ಬೋನ್ಸಾಯಿ ಗಿಡದಂತೆ ಅರಳುವ ನರಳುವ ಸ್ತ್ರೀ ಬದುಕು

ಬೋನ್ಸಾಯಿ ಗಿಡದಂತೆ ಅರಳುವ ನರಳುವ ಸ್ತ್ರೀ ಬದುಕು

ತೆಲಗಿನ ಪ್ರಸಿದ್ಧ ಲೇಖಕಿ ಅಬ್ಬೂರಿ ಛಾಯಾ ದೇವಿಯ ಒಂದು ಸಣ್ಣಕಥೆ “ಬೊನ್ಸಾಯಿ ಬ್ರತುಕು” ಅಂದರೆ ಬೋನ್ಸಾಯಿ ಬದುಕು. ಬೊನ್ಸಾಯಿ ಕಲೆಯನ್ನೆ ಆಧಾರವಾಗಿಟ್ಟುಕೊಂಡು ಸ್ತ್ರೀ ಬದುಕಿನ ಸುತ್ತ ಅದರ ಸೂಕ್ಷ್ಮ ಎಳೆಗಳ ಇತಿಮಿತಿಗಳ ಜಾಲಾಡಿದ ಸುಂದರ ಕಥಾನಕ. ಬೋನ್ಸಾಯಿ ಒಂದು ಜಪಾನೀ ಕಲೆ. ಅಗಾಧ ಬೆಳೆಯುವ ಮರಗಳನ್ನು ಕುಂಡಗಳಲ್ಲಿ ಮನೆಯೊಳಗಡೆ ಕೂಡ ಬೆಳೆಸುವಂತಹ ವಿಶಿಷ್ಟ ವಿಧಾನ. ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುವ, ಅದರ ವಿಸ್ತಾರಕ್ಕೆ ವೈಶಾಲ್ಯಕ್ಕೆ ಇತಿಮಿತಿಗಳ ಹೇರಿ, ಸಂಕುಚಿತಗೊಳಿಸುವ ಸುಂದರ ಕುತಂತ್ರದ ಕಲಾತ್ಮಕ ವಿಧಾನ. ಮರದ ಅಪಾರ ಸಾಮರ್ಥ್ಯ, ವಿಶಾಲತೆಗಳೆಲ್ಲ ಮೊಟಕುಗೊಂಡು ಅದೊಂದು ಬರಿಯ ಶೋಕೇಸಿನ ಕಪಾಟಿನಲ್ಲಿಡುವ ಆಲಂಕಾರಿಕ ವಸ್ತುವಿನಂತೆ ಮಾಡಿ, ಸಾಯಿಸದೇ ಆದರೇ ಅದರಂತೆ ಬದುಕಲು ಬಿಡದ ಬದುಕು ಕೊಡುವ ವ್ಯವಸ್ಥಿತ ಪದ್ದತಿ. ಬಹುಶಃ ಈ ವಿಚಾರವನ್ನು ಸ್ತ್ರೀ ಬದುಕಿನೊಂದಿಗೆ ಹೆಣೆದು ನೋಡಿದರೆ ಪರಸ್ಪರ ಸಾಮ್ಯತೆ ವಿಸ್ಮಯವಾಗುವ ಮಟ್ಟಿಗೆ ತಾಳೆಯಾಗುವುದು ಸುಳ್ಳಲ್ಲ.

ಅಕ್ಕಯ್ಯ ಹಳ್ಳಿ ಹೆಣ್ಣು. ಐದನೇ ತರಗತಿವರೆಗೆ ಓದಿದ ಆಕೆ ಬುದ್ಧಿವಂತೆಯಾಗಿದ್ದಳು. ಹಣಕಾಸಿನ ಕೊರತೆ ಇದ್ದು ಅಣ್ಣನ ಶಿಕ್ಷಣ ಮುಂದುವರೆಸಲು ಆಕೆ ತಂದೆಯ ಒತ್ತಾಯಕ್ಕೆ ಶಿಕ್ಷಣ ಮೊಟಕುಗೊಳಿಸಬೇಕಾಯ್ತು. ಐವತ್ತು ಅರವತ್ತರ ದಶಕದಲ್ಲಿ ಹೆಂಗಸು ಅಗಸ ಇಲ್ಲವೇ ಹಾಲಿನವನ ದುಡ್ಡಿನ ಲೆಕ್ಕ ಇಡಲು ಬರುವಷ್ಟು ತಿಳಿದರೆ ಸಾಕೆಂಬ ಕಾಲ. ಅದಕ್ಕಾಗೆ ಅಮ್ಮಲು ಕಲಿತಷ್ಟು ಅಕ್ಕಯ್ಯ ಕಲಿಯಲಾಗಲಿಲ್ಲ. ಹಾಗಾಗಿ ಆಕೆ ಹಳ್ಳಿಯ ವಿದ್ಯಾವಂತನನ್ನೊಬ್ಬನ ವಿವಾಹವಾಗಿ ಹಳ್ಳಿಯಲ್ಲೇ ಉಳಿದಳು. ಅಮ್ಮಲು ಆಕೆಗಿಂತ ಹತ್ತು ವರ್‍ಷಗಳಷ್ಟು ಕಿರಿಯಳಾದ ಕಾರಣ ತಂದೆ ಬದಲಾದ ಕಾಲಕ್ಕೆ ತಕ್ಕಂತೆ ಆಕೆಯನ್ನು ಕಾಲೇಜಿಗೂ ಸೇರಿಸಿದ್ದರು. ಹೀಗಾಗಿ ದೆಹಲಿಯಲ್ಲಿ ಕೆಲಸದಲ್ಲಿದ್ದ ಗಂಡ ಸಿಕ್ಕು ಆಕೆಗೂ ನೌಕರಿ ಮಾಡುವಷ್ಟು ಸ್ವಾತಂತ್ರ್ಯ ಸಿಕ್ಕಿತ್ತು.

ಅದೊಂದು ದಿನ ಅಮ್ಮಲುವನ್ನು ಕಾಣಲು ಬಂದ ಅಕ್ಕಯ್ಯ ಬಾಲ್ಕನಿಯಲ್ಲಿ ನಿಂತು ಮಾತಲ್ಲಿ ಮುಳುಗಿದಾಗಲೇ ಅದೇ ವೇಳೆಗೆ ಎದ್ದ ಬಿರುಗಾಳಿಗೆ ವಿಚಲಿತಳಾಗುತ್ತಾಳೆ. ರಾಜಸ್ಥಾನದ ಮರಳು ದೆಹಲಿಗೆ ಅಪ್ಪಳಿಸುದೇನೂ ಹೊಸತಲ್ಲ. ಮಳೆಯಿಂದ ರಕ್ಷಿಸಲು ಬೋನ್ಸಾಯಿ ಗಿಡಗಳ ಅಮ್ಮಲು ಬಾಲ್ಕನಿಯಿಂದ ತಂದು ಒಳಗಿಡತೊಡಗುತ್ತಾಳೆ. ಆ ಹೊತ್ತಿಗೆ ಕಿಟಕಿಯಿಂದ ಹೊರಗಿಣುಕಿದ ಅಕ್ಕಯ್ಯ ತೆರೆದು ತೋರಿದ ಸತ್ಯ, ಹೇಳಿದ ಮಾತು ಸ್ತ್ರೀ ಸಮುದಾಯದ ಬವಣೆಯ ನೆಲಹಾಸು. ಹೊರಗೆ ವಿಶಾಲ ಬಯಲಿನಲ್ಲಿ ಬೆಳೆದ ಅದೇ ಜಾತಿಯ ಗಿಡದ ಕೆಳಗೆ ಅನೇಕರು ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದರೆ ಬೋನ್ಸಾಯಿ ಕಲೆಯಲ್ಲಿ ಅರಳಿದ ಈ ಗಿಡಕ್ಕೆ ರಕ್ಷಣೆಯ ಅಗತ್ಯವಿತ್ತು. ಎಂತಹ ಭಿನ್ನತೆ? ಒಂದೇ ಜಾತಿಯ ಗಿಡಗಳಾದರೂ ಬೆಳೆದ ಪರಿಸರ, ಹೊಂದಿದ ತಾಕತ್ತು ಎರಡೂ ವಿಭಿನ್ನ ಇರುವುದರಿಂದಲೇ ಅಲ್ಲವೇ? ಈ ಪ್ರಶ್ನೆ ಅಮ್ಮಲುವನ್ನು ಬಹುವಾಗಿ ಕಾಡುತ್ತದೆ. ರಭಸದ ಮಳೆಗೆ ಜಗ್ಗದೇ ಬಗ್ಗದೇ ನಿಂತ ಬಯಲಿನ ಸ್ವಯಂ ಸಬಲ ಮರಕ್ಕೂ ಪ್ರೀತಿಯಿಂದ ಅತಿಯಾದ ಕಾಳಜಿಯಿಂದ ಬೆಳೆಸಿದ ಮನೆಯೊಳಗಿನ ಬೋನ್ಸಾಯಿ ಗಿಡಕ್ಕೂ ಅಜಗಜಾಂತರ. ಇದನ್ನು ಗಂಡು ಹೆಣ್ಣಿನ ಜೀವನ ರೀತಿಗೂ ಹೋಲಿಸಿ ಹೇಳುವುದಾದರೆ ನಮ್ಮ ಸಮಾಜದಲ್ಲಿ ಗಂಡನ್ನು ಬಯಲ ಗಿಡದಂತೆ ಬೆಳೆಸಿದರೆ ಹೆಣ್ಣನ್ನು ಬೋನ್ಸಾಯಿ ಗಿಡದಂತೆ ಬೆಳೆಸಲಾಗುತ್ತದೆ. ಕಾಲಕ್ರಮೇಣ ಅದರ ಶಕ್ತಿ ಉಡುಗಿ ಹೋಗಿ ಅವಲಂಬನೆಯ ಗುಣ ಬೆಳೆದು ಪರತಂತ್ರ ಜೀವನ ಮಾಡುವಂತೆ ಮಾಡಲಾಗುತ್ತದೆ. ಇನ್ನು ಹೊರ ದುಡಿತದ ಹೆಣ್ಣು ಮತ್ತು ಗೃಹಿಣಿಯರ ತಾಳೆ ಮಾಡಿದರೆ, ಮನೆಯಲ್ಲಿರುವ ಗೃಹಿಣಿ ಬೋನ್ಸಾಯಿ ಗಿಡದಂತೆ. ಪ್ರತಿಯೊಂದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿ. ಸ್ವಯಂ ಸಂಪಾದನೆಯ ಹೆಣ್ಣು ತನ್ನೆಲ್ಲಾ ಬೇಕು ಬೇಡಗಳಿಗೆ ಗಂಡನ ಅವಲಂಬಿಸುವುದಿಲ್ಲ. ಅದೇ ಗೃಹಿಣಿಯಾಗಿ ತನ್ನೆಲ್ಲಾ ಕೆಲಸ ಕಾರ್‍ಯಗಳ ಮನೆಗೆಂದೆ ಮೀಸಲಿಟ್ಟ ಹೆಣ್ಣು ಯಾವ ಸ್ವಂತಿಕೆಯ ಹೊಂದದೇ ಸದಾ ನಿಟ್ಟುಸಿರು ಬಿಡುತ್ತಾ ನವೆಯುವ ಚಿತ್ರಣ ಇಲ್ಲಿದೆ. ಅದಕ್ಕೆಂದೆ ಅಕ್ಕಯ್ಯ ತನ್ನ ಮಗಳಿಗೆ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸುತ್ತಾಳೆ. ತಂದೆ ಮಾತಿಗೆ ಶಿಕ್ಷಣ ಮೊಟಕುಗೊಳಿಸಿ ಆಕೆ ಗಳಿಸಿದ್ದು ಬರಿಯ ಶೂನ್ಯ. ಅದೇ ಅಮ್ಮಲು ಕೈತುಂಬಾ ಸಂಬಳ ಪಡೆದು ಸರ್‍ವ ಸ್ವತಂತ್ರೆ.
ಇದು ಸಮಾಜ ವ್ಯವಸ್ಥೆಯ ಒಂದು ತಾರತಮ್ಯದ ಮುಖವಾಡ ಹೊರಹಾಕುತ್ತದೆ. ಹೆಣ್ಣೆಂದ ಕೂಡಲೇ ಆಕೆ ಬರಿಯ ಭೋಗದ, ತ್ಯಾಗದ ಸಹನೆಯ ಪರಿಕಲ್ಪನೆಗಳನ್ನು ನಮ್ಮ ಭಾರತೀಯ ಜೀವನ ಶೈಲಿ, ವೇದ ಪುರಾಣ ಪುಣ್ಯ ಕಥೆಗಳು, ಜಾನಪದ ಗರತಿ ಸಾಹಿತ್ಯಗಳು ಎಷ್ಟು ಚೆನ್ನಾಗಿ ಒಪ್ಪಗೊಳಿಸಿದೆಯೆಂದರೆ ಸ್ವತಃ ಹೆಣ್ಣುಗಳು ಅದರ ಭಾಗವೇ ತಾನು ಎಂಬ ಭ್ರಮೆಯಲ್ಲಿ ತನ್ನ ಮೇಲಾಗುವ ದೌರ್‍ಜನ್ಯವನ್ನು ಅನ್ಯಾಯವನ್ನು ತಾರತಮ್ಯವನ್ನು ಅತಿ ಆನಂದದಿಂದ ಅದೇ ತನ್ನ ಸೌಭಾಗ್ಯವೆಂದು ಭ್ರಮಿಸಿ ಒಪ್ಪಿಕೊಳ್ಳುವಷ್ಟು. ಅಕ್ಕಯ್ಯನ ಮೇಲೆ ಹೊರೆಸಿದ ಈ ಕಟ್ಟಳೆ ಬೇರೆಯವರಿಂದಲ್ಲ. ಹೆತ್ತವರ ಒತ್ತಾಯಕ್ಕೆ ಬುದ್ದಿವಂತೆಯಾದರೂ ಆಕೆ ಶಿಕ್ಷಣವಂಚಿತೆ. ಹೆಣ್ಣಿನ ವಿಶಾಲತೆಗೆ ಮಿತಿ ಹೇರುವ ಕಲಾತ್ಮಕವಾಗಿ ಸಾಂಪ್ರದಾಯಿಕ ಪಾರಂಪಾರಿಕ ಬದ್ಧತೆಗಳ ಸಾಂಸ್ಕೃತಿಕ ಕಟ್ಟುಕಟ್ಟಳೆಗಳ ಮೂಲಕ ಆಕೆಯ ಒಳತುಡಿತಗಳ ಸದಾ ದಮನಿಸುವ ಪ್ರವೃತ್ತಿಗೆ ಮನೆಯಿಂದಲೇ ಮೊದಲ ಮುನ್ನುಡಿ ಬರೆಯಲಾಗುತ್ತದೆ. ಆಕೆ ಆದರ್‍ಶತೆಯ ಪ್ರತಿರೂಪದಂತಿರಬೇಕು ಎಂಬ ಪ್ರತಿಮಾ ರೂಪವನ್ನು ಆಕೆಯ ಮನಸ್ಸಿನಲ್ಲಿ ಅಚ್ಚು ಮೂಡಿಸುತ್ತ ಹೆಣ್ಣು ಮಕ್ಕಳಿಗೆ ಅದನ್ನೇ ಬೋಧಿಸುತ್ತ ಗಂಡ ದರ್‍ಪಿಷ್ಟ, ದೌರ್‍ಜನ್ಯಕಾರಿ, ಲಫಂಗನಾದರೂ ಆತನೊಂದಿಗೆ ಹೊಂದಿ ಬಾಳಿ ಗರತಿ ಎಂಬ ಗೌರವದ ಪಟ್ಟಕ್ಕೆ ತನ್ನೆಲ್ಲಾ ಆಸೆಗಳ ತ್ಯಾಗ ಮಾಡುವಂತೆ ಮಾನಸಿಕವಾಗಿ ತಯಾರು ಮಾಡುವ ವ್ಯವಸ್ಥಿತ ಚಕ್ರವ್ಯೂಹ ಹಿಂದಿನಿಂದಲೂ ನಿರ್‍ಮಿಸಲ್ಪಟ್ಟಿದೆ.

ಜಾಗತಿಕ ಬದಲಾವಣೆಯೊಂದಿಗೆ ಭಾರತವೂ ಸ್ಪಂದಿಸುತ್ತಿರುವ ವಿಚಾರ ಜೀವನ ಶೈಲಿ ಆಚಾರ ವಿಚಾರಗಳಲ್ಲಿ ಉತ್ತಮ ಆಶೋತ್ತರಗಳು ಕಾಣುತ್ತಿವೆ. ಬಹುಶಃ ಶಿಕ್ಷಣದ ಕ್ರಾಂತಿ ಎಂದರೆ ಇದು. ಕಲಿತ ಹೆಣ್ಣು ಮನೆಯಲ್ಲಿ ಬಿದ್ದಿರಲು ಬಯಸುವುದಿಲ್ಲ. ತನ್ನ ಜ್ಞಾನದ ಬಳಕೆ ಮಾಡಿಕೊಳ್ಳಲು ಅಮ್ಮಲು ಕೆಲಸಕ್ಕೆ ಸೇರಿದಳು. ಇದು ಆಕೆಯ ಸ್ವಾತಂತ್ರ್ಯದ ಪ್ರಶ್ನೆ. ಅದೇ ಅಕ್ಕಯ್ಯ ಮನೆ ಮಠ ಗದ್ದೆ ದನ ಕರು ಎಂದು ಸ್ವಂತ ಆಸಕ್ತಿ ಕಡೆಗಣಿಸಿ ನಿತ್ಯ ಜಂಜಾಟಕ್ಕೆ ಒಗ್ಗಿಕೊಂಡವಳು. ಆಕೆಯ ಒಳ ತುಡಿತ ಯಾರೂ ಕೇಳಲಿಲ್ಲ. ಕೇಳುವುದು ಇಲ್ಲ.

ಆದರೆ ಇಲ್ಲಿಯೂ ಇರುವ ಇನ್ನೊಂದು ದೌರ್‍ಜನ್ಯ ಕಣ್ಣಿಗೆ ಕಟ್ಟುತ್ತದೆ. ದುಡಿಯುವ ಹೆಣ್ಣುಮಕ್ಕಳ ಬವಣೆಯ ಚಿತ್ರಣ. ಹೊರಗೆ ದುಡಿದು ಬರುವ ಗಂಡು ಮನೆಗೆ ಬಂದೊಡನೆ ವಿಶ್ರಾಂತಿ ಪಡೆವಂತೆ ಹೆಣ್ಣು ಪಡೆಯಲಾಗದು. ಆಕೆ ನಿತಾಂತ ದುಡಿಮೆಗೆ ಜನಿಸಿದವಳು ಎಂಬಂತೆ ಮನೆಯಲ್ಲೂ ತನ್ನ ಜವಾಬ್ದಾರಿಗಳ ನಿಭಾಯಿಸಬೇಕು. ಆದರೆ ಇದು ಸತತ ಮುಂದೆಯೂ ಹೀಗೆ ಇರದು. ಇಂದಿನ ಸತ್ಯ ನಾಳಿನ ಸುಳ್ಳು ಆಗಬಹುದೆಂಬ ನುಡಿ ಇದ್ದಂತೆ. ಸಾರ್‍ವಜನಿಕ ಕ್ಷೇತ್ರಗಳಲ್ಲಿ ಹೆಣ್ಣು ಅನುಭವಿಸುವ ಯಾತನೆಯೂ ಕಡಿಮೆಯಿಲ್ಲ. ಸಾಂಪ್ರದಾಯಿಕ ಅಂಚು ಹೊದ್ದ ಭಾರತದ ಬಾಣಗಳು ಯಾವತ್ತಿಗೂ ಪ್ರತಿ ಕೇಡಿಗೂ ಹೆಣ್ಣನ್ನು ನೇರ ಹೊಣೆಗಾರ ಮಾಡಲು ಕಾಯುತ್ತಿರುತ್ತವೆ. ಹೆಣ್ಣು ಎಷ್ಟು ಕಲಿತರೂ ಅಡುಗೆ ಮನೆ ಜವಾಬ್ದಾರಿ ಕಸಮುಸುರೆ ತೊಳೆಯುವುದು ತಪ್ಪಿತೇ ಎಂಬ ಪ್ರಶ್ನೆ ಇಂದಿಗೂ ಇದೆಯಾದರೂ ಕಾಲವೇ ಇದಕ್ಕೆ ಉತ್ತರಿಸಬೇಕಷ್ಟೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತನು ಬೆವರದೆ ಅನ್ನದನುಭವ ಸಾಧ್ಯವೇ?
Next post ಸುಖಸ್ಪರ್‍ಶ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…