ಮೂಲ: ಟಿ ಎಸ್ ಎಲಿಯಟ್

ಯಾವುದೀ ನಾಡು, ಯಾವುದೇ ದೇಶ, ಯಾವ ಭೂಭಾಗ೨

ಯಾವ ಕಡಲುಗಳು ಯಾವ ತೀರಗಳು
ಯಾವ ಬಂಡೆಗಳು ಮತ್ತಿದಾವ ದ್ವೀಪಗಳು
ಮೊರೆದು ಹಡಗಿನ ಮೂಕಿಗೆ ಘಟ್ಟಿಸುವ ಅಲೆಗಳು
ಪೈನ್‌ವೃಕ್ಷ ಚೆಲ್ಲುವ ಘಮಘಮದ ಗಾಳಿ
ಹಕ್ಕಿದನಿ ತೂರುತಿದೆ ಮಬ್ಬುತೆರೆ ಸೀಳಿ
ಏನೆಲ್ಲ ದೃಶ್ಯಗಳು ಮರಳಿ ಹಾಯುತಿವೆ
ಓ ನನ್ನ ಮಗಳೇ!

ನಾಯಿ ಹಲ್ಲನ್ನು ನಿತ್ಯ ಮಸೆದು ಬಾಳುತ್ತ
ಇದ್ದೂ ಸತ್ತವರು೩
ಹಾಡು ಹಕ್ಕಿಯ ಹಾಗೆ ಝಗಝಗಿಸಿ ಹೊಳೆಯತ್ತ
ಇದ್ದೂ ಸತ್ತವರು
ತೃಪ್ತಿಯ ರೊಪ್ಪದಲ್ಲಿ ವಿಶ್ರಮಿಸಿಕೊಳ್ಳುತ್ತ
ಇದ್ದೂ ಸತ್ತವರು
ಪಾಶವೀ ಕೃತ್ಯಗಳ ಸುಖದಲ್ಲಿ ನರಳುತ್ತ
ಇದ್ದೂ ಸತ್ತವರು೪

ಗಾಳಿಯಿಂದ, ಮರದ ಶ್ವಾಸದಿಂದ ಮತ್ತು
ಹಕ್ಕಿ ಹಾಡನ್ನು ಹೊತ್ತ ಮಬ್ಬಿನಿಂದ
ನೆಲದಲ್ಲಿ ಕರಗಿರುವ ದೈವಕೃಪೆಯಿಂದ ನಿಸ್ಸತ್ವರಾಗಿದ್ದಾರೆ

ಯಾವುದೀ ಮುಖ, ಹೀಗೆ ಏಕಕಾಲಕ್ಕೇ
ಎಷ್ಟು ಅಸ್ಪಷ್ಟ ಎಷ್ಟು ಸ್ಪಷ್ಟ!೫
ಕೈಯ ನಾಡಿಯ ಮಿಡಿತ ಎಷ್ಟು ಕ್ಷೀಣ, ಹಾಗೇ ಎಷ್ಟು ಪ್ರಬಲ,
ತಾರೆಗಳಿಗೂ ದೂರ, ಕಣ್ಣಾಲಿಗೂ ಹತ್ತಿರ
ನೀಡಿದ್ದೋ, ಸಾಲಪಡದದ್ದೋ!

ಎಲೆಗಳೆರಡರ ನಡುವೆ ಪಿಸುಮಾತು ಸಣ್ಣನಗು
ನಿದ್ದೆಯಡಿಯಲ್ಲಿ ದುಮುಗುಡುವ ಹೆಜ್ಜೆಗಳು,
ಎಲ್ಲ ಜಲ ಸಂಗಮಿಸುವಡೆಗೆ,
ನೀರ್ಗಲ್ಲು ಬಡಿದು ಬಿರಿಬಿಟ್ಟ ಹಡಗಿನ ಮೂಕಿ
ಬಿಸಿಲ ಕಾವಿಗೆ ಬಿರಿದ ಬಣ್ಣ.
ನಾನೆ ಮಾಡಿದ್ದು ಇದು, ನಾನೆ ಮರೆತಿದ್ದೆ
ಈಗ ನೆನಪಾಗುತ್ತಿದೆ.
ಒಂಬತ್ತು ತಿಂಗಳು ಅಭದ್ರವಾಗಿ ಕಟ್ಟಿದ್ದು, ಹುಳುತಿಂದ ಹಾಯಿಪಟ
ತಿಳಿಯದೇ ಮಾಡಿದ್ದು, ಅರ್ಧ ಎಚ್ಚರದಲ್ಲಿ,
ನನ್ನದೇ, ಆದರೂ ಅಜ್ಞಾತವಿದ್ದದ್ದು.
ಹಲಗೆ ಕೂಡಿಸಿದ ಕಡೆ ನೀರು ಬಸಿಯುವ ಬಿರುಕು,
ಕೀಲೆಣ್ಣೆ ಸವರಿ ದಾರಿ ಬಿಗಿಯಬೇಕು.

ಈ ಮುಖ, ಆಕಾರ, ಈ ಬದುಕು ಎಲ್ಲ
ನನ್ನಾಚೆಕಾಲದ ಜಗತ್ತಲ್ಲಿ ಬಾಳಲಿ ಎಂದು;
ಆ ಬಾಳಿಗಾಗಿ, ಈ ಬಾಳನ್ನೆ ತೊರೆವೆ, ಮಾತನ್ನೆ ಬಲಿಕೊಡುವೆ
ಆ ಅನುಕ್ತಕ್ಕಾಗಿ
ಎಚ್ಚೆತ್ತ, ತುಟಿತೆರೆದ, ಬರಲಿರುವ ಭರವಸೆಯ ಹೊಸ ಹಡಗುಗಳಿಗಾಗಿ

ಯಾವ ಕಡಲುಗಳು ಯಾವ ತೀರಗಳು
ಹಡಗಿನೆದುರಿಗೆ ಎಂಥ ಗ್ರಾನೈಟ್ ದ್ವೀಪಗಳು
ಮಬ್ಬುತೆರೆ ಸೀಳಿ ಹಾಯುತಿದೆ ಹಕ್ಕಿದನಿ
ಓ ನನ್ನ ಮಗಳೇ!
*****
೧೯೩೦

೧. ಮರೀನಾ : ‘ಪೆರಿಕ್ಲಿಸ್’ ಷೇಕ್ಸ್‌ಪಿಯರನ ನಾಟಕಗಳಲ್ಲಿ ಒಂದು. ಪೆರಿಕ್ಲಿಸ್ ಅದರಲ್ಲಿ ಬರುವ ಒಬ್ಬ ದೊರೆ. ಅವನು ಸದಾ ಸಮುದ್ರ ಸಂಚಾರದ ಸಾಹಸಗಳನ್ನು ಮಾಡುತ್ತಿದ್ದವನು. ಮರೀನಾ ಅವನ ಮಗಳು; ಸಮುದ್ರದಲ್ಲಿ ಹಡಗು ಬಿರುಗಾಳಿಯ ತೆಕ್ಕೆಯಲ್ಲಿದ್ದಾಗ ಹುಟ್ಟಿದವಳು. ಸಮುದ್ರದ ಮೇಲೆ ಹುಟ್ಟಿದವಳೆಂದೇ ಅವಳಿಗೆ ಮರೀನಾ ಎಂದು ಹೆಸರು. ಅವಳು ಚಿಕ್ಕವಳಾಗಿರುವಾಗ ಹಡಗು ಇನ್ನೊಮ್ಮೆ ಬಿರುಗಾಳಿಗೆ ಸಿಕ್ಕು ಪೆರಿಕ್ಲಿಸ್ ಹೆಂಡತಿ ಮತ್ತು ಮಗಳಿಂದ ಬೇರ್ಪಡುತ್ತಾನೆ. ಕಳೆದುಹೋದ ಮಗಳಿಗಾಗಿ ಪರಿತಪಿಸುತ್ತ ಹುಡುಕುತ್ತ ಇರುವ ಅವನಿಗೆ ಮಗಳು ತೀರಿ ಹೋಗಿರಬಹುದೆಂಬ ಶಂಕೆಯೂ ಇರುತ್ತದೆ. ಹಲವು ವರ್ಷಗಳ ನಂತರ ಮರೀನಾ ಅಕಸ್ಮಾತ್ತಾಗಿ ಒಂದು ಬಂದರಿನಲ್ಲಿ ತಂದೆಯ ಕಣ್ಣಿಗೆ ಬೀಳುತ್ತಾಳೆ. ಗುಲಾಮತನದಿಂದ ಹೇಗೋ ಪಾರಾಗಿ ಬಂದ ಅವಳು ಆಗಷ್ಟೆ ಹರಯಕ್ಕೆ ಕಾಲಿಟ್ಟ ಚೆಲುವೆಯಾಗಿ ಬೆಳೆದಿದ್ದಾಳೆ. ಸದಾ ಮಗಳ ಚಿಂತೆಯಲ್ಲೇ ಇದ್ದ ತಂದೆ, ಪವಾಡದಂಥ ಘಟನೆ ನಡೆದು ಮತ್ತೆ ಮಗಳನ್ನು ಪಡೆದು ದೈವಿಕ ಆನಂದದಲ್ಲಿದ್ದಾನೆ. ಅವನು ತನ್ನ ಹಿಂದಿನ ಅನುಭವವನ್ನು ಆತಾರ್ಕಿಕದ ಬೆಳಕಿನಲ್ಲಿ ಎಂಬಂತೆ ಧ್ಯಾನಿಸುತ್ತಿದ್ದಾನೆ. ಮರೀನಾ ಷೇಕ್ಸ್‌ಪಿಯರನ ಕಾಲದ ಒಬ್ಬ ಮುಗ್ಧ ಆದರ್ಶೀಕೃತ ಚೆಲುವೆ ಪುತ್ರಿ ಟೆಂಪೆಸ್ಟ್ ನಾಟಕದ ಮಿರಾಂಡಳಂಥವಳು.

೨. ಯಾವುದೀ ನಾಡು…. ಯಾವ ಭೂಭಾಗ ? : ಇದು ಸೆನೆಕಾನ (ಕ್ರಿ.ಪೂ. ೬೫) ‘ಹರ್ಕ್ಯುಲಸ್’ ಎಂಬ ದುರಂತ ನಾಟಕದಲ್ಲಿ ಬರುವ ಸಾಲು. ಈ ನಾಟಕದಲ್ಲಿ ಸ್ಯೂಸನ ಹೆಂಡತಿಯಾದ ಹೀರಾದೇವಿಯ ಅಸೂಯೆಯ ಫಲವಾಗಿ ಹರ್ಕ್ಯುಲಸ್‌ಗೆ ಹುಚ್ಚು ಹಿಡಿಯುತ್ತದೆ. ಹುಚ್ಚಿನ ಭರದಲ್ಲಿ ಅವನು ತನ್ನ ಹೆಂಡತಿ ಮಕ್ಕಳನ್ನು ತಾನೇ ಕೊಂದುಬಿಡುತ್ತಾನೆ. ಆದರೆ ವಿವೇಕದ ಅಧಿದೇವತೆಯಾದ ಮಿನರ್ವಾ ಅವನನ್ನು ತನ್ನ ವಶಕ್ಕೆ ತೆಗೆದುಕೊಂಡು, ಒಂದು ಅಪರಿಚಿತ ಪ್ರದೇಶಕ್ಕೆ ಒಯ್ದು ಅಲ್ಲಿ ಹರ್ಕ್ಯುಲಸ್ ತನ್ನ ಮುಂಚಿನ ಎಚ್ಚರಕ್ಕೆ ಮರಳುವಂತೆ ಮಾಡುತ್ತಾಳೆ. ಆಗ ಹರ್ಕ್ಯುಲಸ್ ಕನವರಿಕೆಯಲ್ಲೆಂಬಂತೆ ಹೇಳುವ ಮಾತು ಇದು. ತನ್ನ ಹೆಂಡತಿ ಮಗಳು ಕಳೆದು ಹೋದದ್ದಕ್ಕೆ ತಾನೇ ಕಾರಣ ಎಂಬ ಭಾವನೆಯಿಂದ ಬಂದ ಮಾತಾಗಿ ಇದು ಪೆರಿಕ್ಲಿಸನಿಗೂ ಅನ್ವಯವಾಗುತ್ತದೆ.

೩. ನಾಯಿ ಹಲ್ಲನ್ನು…. ಇದ್ದೂ ಸತ್ತವರು: ಇಲ್ಲಿನಾಯಿ, ಭಯ ಕೇಡುಗಳ ಸಂಕೇತವಾಗಿ ಬಂದಿದೆ. ಬಂಜೆಭೂಮಿ ಕವನದ ೮೫ನೆಯ ಸಾಲನ್ನೂ ಮತ್ತು ಅದಕ್ಕೆ ಕೊಟ್ಟಿರುವ ಟಿಪ್ಪಣಿಯನ್ನೂ ನೋಡಿ. ಬೇಟೆನಾಯಿಗಳ ಹಲ್ಲುಗಳನ್ನು ಮಸೆದು ಚೂಪುಗೊಳಿಸಲಾಗುತ್ತದೆ.

೪. ಪಾಶವೀಕೃತ್ಯಗಳ ಸುಖದಲ್ಲಿ ನರಳಿ ಇದ್ದೂ ಸತ್ತವರು : ಷೇಕ್ಸ್‌ಪಿಯರನ ಪೆರಿಕ್ಲಿಸ್ ನಾಟಕದಲ್ಲಿ ತನ್ನನ್ನಿನ್ನೂ ಗುರುತಿಸದಿರುವ ತಂದೆಗೆ ಮರೀನಾ ಒಂದು ಹಾಡಿನ ಮೂಲಕ ತನ್ನ ಪರಿಚಯ ಮಾಡಿಕೊಡುತ್ತಾಳೆ. ಆ ಹಾಡಿನ ಒಂದು ಸಾಲು ಇದು: “ವೇಶ್ಯೆಯರ ನಡುವೆಯೇ ಓಡಾಡುವಳು ನಾನು | ಆದರೂ ವೇಶ್ಯೆಯಲ್ಲ.” ಇದ್ದೂ ಸತ್ತವರು ಎಂಬ ಮಾತಿನಲ್ಲಿ ಪರಸ್ಪರ ವಿರೋಧ ಸೂಚನೆ ಈ ಸಾಲಿನಲ್ಲೂ ಹಣಿಕುತ್ತದೆ.

೫. ಯಾವುದೀ ಮುಖ…. ಎಷ್ಟು ಅಸ್ಪಷ್ಟ ಎಷ್ಟು ಸ್ಪಷ್ಟ! : ಷೇಕ್ಸ್‌ಪಿಯರನ ಪೆರಿಕ್ಲಿಸ್ ನಾಟಕದ ಕೆಲವು ಮಾತು ಇಲ್ಲಿ ಹೊಳಲುಗೊಡುತ್ತವೆ. ಸತ್ತು ಹೋದಳೆಂದೇ ಭಾವಿಸಿದ್ದ ಮಗಳನ್ನು ಮತ್ತೆ ಹಠಾತ್ತಾಗಿ ಕಂಡಾಗ ಪೆರಿಕ್ಲಿಸ್‌ ಸಂಭ್ರಮಾಶ್ಚರ್ಯಗಳಿಂದ ದಿಗ್ಭ್ರಾಂತನಾಗುತ್ತಾನೆ. ಆಗ ಅವನು ಕೇಳುವ ಮಾತು: But are you fiseh and blood? Have you a working pulse ? (ಪೆರಿಕ್ಲಿಸ್ V, i)

ಕವನದ ಈ ಭಾಗದಲ್ಲಿ ‘ಎಷ್ಟು ಅಸ್ಪಷ್ಟ ಎಷ್ಟು ಸ್ಪಷ್ಟ’ ‘ಎಷ್ಟು ಕ್ಷೀಣ, ಹಾಗೇ ಎಷ್ಟು ಪ್ರಬಲ’ ತಿಳಿದದ್ದು ಹಾಗೇ ‘ಅಜ್ಞಾತವಿದ್ದದ್ದು’, ಬಾಲ್ಯ ವೃದ್ದಾಪ್ಯ- ಈ ಸಂಗತಿಗಳು ನ್ಯೂ ಟೆಸ್ಟಮೆಂಟ್‌ನಲ್ಲಿ ಬರುವ ಕೆಲವು ಸಾಲುಗಳ ಹಿನ್ನೆಲೆ ಹೊಂದಿರುವಂತಿವೆ. ಅಲ್ಲಿ ಪಾಲ್ ತನ್ನ ಜೀವನದ ಅರ್ಥವನ್ನೂ ಶೈಶವದ ಸರಳತೆ ಮುಗ್ಧತೆಗಳಿಂದ ಹಿಡಿದು ಪ್ರೌಢ ಜೀವನದವರೆಗಿನ ಅವಧಿಯನ್ನೂ ಚಿಂತಿಸುತ್ತ ಹೀಗೆ ಹೇಳುತ್ತಾನೆ : For now we see through a glass, darkly; but then face to face: now I know in part; but then I shall know even as also I am known (I Corinthians-೧೩ verse ೧೨).