ತೆನೆ – ೧

ಗಂಟೆಯ ಮುಳ್ಳು ನಿಂತಿದೆ
ನಿಮಿಷದ ಮುಳ್ಳಿಗೋ ಗರಬಡಿದಿದೆ
ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ
ಮೂಗುಬ್ಬಸದಿಂದ ತೆವಳುತಿದೆ
ಸೋರುತ್ತಿದೆ ಗಳಿಗೆ ಬಟ್ಟಲು
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಪಿಸುಗುಟ್ಟುವ ಚಂದಿರ
ಏರಿಸುತ್ತಾನೆ ಅಮಲು !

ಹೊತ್ತಲ್ಲದ ಹೊತ್ತಲ್ಲಿ
ಎದ್ದು ಬಂದಿದ್ದಾನೆ
ನಿದ್ದೆಗಣ್ಣಿನಲ್ಲೇ ಚಂದಿರ
ಹಾಡು ಮುಗಿಯುತ್ತದೆ
ಜಾವ ಹೊರಳುತ್ತದೆ
ಗಡಿಯಾರ ನಿಂತರೇನು
ಕಾಲ ಸರಿಯುತ್ತದೆ
ಇನ್ನಾದರೂ ಹೊಸತಿಗೆ
ತೆರೆಯಬಾರದೇ ಬಾಗಿಲು?
ಗೊಣಗುತ್ತಲೇ ಮೂಡಿಸುತ್ತಾನೆ ದಿಗಿಲು!

ತೆನೆ-೨
ಒಳಗಿದ್ದದೂ ಹೊರಗುಳಿಯುವ
ಹಠಕ್ಕೆ ಬಿದ್ದು
ಎಲ್ಲಾ ಒದ್ದು
ಬೆಳಕಿಗೇ ಬೆನ್ನು ತಿರುಗಿಸಿ
ಆಕಾಶಕ್ಕೆ ಏಣಿ ಒರಗಿಸಿ
ಎತ್ತರಕ್ಕೇರಿ ಕುಳಿತ ಚಂದಿರನಿಗೆ
ಆಳಗಳು ಆರ್ಥವಾಗುವುದೆಲ್ಲಿ ?

ಹೊಸತಿಗೆ ತೆರೆದುಕೊಳ್ಳುವುದೇನೂ
ಕಷ್ಟವಲ್ಲ
ಬಾಗಿಲು ತೆರೆದುಬಿಡಬಹುದು
ಬೇಕೆನಿಸಿದ ಹೊಸತನ್ನೆಲ್ಲಾ
ಒಳಗೆ ಕರೆದುಬಿಡಬಹುದು
ಎದೆ ನೋವು ನದಿಯಾಗಿ ಹರಿದು
ಎಲ್ಲಾ ಕೊಚ್ಚಿ ಹೋಗುವ ಮೊದಲು
ಕಾಲನ ತಡೆದುಬಿಡಬಹುದು
ಆದರೆ…
ತೆರೆದ ಬಾಗಿಲಿನೊಂದಿಗೇ
ಧೂಳು ಕಸಕಡ್ಡಿಗಳೂ ಬಂದೆರಗಿದರೆ
ಹೇಗೆ ತಡೆಯುವುದು?
ಎಂದೆಲ್ಲಾ ಗೊಂದಲ!

ಆ ಮನವ
ಬೊಗಸೆಯಲಿ ಹಿಡಿದ ಚಂದಿರ
ಕಣ್ಣುಗಳ ಕೂಡಿಸಿ
ನೂರು ಮುತ್ತುಗಳ
ಪ್ರಮಾಣದ ಭರವಸೆಯನ್ನೊತ್ತಿ
ಹೊಸತೆಲ್ಲವೂ ಒಳಿತೆಂದು ಒಪ್ಪಿಸಿದ್ದಾನೆ
ಬಾಗಿಲು ತೆರೆಸಿದ್ದಾನೆ
ಹೊಸ ಬೆಳಕಿಗೆ ಕಣ್ಣು ಮೂಡಿಸಿದ್ದಾನೆ!
*****