ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ರಾಟಲಿಲ್ಲೋ ಜಾಣಾ!
ರಾಟಲಿಲ್ಲೋ ಜಾಣಾ!

ಕತೆಗಾರ:
ಮನಿಯಾನ ಬಂಡೀ ಮುರಿಸಿ
ಮನಿಯಾನ ಬಂಡೀ ಮುರಿಸಿ
ರಾಟೀ ಮಾಡಿಸಿ ಕೊಟ್ಟಾ
ರಾಟೀ ಮಾಡಿಸಿ ಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಕದರಿಲ್ಲೊ ಜಾಣಾ!
ಕದರಿಲ್ಲೊ ಜಾಣಾ!

ಕತೆಗಾರ:
ಕೈಯಾನ ಗುದ್ದಲಿ ಮುರಿಸಿ
ಕೈಯಾನ ಗುದ್ದೆಲಿ ಮುರಿಸಿ
ಕದರ ಮಡಿಸಿ ಕೊಟ್ಟಾ
ಕದರ ಮಾಡಿಸಿ ಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಚಿಲ್ಲಿಲ್ಲೊ ಜಾಣಾ!
ಚಿಲ್ಲಿಲ್ಲೊ ಜಾಣಾ!

ಕತೆಗಾರ:
ಮನಿಯಾನ ಕೋಣವು ಕಡಿಸಿ
ಮನಿಯಾನ ಕೋಣವು ಕಡಿಸಿ
ಚಿಲ್ಲು ಮಾಡಿಸಿಕೊಟ್ಟಾ
ಚಿಲ್ಲು ಮಾಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಹಮ್ಮಿಗಿಲ್ಲಲೊ ಜಾಣಾ!
ಹಮ್ಮಿಗಿಲ್ಲಲೊ ಜಾಣಾ!

ಕತೆಗಾರ:
ನಡುವಿನ ಉಡದಾರ ಕಡಿದು
ನಡುವಿನ ಉಡದಾರ ಕಡಿದು
ಹಮ್ಮಿಗಿ ಮಾಡಿಸಿಕೊಟ್ಟಾ
ಹಮ್ಮಿಗಿ ಮಾಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಕಟ್ಟಿ ಇಲ್ಲಲೊ ಜಾಣಾ
ಕಟ್ಟಿ ಇಲ್ಲಲೊ ಜಾಣಾ

ಕತೆಗಾರ:
ಊರಾನ ವಡ್ಡರ ಕರಿಸಿ
ಊರಾನ ವಡ್ಡರ ಕರಿಸಿ
ಕಟ್ಟಿ ಕಟ್ಟಿಸಿಕೊಟ್ಟಾ
ಕಟ್ಟಿ ಕಟ್ಟಸಿಕೊಟ್ಟಾ

ಗಂಡ:
ನೊಲಲ್ಯಾಕ ಚೆನ್ನೀ!
ನೂಲಲ್ಯಾಕ ಚಿನ್ನೀ!

ಹೆಂಡತಿ:
ಗೆಳತ್ಯಾರಿಲ್ಲೊ ಜಾಣಾ!
ಗೆಳತ್ಯಾರಿಲ್ಲೊ ಜಾಣಾ!

ಕತೆಗಾರ:
ಓಣ್ಯಾಗಿನವರ ಕರಿಸಿ
ಓಣ್ಯಾಗಿನವರ ಕರಿಸಿ
ಗೆಳತ್ಯಾರ ಕೂಡಿಸಿಕೊಟ್ಟಾ
ಗೆಳತ್ಯಾರ ಕೂಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಗುಗ್ಗರಿಲ್ಲೊ ಜಾಣಾ!
ಗುಗ್ಗರಿಲ್ಲೊ ಜಾಣಾ! ,

ಕತೆಗಾರ:
ಗೋದಿ ಕಡ್ಲಿ ತರಿಸಿ
ಗೋದಿ ಕಡ್ಲಿ ತರಿಸಿ
ಗುಗ್ಗರಿ ಹಾಕಿಸಿಕೊಟ್ಟಾ
ಗುಗ್ಗರಿ ಹಾಕಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ಸೀ!

ಹೆಂಡತಿ:
ನನಗ ಬರೂದಿಲ್ಲೋ ಜಾಣಾ!
ನನಗ ಬರೂದಿಲ್ಲೋ ಜಾಣಾ!
****
ಹಾಸ್ಯದ ಹಾಡುಗಳು

ಮದುವೆಯ ಕಾಲದಲ್ಲಿ ಉಪಯೋಗಿಸುವ ಬೀಗರ ಹಾಡುಗಳು ಕೂಡ ಹಾಸ್ಯದವೇ. ಆದರೆ ಅವುಗಳಲ್ಲಿರುವುದು ಅಪಹಾಸ್ಯ. ಈ ವಿಭಾಗದಲ್ಲಿರುವವು ಅಂತಹವಲ್ಲ. ಇವು ನಕ್ಕು ನಗಿಸುವಂತಹವು. ಎರಡನೆಯ ವಿಭಾಗದೊಳಗಿನ ಹಾಡುಗಳಲ್ಲಿಯೂ ಒಂದು ಬಗೆಯ ಹಾಸ್ಯವಿದ್ದದ್ದು ನಿಜ. ಅದರೆ ಅದೂ ಇಂತಹದಲ್ಲ. ಅದಕ್ಕೆ ಸರಸವೆಂದು ಹೇಳಬಹುದು. ಆ ಪರಿಹಾಸ ಅಪಹಾಸಗಳಿಗಿಂತ ಭಿನ್ನವಾದ ಅಟ್ಟಹಾಸವು ಈ ವಿಭಾಗದಲ್ಲಿ ನಿರೂಪಿತವಾಗಿದೆ.

ನೂಲೊಲ್ಲ್ಯಾಕ ಚೆನ್ನಿ

ಈ ಹಾಡಿನ ಭಾವ ಸರಳವಿದೆ.

ಶಬ್ದಪ್ರಯೋಗಗಳು:- ಚಿಲ್ಲ=ಕದರುಹಾಕುವ ಕಿವಿ (ಚರ್ಮದ್ದು). ಹಮ್ಮಿಗಿ=ಚಕ್ರಕ್ಕೆ ಸುತ್ತುವ ದಾರ. ನಡುವಿನ=ಸೊಂಟದಲ್ಲಿರುವ. ಗುಗ್ಗರಿ=ತಿನ್ನುವುದಕ್ಕೆಂದು ಕುದಿಸಿದ ಕಾಳುಗಳು.