ಅರಗಿನಮನೆಯಲ್ಲಿ ಪಾಂಡವರು

-ಪಾಂಡವರನ್ನು ನಾಶ ಮಾಡಲು ಶಕುನಿಯೊಂದಿಗೆ ಸೇರಿ ಸಂಚು ರೂಪಿಸಿದ ದುರ್ಯೋಧನನು, ಕುರುಡು ಪ್ರೇಮದ ತನ್ನ ತಂದೆಯ ಸಹಾಯದಿಂದ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾದ. ಅಲ್ಲಿ ಪುರೋಚನನ ಸಹಕಾರದಿಂದ ನಿರ್ಮಿಸಲ್ಪಟ್ಟಿದ್ದ ಅರಗಿನಮನೆಯಲ್ಲಿ ಇಳಿದುಕೊಳ್ಳುವಂತೆ ಮಾಡಿ, ಅವರಿಗೆ ಅರಿವಾಗದಂತೆ ರಾತ್ರಿಯ ಸಮಯದಲ್ಲಿ ಅರಗಿನಮನೆಗೆ ಬೆಂಕಿಯಿಡಿಸಿ ಅವರೆಲ್ಲರನ್ನೂ ಜೀವಸಹಿತ ಸುಟ್ಟುಹಾಕುವ ದುಷ್ಟ ಯೋಜನೆಯೊಂದನ್ನು ರೂಪಿಸಿದ್ದ. ಹಿರಿಯರು ಪಾಂಡವರನ್ನು ದೈವಕಾರ್ಯಕ್ಕೆಂದು ಕಳುಹಿಸಿಕೊಟ್ಟರು. ವಿದುರ ಅನುಮಾನಗೊಂಡು ಪಾಂಡವರನ್ನು ಎಚ್ಚರಿಸಿದನು-

ಪಾಂಡವರನ್ನೇ ನಾಶವಾಗಿಸಲು ಸಂಚು ರೂಪಿಸಿದ ಕೌರವರು
ವಾರಣಾವತದ ಅರಗಿನಮನೆಯಲಿ ಸುಡಲು ವ್ಯವಸ್ಥೆಯ ಮಾಡಿದರು
ದೈವಕಾರ್ಯಕ್ಕೆ ತೆರಳುವುದೆನ್ನುತ ಒಪ್ಪಿಸಿ ಅವರನು ಕಳುಹಿದರು
ಪಂಚಪಾಂಡವರು ತಾಯಿಯ ಸಮೇತ ವಾರಣಾವತಕೆ ತೆರಳಿದರು
ಪಾಂಡುಕುಮಾರರು ಬರುವರು ಎನ್ನುತ ವಾರಣಾವತದ ಪುರಜನರು
ಸಡಗರದಿಂದಲಿ ಅವರನ್ನು ಕಾಣಲು ಹಾತೊರೆಯುತ ಆಗಮಿಸಿದರು
ಕುಂತಿಯ ಮಕ್ಕಳ ಪರಾಕ್ರಮವನ್ನು ಕೇಳಿದ್ದರು ಅವರಿವರಲ್ಲಿ
ಕಣ್ಣಿನೆದುರಿನಲಿ ಕಾಣುವ ತವಕವು ಹೆಚ್ಚಾಗಿದ್ದಿತು ಅವರಲ್ಲಿ
ರಾಜಬೀದಿಗಳ ಸಿಂಗರಿಸಿದ್ದರು ತಳಿರು ತೋರಣವ ಕಟ್ಟಿದರು
ಹಾದಿಬೀದಿಗಳ ಇಕ್ಕೆಲದಲ್ಲಿಯೂ ನಿಂತು ಸ್ವಾಗತವ ಕೋರಿದರು
ಮನೆಮನೆಯೆದುರಲಿ ಹೆಂಗೆಳೆಯರು ರಂಗಿನ ರಂಗೋಲಿಯ ಬಿಡಿಸಿದರು
ಕಲಶ ಕನ್ನಡಿಯ ಸ್ವಾಗತ ಕೋರುತ ಮಂಗಳವಾದ್ಯವ ನುಡಿಸಿದರು
ಜನತೆಯ ಸಂಭ್ರಮ ಸಡಗರ ನೋಡಿದ ಪಾಂಡವರೆದೆಯಲಿ ಸಂತಸವು
ಇಂತಹ ಸಂತಸ ಎಲ್ಲಾ ಕಾಲಕೆ ಉಳಿಯಲಿ ಎಂದರು ಸಂತತವು!
ಪಾಂಡವರಲ್ಲಿಗೆ ಬಂದುದ ಕಂಡು ಪುರೋಚನ ಎದುರಿಗೆ ಬಂದವನು
ಪುಷ್ಪಗುಚ್ಛಗಳ ನೀಡುತ ಅವರಿಗೆ ತಾನೂ ಸ್ವಾಗತ ಕೋರಿದನು
ಅರಗಿನಮನೆಯಲಿ ಬಿಡದಿಯ ಮಾಡಿಸಿ ಔತಣವನು ಏರ್ಪಡಿಸಿದನು
ಕಪಟಿಯು ನಯದಲ್ಲಿ ಅವರುಗಳೆದುರಲಿ ಅತಿವಿನಯವ ತೋರ್ಪಡಿಸಿದನು!

ಅರಗಿನಮನೆಯಲಿ ಬೆರಗಿನ ನೋಟವ ಬೀರಿದರೆಲ್ಲರು ಮುದದಿಂದ
ಬೆರಗು ಮೂಡಿಸುವ ಅರಮನೆ ಸೊಬಗನು ಅರಿತರೆಲ್ಲರೂ ನಯದಿಂದ
ಹೊರಗಿನ ನೋಟಕೆ ಸೊಬಗನು ತೋರುವ ಅರಗಿನಮನೆ ಅತ್ಯದ್ಭುತವು
ಮೆರುಗನ್ನು ಹೊಂದಿದ ಅರಮನೆ ಸೊಗಸಿಗೆ ಮರುಳಾದರು ಅಂದಿನ ದಿನವು

ಅರಗಿನಮನೆಯಲಿ ಅಂದಚೆಂದಗಳು ತಣಿಸಿರೆ ಕಣ್ಮನ ಸೊಗಸಾಗಿ
ಲೋಪವು ಏನೋ ಕಂಡಿತು ಕುಂತಿಗೆ ಗಂಧವು ಬಂದಿತು ಹೊಸದಾಗಿ
ಮನದೊಳಗೇನೋ ಶಂಕೆಯು ಮೂಡಲು ಕೇಳಿದ್ದಳು ಮಗ ಧರ್ಮನನು
ಧರ್ಮನಿಗೂ ಅನುಮಾನವು ಇದ್ದಿತು ಕಂಡು ಪುರೋಚನ ವಿನಯವನು

ರಾತ್ರಿಗೆ ಪಾಂಡವರೆಲ್ಲರು ಒಟ್ಟಿಗೆ ಮನೆಯ ಪರೀಕ್ಷೆಗೆ ತೊಡಗಿದರು
ಯಾರೂ ಸಂಶಯಪಡದ ರೀತಿಯಲಿ ಮೂಲೆಮೂಲೆಯನು ಹುಡುಕಿದರು
ಭೀಮನು ಇಟ್ಟಿಗೆಯೊಂದನು ಕಿತ್ತನು ಗುದ್ದುತ ಪುಡಿಪುಡಿ ಮಾಡಿದನು
ಚದುರಿದ ಇಟ್ಟಿಗೆ ಪುಡಿಯನ್ನು ಕೆದಕುತ ಅಚ್ಚರಿಯಿಂದಲಿ ನೋಡಿದನು
ಎಲ್ಲರಿಗಾಗಲೆ ಅರಿವಾಗಿದ್ದಿತು ಅರಗು ಮೇಣ ಮಿಶ್ರಣವೆಂದು
ಬೆಂಕಿ ತಾಗಿದರೆ ಭಗ್ಗನೆ ಉರಿಯುವ ಸುಂದರ ಅರಗಿನಮನೆಯೆಂದು
ಶಕುನಿ ಸುಯೋಧನರಿಬ್ಬರೂ ಕೂಡಿ ಮಾಡಿರುವಂತಹ ತಂತ್ರವಿದು
ಕುರುಡನ ಒಪ್ಪಿಸಿ ನಮ್ಮನು ಇಲ್ಲಿಗೆ ಕಳಿಸಿ ಹೆಣೆದಂಥ ಸಂಚು ಇದು
ಎನ್ನುವ ಮರ್ಮದ ಅರಿವಾಗಿದ್ದಿತು ಎಲ್ಲರಿಗೂ ಆ ದಿನದಲ್ಲಿ
ಒಳಗೊಳಗೇ ಕೋಪವು ಭುಗಿಲೆದ್ದಿತು ಪಾಂಡವರೆಲ್ಲರ ಮನದಲ್ಲಿ!
ಶಿವದರುಶನವನ್ನು ಮಾಡಿದರೆಲ್ಲರೂ ಉತ್ಸವ ನಡೆಯಿತು ಹಗಲಲ್ಲಿ
ಮೂವರು ಮಲಗಿರೆ ಮೂವರು ಎಚ್ಚರ ಇರುತಿದ್ದರು ಅವರಿರುಳಲ್ಲಿ
ದೇವರ ಉತ್ಸವವೆಲ್ಲವು ಮುಗಿದಿರೆ ವಾರದ ಏಳನೆ ದಿನದಲ್ಲಿ
ಅಂದಿನ ರಾತ್ರಿಗೆ ಬೆಂಕಿಯ ಹಚ್ಚಲು ನೆನೆದ ಪುರೋಚನ ಮನದಲ್ಲಿ!
ಉತ್ಸವ ನೋಡಲು ಬಂದಿದ್ದಂತಹ ಬೇಡತಿಯೊಬ್ಬಳು ಆ ಇರುಳು
ತನ್ನಯ ಐವರು ಮಕ್ಕಳ ಸಂಗಡ ಅರಗಿನಮನೆಯೆಡೆ ಬಂದಿರಲು
ಸುರೆಯನು ಸೇವಿಸಿ ಮಾಂಸವ ಭಕ್ಷಿಸಿ ಇದ್ದರು ಅರೆಬರೆ ಪ್ರಜ್ಞೆಯಲಿ
ಅವರನು ತಡೆಯೆ ಪುರೋಚನ ಬಂದಿರೆ ನೂಕಿದರವನ ಅವಜ್ಞೆಯಲಿ
‘ಪಾಂಡವರೊಂದಿಗೆ ನೀವೂ ಸಾಯಿರಿ’ ಎನ್ನುತ ಹೇಳಿ ಪುರೋಚನನು
ಅರ್ಧರಾತ್ರಿಯಲಿ ಬೆಂಕಿಯ ಹಚ್ಚುವ ಎನ್ನುತ ತಾನೂ ಮಲಗಿದನು!
ಪಾಂಡವರೆಲ್ಲರು ಎಚ್ಚರವಿದ್ದರು ಎಲ್ಲವ ಗಮನಿಸಿ ನೋಡಿದರು
ತಂತ್ರಕೆ ಪ್ರತಿತಂತ್ರವ ಹೆಣೆಯುತ್ತಲಿ ಚಿಂತನ ಮಂಥನ ಮಾಡಿದರು
ಅರಗಿನ ಆ ಮನೆ ಹಿಂಬದಿ ಗೋಡೆಗೆ ಕಿಂಡಿಯ ಕೊರೆದರು ರಾತ್ರಿಯಲಿ
ಕಿಂಡಿಯ ಮೂಲಕ ಎಲ್ಲರೂ ಹೊರಗೆ ನಡೆದುಬಂದಿರಲು ಖಾತ್ರಿಯಲಿ
ಭೀಮನು ಕತ್ತಲಿನಲ್ಲಿಯೇ ಬರುತಲಿ ಚಿಲಕವ ಹಾಕಿದ ಬಾಗಿಲಿಗೆ
ಬೆಂಕಿಯನಿಕ್ಕುವ ಸಮಯಕೆ ಕಾಯುತಲಿದ್ದ ಪುರೋಚನ ಮನೆಯೊಳಗೆ
ಭೀಮನು ಕೂಡಲೆ ಬೆಂಕಿಯ ಹಚ್ಚಿದ ಅರಗಿನ ಸದನಕೆ ಹೊರಗಿಂದ
‘ಅಯ್ಯೋ ರಕ್ಷಿಸಿ!’ ಕೂಗುತಲಿದ್ದನು ದುಷ್ಟ ಪುರೋಚನ ಒಳಗಿಂದ!

ಮಾಡಿದ್ದುಣ್ಣು ಮಹರಾಯನೆ ಈ ದಿನ ತಪ್ಪಿಸಲಾಗದು ಪರರಿಂದ
ಮಾಡಿದ್ದೆಲ್ಲವು ಸರಿಯಿರದೆಂದಿಗೂ ಫಲ ದೊರೆಯುತ್ತದೆ ಅದರಿಂದ
ಕಾಡಿದ್ದಾದರೆ ಪರರನ್ನು ಜಗದಲಿ ಪಡೆದದ್ದೇ ಫಲ ಕೃತಿಯಿಂದ
ಮಾಡಿದ್ದಾದರೆ ಪರರಿಗೆ ಹಿತವನ್ನು ಪಡೆಯಬಹುದು ಫಲ ಹಿತದಿಂದ!

ಅರಗಿನ ಅರಮನೆ ಧಗಧಗ ಉರಿಯುತ ಕರಗುತ ಧರೆಯಲ್ಲಿ ಉರುಳಿತ್ತು
ತಾನೇ ಒಡ್ಡಿದ ಖೆಡ್ಡದ ಒಳಗೆ ಪುರೋಚನ ದೇಹವು ಉರಿದಿತ್ತು
ಬೇಡತಿ ಐವರು ಮಕ್ಕಳ ಸಂಗಡ ತಾನೂ ಉರಿದಳು ಮನೆಯಲ್ಲಿ
ಉಳಿದವು ಅಲ್ಲಿನ ಅರಗಿನಮನೆಯಲಿ ಕರಕಲು ದೇಹವು ಕೊನೆಯಲ್ಲಿ
ಪುರದಲಿ ಹಾಹಾಕಾರವು ಎದ್ದಿತು ಮುಂದಿನ ಕೆಲವೇ ಕ್ಷಣದಲ್ಲಿ
ಜನತೆಯು ಎಚ್ಚರಗೊಳ್ಳುವ ವೇಳೆಗೆ ಏನೂ ಉಳಿದಿರಲಿಲ್ಲಲ್ಲಿ!
ಸೂರ್ಯೋದಯದಲಿ ಊರಿಗೆ ಊರೇ ಅರಗಿನಮನೆ ಬಳಿ ನೆರೆದಿತ್ತು
ಪಾಂಡವರೆಲ್ಲರು ಅಳಿದರು ಎನ್ನುವ ಚಿಂತೆಯ ಕಡಲಲಿ ಮುಳುಗಿತ್ತು
ಕರಕಲು ದೇಹವ ನೋಡಿದ ಮಂದಿಯು ಆ ದುರ್ಘಟನೆಗೆ ಮರುಗಿದರು
ಎಂಥ ದುರಂತವು ಬಂದಿತು ಎನ್ನುತ ಚಿಂತೆಯ ಮಾಡುತ ಕೊರಗಿದರು!
ಹಸ್ತಿನಪುರದಲಿ ಸೂತಕ ಕವಿಯಿತು ಪಾಂಡವರಳಿದರು ಎನ್ನುತ್ತ
ಪುರದಲಿ ಪ್ರಜೆಗಳು ಗೋಳಿಡುತಿದ್ದರು ಕೈಗಳ ಚಾಚುತ ಬಾನತ್ತ
ಧೃತರಾಷ್ಟ್ರನು ತನಗೇನೂ ಅರಿಯದ ತೆರದಲಿ ಇದ್ದನು ನಟನೆಯಲಿ
ದುರ್ಯೋಧನನದು ತೋರಿಕೆ ಸಂಕಟ ಅರಮನೆ ಮಂದಿಯ ಎದುರಲ್ಲಿ!
ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮರು ಶೋಕದ ಮಡುವಲ್ಲಿ ಮುಳುಗಿದರು
ಪಾಂಡವರಾತ್ಮಕ್ಕೆ ಶಾಂತಿಯ ಕೋರುತ ಅಂತ್ಯವಿಧಿಗಳನು ಮುಗಿಸಿದರು
ವಿದುರನು ಒಬ್ಬನೆ ಪಾಂಡವರಂತ್ಯಕ್ಕೆ ಮರುಗದೆ ಕೊರಗದೆ ಇದ್ದವನು
ಪಾಂಡವರೆಂದೂ ಅಳಿಯರು ಎನ್ನುವ ಸತ್ಯವ ಮನಗಂಡಿದ್ದವನು
ವಿದುರನು ಪಾಂಡವರೈವರ ಮನಸಿಗೆ ಮೊದಲೇ ಸೂಚನೆ ನೀಡಿದ್ದ
‘ಸಂಚುಗಳೇನೋ ನಡೆಯುತಲಿರುವುವು’ ಎಂಬುದನವರಿಗೆ ಅರುಹಿದ್ದ
ಕುಂತಿಗೆ ಮಕ್ಕಳ ರಕ್ಷಿಸಿಕೊಳ್ಳಲು ಕಿರುಸಂದೇಶವ ಕೊಟ್ಟಿದ್ದ
ಸಂಚುಗಳರಿಯದ ಪಾಂಡವರುಳಿಸಲು ತಾನೂ ಕಂಕಣ ತೊಟ್ಟಿದ್ದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಂಡ ಬೇರುಗಳ ಕಲರವ
Next post ವಚನ ವಿಚಾರ – ಕೈಲಾಸ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys