಡೆದ ಪ್ರಲೋಭನ ರೂಪದ ಆಕ್ರಮಣಗಳನ್ನು ಇಲ್ಲಿ ಸ್ಮರಿಸಬಹುದು (Luke IV : 1-4)
೧೯. ಹತ್ತು ಮೆಟ್ಟಿಲ ಏಣಿಯ…. ವಿವರಣೆಯ ಚಲನೆ : ಇಲ್ಲಿನ ಹತ್ತು ಮೆಟ್ಟಿಲ ಏಣಿಯು ಸೇಂಟ್ ಜಾನ್ ಹೇಳುವ “ದಿವ್ಯ ಪ್ರೇಮದ ಅನುಭಾವದ ಏಣಿಯನ್ನು” ಸೂಚಿಸುತ್ತದೆ. ಆತ್ಮವು ಭಗವಂತನನ್ನು ಕುರಿತ ತನ್ನ ಪ್ರೇಮದ ಹತ್ತು ಹಂತಗಳನ್ನು ಒಂದೊಂದಾಗಿ ಏರಿ, ಪ್ರೇಮದಿಂದ ಪರಿಶುದ್ಧವಾಗಿ ಕಡೆಯಲ್ಲಿ ಭಗವಂತನನ್ನು ಸೇರಿಕೊಳ್ಳುತ್ತದೆ.