ಸುಬ್ಬು:- ಶಿವೂ! ಇತ್ತಲಾಗಿ ಬಾ. ಅಲ್ಲಿ ಒಂದು ಕರು ನಿಂತಿದೆ. ಹಾದೀತು.
ಶಿವು:- ಅದು ಹಾಯುವುದಿಲ್ಲ, ನಮ್ಮ ಮನೆಯಲ್ಲಿ ಹುಟ್ಟಿದ ಕರು.
ಸುಬ್ಬು:- ಇದೇನೋ ಹೀಗೆನ್ನುವೆ? ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಹಾಯುವುದಿಲ್ಲವೆ?
ಶಿವು:- ಅದು ನನ್ನ ಸ್ನೇಹಿತ! ಸುಬ್ಬೂ! ನನ್ನನ್ನು ಹಾಯುವುದಿಲ್ಲ.
ಸುಬ್ಬು:- ‘ಕರು ಸ್ನೇಹಿತ’ ಎಂದರೇನಯ್ಯ?
ಶಿವು:- ಇಲ್ಲ. ಸುಬ್ಬೂ! ಅದಕ್ಕೆ ನನ್ನನ್ನು ಕಂಡರೆ ಬಲು ಇಷ್ಟ. ನಾನು ಕರೆದ ಕಡೆಯೆಲ್ಲಾ ಬರುತ್ತದೆ. ತಾಯಿಯ ಬಳಿ ಹಾಲು ಕುಡಿಯುತ್ತಿದ್ದರೂ, ನಾನು ಕೂಗಿದರೆ ಬಂದು ಬಿಡುವುದು.
ಸುಬ್ಬು:- ಏನೋಪ್ಪ! ನನಗೆ ನಂಬುಗೆಯಿಲ್ಲ. ಹಾಲಿನ ಮಾದಮ್ಮನ ಮನೆಯಲ್ಲಿ ಒಂದು ಕರು ಇದೆ. ಅದರ ವಿಚಿತ್ರ ಏನು ಹೇಳಲಿ? ಯಾರಾದರೂ ಹತ್ತಿರ ಕುಳಿತುಕೊಂಡರೆ ಅವರ ಬಟ್ಟೆಯನ್ನೇ ಮೇದು ಬಿಡುತ್ತದೆ. ಅದನ್ನೇನಾದರೂ ಹುಷ್ ಎಂದರೆ ಹಗ್ಗ ಕಿತ್ತುಕೊಂಡು, ಹಾಯುವುದಕ್ಕೆ ಓಡಿಸಿಕೊಂಡು ಬರುತ್ತದೆ. ಇಂಥಾದುದರಲ್ಲಿ ನೀನು ಇದು ‘ನನ್ನ ಸ್ನೇಹಿತ’ ಎಂದರೆ ನಂಬುವುದು ಹೇಗಯ್ಯಾ?
ಶಿವು:- ಅದೆಲ್ಲ ಸಾಕುವುದರಲ್ಲಿ ಇದೆಯಯ್ಯಾ! ಅವರ ಮನೆಯಲ್ಲಿ ಅದಕ್ಕೆ ಹೊಟ್ಟೆಗೆ ಸರಿಯಾಗಿ ಹಾಕುವುದಿಲವೋ ಏನೋ? ಅಲ್ಲದೆ ದನ ಮೊದಲಾದ ಪ್ರಾಣಿಗಳಿಗೆ ಹೊಟ್ಟೆಗೆ ಹಾಕಿದರೆ ಮಾತ್ರ ಸಾಲದು. ಅದರ ಜತೆಗೆ ನಮ್ಮ ದಯೆಯೂ ಅವುಗಳ ಮೇಲೆ ಇರಬೇಕು. ಆಗ ಅವುಗಳು ನಮ್ಮಲ್ಲಿಯೂ ಪ್ರೀತಿಯಿಡುವುವು. ಈಗ ನೋಡು. ಈ ಕರುಗೆ ನನ್ನಲ್ಲಿ ಎಷ್ಟು ಸ್ನೇಹವಿದೆ! ನನು ಹೋದ ಹೋದ ಕಡೆ ತಾನೂ ಬರುವುದಿರಲಿ. ಇದು ನಿತ್ಯವು ನನ್ನ ಹಾಸಿಗೆಯಲ್ಲಿಯೇ ಮಲಗುವುದು. ಒಂದು ದಿನವಾದರೂ ಹಾಸಿಗೆಯಲ್ಲಿ ಸಗಣಿ ಹಾಕಿಲ್ಲ. ಗಂಜಲವನ್ನು ಹುಯ್ದಿಲ್ಲ. ಒಂದುದಿನವು ನನ್ನನ್ನು ತುಳಿದಿಲ್ಲ. ನಾನು ಹೊರಗೆ ಹೋಗಿ ಬಂದರೆ ನನ್ನ ಮೂತಿಯಲ್ಲಿ ಮೂತಿಯಿಟ್ಟು ನನ್ನನ್ನು ಎಷ್ಟು ಪ್ರೀತಿಯಿಂದ ನೆಕ್ಕುವುದು ಬಲ್ಲೆಯಾ?
ಸುಬ್ಬು:- ಇದಿಷ್ಟೂ ಯಾತರಿಂದ ಆಗುವುದಯ್ಯ?
ಶಿವೂ:- ನಾನು ಮೊದಲೇ ಹೇಳಲಿಲ್ಲವೆ? ಸುಬ್ಬೂ! ಪ್ರಾಣಿಗಳಿಗೂ ನಮ್ಮ ಹಾಗೆಯೇ ‘ಬೇಕು ಬೇಡ’ ಗಳು ಉಂಟು, ನಾವು ಹೇಳಿಕೊಳ್ಳಬಲ್ಲೆವು. ಅವು ಹೇಳಿಕೊಳ್ಳಲಾರವು. ನಾವು ಅವುಗಳಲ್ಲಿ ಮಮತೆಯಿಟ್ಟು, ನಮ್ಮ ಮಕ್ಕಳಂತೆ ಬೆಳಸಿದರೆ ಅವೂ ನಮ್ಮಲ್ಲಿ ಪ್ರೀತಿಯಿಟ್ಟು ನಡೆದು ಕೊಳ್ಳುವುವು. ಈಗ ಈ ಕರುವನ್ನೂ ನೋಡು. ಮಾದಮ್ಮನ ಮನೆಯ ಕರುವನ್ನೂ ನೋಡು. ಅದನ್ನು ನೋಡಿದರೆ ಎಷ್ಟು ಅಸಹ್ಯವಾಗುತ್ತದೆ? ಇದನ್ನು ನೋಡಿದರೆ ಎಷ್ಟು ಸಂತೋಷವಾಗುತ್ತದೆ? ಅಲ್ಲದೆ ಇದು ನನ್ನ ಹಿಂದೆ ಹಂದೆ ಬರುತ್ತಿದ್ದರೆ ನನಗೆಷ್ಟು ಸಂತೋಷ ಬಲ್ಲೆಯಾ? ಇನ್ನೂ ಒಂದು ವಿಚಿತ್ರ ನೋಡು. ಈಗ ನನ್ನನ್ನು ಹೊಡೆಯುವುದಕ್ಕೆ ಬಾ. ನೋಡಿದೆಯಾ? ನೀನು ನನ್ನನ್ನು ಹೊಡೆಯಲು ಬಂದರೆ ಅದು ಹೇಗೆ ನಿನ್ನ ಮೇಲೆ ಬೀಳಲು ಬರುತ್ತದೆ? ಇದು ನನ್ನ ಆಪ್ತನಲ್ಲವೆ?
ಸುಬ್ಬೂ:- ಪ್ರಾಣಿಗಳೂ ಹೀಗೆ ಗೆಳೆತನವನ್ನು ಬೆಳೆಸ ಬಲ್ಲವೆಂದು ನನಗೆ ತಿಳಿದಿರಲಿಲ್ಲ. ಶಿವೂ ಇನ್ನು ಮೇಲೆ ನಾನೂ ಅವುಗಳ ಗೆಳೆತನವನ್ನು ಸಂಪಾದಿಸುವೆನು.
*****