ಕಾಲನಾಗಗಳೊಡಲು ಜಗದ ಮನ ಎಂಬುದನು
ಅರಿತುಅರಿತೂ ಮರೆತು ಬಾಳಬೀದಿಗಳಲ್ಲಿ
ಒಲವ ಭೀಕ್ಷೆಯ ಬೇಡಿ ಬಂದಿಹೆನು ಇಲ್ಲಾನು
ಹೃದಯ ಬೇಡಿದ ನೇಹ ದೊರಕುವುದು ನಿನ್ನಲ್ಲಿ
ಎನುವ ಭರವಸೆಗೂಡಿ.  ಮರುಳುಗೊಳಿಸುವ ಮಾಟ
ಹುದುಗಿಸುತ ಒಳಗೆ ವಿಷ, ಹೊರಗೆ ಮಾಯೆಯ ಬೀರಿ
ತನ್ತನಕೆ ಜಗವನೇ ಬಲಿಕೊಡುವ ಗೋಳಾಟ
ಅನುಭವಿಸಿ ಈಗಿಂದು ನಿನ್ನೆದೆಯ ಬಳಿಸಾರಿ
ನಿಜನೇಹ ಬೇಡುತಿಹೆ-ಅದನೀನು ಅರಿತಿಲ್ಲ!
ಅರಿತರೂ ಅರಿತಿಲ್ಲ!-ಬೇಡಿದುದು ಭಿಕ್ಷುಕಗೆ
ದೊರೆಯಲಹುದೇನಿಲ್ಲಿ?  ಬಾಳಿನಲಿ ಉಳಿದೆಲ್ಲ
ನಡೆದಂತೆ ನೀನಾದೆ! – ಅದಕೆ ನಿನ್ನೆದೆಯ ಬಗೆ
ಅರಿತು ನಾ ಮೌನದಲಿ ಕುಳಿತಿಲ್ಲಿ ಮರುಗುತಿಹೆ
ನೀನಲ್ಲಿ ಹಗೆತನದ ಮಾಯೆಯಲಿ ನಗುತಲಿಹೆ!
*****