ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ

ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ

ಅದೇನೋ ಮುಂಬಯಿ ಎಂದೊಡನೇ ವ್ಯಾಸರಾಯಬಲ್ಲಾಳರು ನೆನಪಾಗುತ್ತಾರೆ ಅಥವಾ ವ್ಯಾಸರಾಯ ಬಲ್ಲಾಳರೆಂದೊಡನೇ ಮುಂಬಯಿ ನೆನಪಾಗುತ್ತದೆ. ಅಂದರೆ ಅವರೆಡರ ಅವಿನಾಭಾವ ಸಂಬಂಧವನ್ನು ನಾವು ಹೇಳಿದಂತಾಯಿತು. ಉದ್ಯೋಗವನ್ನರಸಿ ತಮ್ಮ ಯೌವನದಲ್ಲಿಯೇ ಮುಂಬಯಿ ಸೇರಿದ ವ್ಯಾಸರಾಯ ಬಲ್ಲಾಳರಿಗೆ “ನುಡಿ” ಪತ್ರಿಕೆಯ ಸಂಪಾದಕತ್ವವೂ ಸೇರಿದಂತೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅವರಿಂದ ದೂರವಾಗಲೇ ಇಲ್ಲ. ಅವರ ಸೃಜನಶೀಲತೆ ಚಿಗುರೊಡೆಯಲು ಮುಂಬಯಿ ಪ್ರೇರಣೆ ಮತ್ತು ಪೋಷಣೆ ನೀಡಿದ್ದು ಕನ್ನಡ ಕಾದಂಬರೀ ಲೋಕದ ಒಂದು ಭಾಗ್ಯ. ಇದೀಗ ಅವರು ಬೆಂಗಳೂರಿಗೆ ಬಂದು ನೆಲೆಸಿದ್ದು, ಅವರ ಮನೆಯ ಹೆಸರೂ ‘ಉತ್ತರಾಯಣ’. ಆದರೂ ಅವರನ್ನು ನಾವು ಮುಂಬೈ ಮೂಲದಿಂದಲೇ ನೆನೆಯುತ್ತೇವಲ್ಲ, ಅದೇ ಅವರ ವಿಶೇಷ.

ಆರು ದಶಕಗಳ ಕಾಲ ಕನ್ನಡ ಕಥಾ ಪ್ರಕಾರದಲ್ಲಿ ನಿರಂತರವಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ವಸ್ತುವೈವಿಧ್ಯದಲ್ಲಿ ಅಭಿವ್ಯಕ್ತಿ ವಿಧಾನದಲ್ಲಿ ಕನ್ನಡ ಕಥಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದವರು ಅವರು. ಪ್ರಗತಿಶೀಲ ಚಳವಳಿಯಿರಬಹುದು. ನವೋದಯ ಸಂಪ್ರದಾಯದ ರೀತಿ ಇರಬಹುದು. ನವ್ಯಪ್ರಜ್ಞೆಯ ಪ್ರಭಾವ ಇರಬಹುದು. ಈ ಎಲ್ಲವನ್ನೂ ಬಲ್ಲಾಳರು ತಮ್ಮ ಸೃಜನಶೀಲತೆಯಿಂದಲೇ ಮುಖಾಮುಖಿಯಾಗಿಸಿಕೊಂಡಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ಅವರು ತಮ್ಮನ್ನು ತಾವು ಸಮೀಕರಿಸಿಕೊಳ್ಳದೇ ಅನನ್ಯವೆಂಬಂತೆ ಬರೆಯುತ್ತಾ ಬಂದಿದ್ದಾರೆ. ಆದರೂ ಪ್ರಗತಿಶೀಲರ ಪಟ್ಟಿಯಲ್ಲಿ ಅವರದು ಪ್ರಮುಖ ಹೆಸರು. ಅ.ನ.ಕೃ., ನಿರಂಜನ, ಚದುರಂಗರಂತೆ ಇವರೂ ಆ ಪಂಥದಲ್ಲಿದ್ದೂ ಪಂಥವನ್ನು ಮೀರಿ ಬೆಳೆದವರು.

ಕನ್ನಡ ಸಾಹಿತ್ಯ ಲೋಕವು ಅವರನ್ನು ಕಾದಂಬರಿಕಾರರಾಗಿಯೇ ಗುರುತಿಸಿದೆ. ‘ಅನುರಕ್ತ’, ‘ಹೇಮಂತಗಾನ’, ‘ವಾತ್ಸಲ್ಯಪಥ’, ‘ಉತ್ತರಾಯಣ’, ‘ಬಂಡಾಯ’, ‘ಆಕಾಶಕ್ಕೊಂದು ಕಂದೀಲು’, ‘ಹೆಜ್ಜೆ’, ‘ಹೆಜ್ಜೆ ಸಾಲು’ – ಎಂಬ ಮಹತ್ವದ ಕಾದಂಬರಿಗಳಲ್ಲದೇ, ‘ನಾನೊಬ್ಬ ಭಾರತೀಯ ಪ್ರವಾಸಿ’ ಎಂಬ ಪ್ರವಾಸ ಪ್ರಬಂಧವನ್ನೂ, ‘ಸಮಗ್ರ ಭಾರತಾಯಣ’ ಎಂಬ ವಿಡಂಬನೆಯನ್ನೂ, ‘ಕಟ್ಟುವೆವು ನಾವು’, ‘ಸ್ವಾತಂತ್ರ್ಯಕ್ಕೆ ಐವತ್ತು ವರ್ಷ’ ಎಂಬ ವಿಮರ್ಶೆಯನ್ನೂ, ‘ಖುರ್ಷಿದ್‌ ನಾರಿಮನ್’ ಎಂಬ ಮಕ್ಕಳ ಪುಸ್ತಕವನ್ನೂ, ‘ಮುಳ್ಳೆಲ್ಲಿದೆ ಮಂದಾರ’ (ಪಿಗ್ಮೇಲಿಯನ್) ‘ಗಿಣಿಯು ಪಂಜರದೊಳಿಲ್ಲ’ (ಡಾಲ್ಸ್ ಹೌಸ್) ಎಂಬ ನಾಟಕಾನುವಾದಗಳನ್ನೂ ರಚಿಸಿದ್ದಾರೆ. ‘ಕಲಾವಿದ ಹೆಬ್ಬಾರರ ರೇಖಾಲಾವಣ್ಯ’, ‘ಮುಂಬಯಿ ದಿನಾಂಕ’, ‘ಆಧುನಿಕ ಸಾಹಿತ್ಯ ಮೀಮಾಂಸೆ’, ‘ಮುಂಬಯಿ ನಂಟು ಮತ್ತು ಕನ್ನಡ – ಅವರ ಇತರ ಕೃತಿಗಳು. ಇವಲ್ಲದೇ ಅವರ ‘ಸಮಗ್ರ ಕತೆ’ಗಳನ್ನು ಅಂಕಿತ ಪ್ರಕಾಶನವು ಇದೀಗ ಪ್ರಕಟಿಸಿದೆ.

ವ್ಯಾಸರಾಯ ಬಲ್ಲಾಳರಂತೆಯೇ ಇನ್ನೊಂದಷ್ಟು ಮಂದಿ ಮುಂಬೈ ಲೇಖಕರಿದ್ದಾರೆ. ಇವರೆಲ್ಲರೂ ಸಾಹಿತ್ಯಕ ಸಂಬಂಧದಿಂದಾಗಿ ದೂರದಲ್ಲಿದ್ದರೂ ಅಪರಿಚಿತರಲ್ಲ. ಇವರು ನಮ್ಮ ಒಳಲೋಕದಲ್ಲಿ ಬಿಚ್ಚಿಕೊಳ್ಳುವ ಹೊರಲೋಕದವರು, ಹೊರನಾಡ ಕನ್ನಡಿಗರು. ಬಲ್ಲಾಳರೊಂದಿಗೆ ಕೂಡಲೇ ನೆನಪಾಗುವ ಎರಡು ಹೆಸರುಗಳೆಂದರೆ ಯಶವಂತ ಚಿತ್ತಾಲ ಮತ್ತು ಶಾಂತಿನಾಥ ದೇಸಾಯಿ. ಎಸ್.ಎಲ್. ಭೈರಪ್ಪನವರು ತಮ್ಮ ಕೆಲವು ಕಾದಂಬರಿಗಳಲ್ಲಿ – ಉದಾಹರಣೆಗೆ ‘ಜಲಪಾತ’ – ಮುಂಬೈ ಜೀವನವನ್ನು ಚಿತ್ರಿಸಿದ್ದಾರೆ. ಗೌರೀಶ ಕಾಯ್ಕಿಣಿ, ಜಯಂತ ಕಾಯ್ಕಿಣಿ, ಅರವಿಂದ ನಾಡಕರ್‍ಣಿ, ಗಂಗಾಧರ ಚಿತ್ತಾಲ, ಕವಿಗಳಾಗಿ ಹೆಸರು ಮಾಡಿದ್ದು, ತಾಳ್ತಜೆ ವಸಂತಕುಮಾರ್‌, ಗಿರಿಜಾಶಾಸ್ತ್ರಿ, ಸುನೀತಾಶೆಟ್ಟಿ, ವಿಮರ್ಶೆಗಾಗಿ ಹೆಸರಾದವರು. ಹೊರನಾಡ ಕನ್ನಡಿಗರಾದ ಬಾ ಸಾಮಗ, ಅರ್ತಿಕಜೆ ಕೃಷ್ಣಭಟ್‌, ವಿದ್ಯಾಧರ ಮುತಾಲಿಕ್ ದೇಸಾಯಿ. ಇನ್ನೆಷ್ಟೋ ಹೆಸರುಗಳು – ಇಲ್ಲಿ ನಾನು ಮರೆತವರು ಅಥವಾ ಬಿಟ್ಟು ಹೋದವರೆಷ್ಟೋ!

ಒಟ್ಟು ಇವರೆಲ್ಲರ ಮೂಲಕ ನಮಗೆ ಮುಂಬಯಿಯ ಎಷ್ಟೋ ಸ್ಥಳಗಳು ಪರಿಚಿತ – ಕುರ್‍ಲಾ, ಮಾಹಿಂ, ಮೆರೀನಾ ಬೀಚ್, ಬೀಚ್ ಕ್ಯಾಂಡಿ, ಚರ್ನಿರೋಡ್, ಚೌಪಾಟಿ, ಜುಹೂ ಬೀಚ್, ಮಹಾಲಕ್ಷ್ಮಿ, ಜೋಗೇಶ್ವರಿ, ಮಹಾಬಲೇಶ್ವರ್, ಪ್ರಭಾದೇವಿ (ರೈಲ್ವೇ ಸ್ಟೇಷನ್) ಇವೆಲ್ಲಾ ಪಠ್ಯದ ಸಾಂಸ್ಕೃತಿಕ ಸಹವಾಸದ ಮೂಲಕ ನಮ್ಮ ಊರುಗಳ ಹೆಸರು ಗಳಂತೇ ನಮಗೇ ಪರಿಚಿತವೆನಿಸಿ, ಇವು ಕರ್ನಾಟಕದ ಹೊರಗಿರುವ ಯಾವುದೋ ಸ್ಥಳಗಳೆನ್ನಿಸದೇ ನಮ್ಮ ಸುತ್ತಮುತ್ತಲೇ ಇರುವ ಎಂ.ಜಿ. ರಸ್ತೆ, ಮಾಗಡಿ ರಸ್ತೆ, ಮೆಜೆಸ್ಟಿಕ್, ಮಾರ್ಕೆಟ್ ಅಥವಾ ಶಿವಮೊಗ್ಗ, ಶಿರಾ, ಗುಲ್ಬರ್ಗಾ, ಬೀದರ್, ಮಂಡ್ಯ ಎಂಬಂತೆ ಪರಿಚಿತವೆನ್ನಿಸುತ್ತವೆ. ಹೀಗೆ ಮುಂಬಯಿ ನನ್ನೊಳಗೆ ಇಳಿದುದರಿಂದ ಜೀವಮಾನದಲ್ಲೊಮ್ಮೆ ಮುಂಬಯಿ ನೋಡಬೇಕು ಎಂಬ ಆಸೆ ನನ್ನದಾಗಿದೆ. ಅದು ಒಂದು ವ್ಯಸನವಾಗಿ ನನ್ನನ್ನು ಕಾಡುತ್ತಿದೆ. ಹೀಗಾಗಿ ‘ಮುಂಬಯಿ ಮತ್ತು ವ್ಯಾಸರಾಯಬಾಳ’ ಎಂಬ ವಿಷಯವನ್ನೇ ನಾನು ಆಯ್ದು ಕೊಂಡೆ.

ವ್ಯಾಸರಾಯ ಬಲ್ಲಾಳರ ಅನೇಕ ಕತೆಗಳು ವೃದ್ಧಾಪ್ಯ, ನಿವೃತ್ತಿ, ವಿಧವೆ, ವಿಧುರ, ಒಬ್ಬಂಟಿ – ಹೀಗೆ ಸುತ್ತಿದರೂ ಅವರ ಕಾದಂಬರಿಗಳು ಮಾತ್ರ ನಮ್ಮನ್ನು ಹೊಸದೊಂದು ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. “ಮುಂಬೈ ನಂಟು ಮತ್ತು ಕನ್ನಡ” ಎಂಬ ಅವರ ಇತ್ತೀಚಿನ ಪುಸ್ತಕದಲ್ಲಿ “ನೆನೆವುದೆನ್ನ ಮನಂ ಮುಂಬಯಿಯಂ” ಎಂದು ಹೇಳುವ ಮಾತು ಪಂಪನ ‘ನನವುದೆನ್ನ ಮನಂ ಬನವಾಸಿ ದೇಶಮಂ’ ಎಂಬ ಮಾತನ್ನು ನೆನಪಿಗೆ ತರುತ್ತದೆ.

೧೯೬೯ರಲ್ಲಿ ಮೊದಲ ಮುದ್ರಣ ಕಂಡು ಅನಂತರ ಮತ್ತೆ ಮೂರು ಮುದ್ರಣಗಳನ್ನು ಕಂಡ ಅವರ ‘ಉತ್ತರಾಯಣ’ ಅವರ ಇತರ ಕಾದಂಬರಿಗಳಂತೆಯೇ ಜನಪ್ರಿಯ. “ಇದು ಮುಂಬಯಿ ಮಹಾ ಶಹರದ ಮಧ್ಯಮ ಹಾಗೂ ಮಧ್ಯಮೋತ್ತರ ವರ್ಗಗಳ ಜೀವನದ ಹಿನ್ನೆಲೆಯಲ್ಲಿ ರಚಿಸಲಾಗಿರುವ ಕಾದಂಬರಿ, ಉತ್ತರಾಯಣ ಬಂದಾಗ ಸ್ವರ್ಗದ ಬಾಗಿಲು ತೆರೆಯುವುದರಿಂದ ಸಾವು ಉತ್ತರಾಯಣದಲ್ಲೇ ಬರಬೇಕು ಎನ್ನುವ ಸಾಮಾನ್ಯವಾದ ನಂಬಿಕೆಯನ್ನು, ನೋವನ್ನು ಸಾವಿನಂತೆ ಕಾಣಬೇಕಾಗಿ ಬರುವ ಈ ಕಾದಂಬರಿಯ ಹೆಚ್ಚಿನ ಪಾತ್ರಗಳ ಮಾನಸಿಕ ಕ್ರಿಯೆಯನ್ನು ಚಿತ್ರಿಸುವ ಸಂಕೇತವಾಗಿ ಬಂದಿದೆ” ಎನ್ನುವ ಲೇಖಕರು “ಒಂದಲ್ಲ ಒಂದು ಕಾರಣದಿಂದ ಜೀವನದ ಕುರಿತಾದ ರುಚಿಯನ್ನು ಶ್ರದ್ಧೆಯನ್ನು ಕಳೆದುಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾದರೂ ಅಂಥ ಅತೃಪ್ತಿಯ ಆಳದಲ್ಲೂ, ಸುಖದ ಸ್ವರ್ಗದ ಕನಸು ಪ್ರಕಟವಾಗುತ್ತದೆ’ ಎಂದು ಮುನ್ನುಡಿಯಲ್ಲಿ ತಾತ್ವಿಕವಾಗಿ ಗುರುತಿಸಿದ್ದರೂ ಇಡೀ ಕಾದಂಬರಿಯ ಪ್ರತಿಯೊಂದು ವಾಕ್ಯವೂ ಪ್ರತಿಯೊಂದು ಪದವೂ ತಾತ್ವಿಕತೆಯನ್ನು ಮೀರಿದಂತಹ ಜೀವಂತಿಕೆಯಿಂದ ಪುಟಿಯುತ್ತಿದ್ದು, ನಮ್ಮ ಅಂತರಂಗವನ್ನು ಆಳವಾಗಿ ಕಲಕುತ್ತದೆ, ಶೋಧಿಸುತ್ತದೆ. ಹೀಗಿದ್ದೂ ಇದನ್ನು ಮಾನಸಿಕ ದೂರದಲ್ಲಿ ನಿಂತು ತಾತ್ವಿಕತೆಯಿಂದ ನೋಡುವುದಿದೆಯಲ್ಲಾ ಅದು ಈ ಕಾದಂಬರಿಯ ಮೋಹನನಂತೆಯೇ ಲೇಖಕರಿಗೂ ಸಿದ್ಧಿಸಿರುವ ಅದ್ಭುತ ಶಕ್ತಿ. ಆ ಕಾರಣದಿಂದ ಮಾತ್ರ ಇಲ್ಲಿ ತಾತ್ವಿಕತೆಯನ್ನು ಆರೋಪಿಸಬಹುದೇ ಹೊರತು, ಏಕೆ ಹೀಗಾಯಿತು ಎಂದೋ ಏಕೆ ಹೀಗಾಗುತ್ತಿದೆ ಎಂದೋ ನಮ್ಮ ಅಂತರಂಗದಲ್ಲೇಳುವ ಪ್ರಶ್ನೆಗಳಿಗೆ ಬದುಕಿನಲ್ಲಿ ಉತ್ತರವಿಲ್ಲ. ಹೀಗಾಗಿ ಈ ಕಾದಂಬರಿ ಬದುಕಿಗೆ ಬಲು ಸಮೀಪ.

‘ಡೇವಿಸ್ ಅಂಡ್ ಬ್ರೌನ್’ನ ಮಾಲೀಕ ಅವಿನಾಶ್ ಮೇಧಾಗ ತುಂಬಾ ಬೇಕಾದವನಾದ ಮೇಧಾವಿ ಮೇಲಧಿಕಾರಿ ಮೋಹನರಾವ್. ಅವನ ಬದುಕಿನಲ್ಲಿ ನಾನಾ ಕಾರಣಗಳಿಂದ ನಾನಾ ಹಂತಗಳಲ್ಲಿ, ನಾನಾ ರೀತಿಯಲ್ಲಿ ಬಂದು ಹೋಗುವ ಸುಮತಿ, ಜ್ಯೋತ್ಸ್ನಾ, ಡೋರಿಸ್ ವಾರ್ಟ್, ರುಕ್ಮಿಣಿ ಮತ್ತು ಹೇಮಾ ಇವರುಗಳ ಕಥೆ ಇದು ಎಂದು ನಾವು ಸ್ಥೂಲವಾಗಿ ಹೇಳಬಹುದಾದರೂ ಇತರರಾದ ಆನಂದರಾವ್, ಶಂಕರಧೋತ್ರ, ಗೋವಿಂದ, ಗೌರಾ, ಸಾವಿತ್ರಮ್ಮ, ಹೇಮಾಳ ಗಂಡ ಗಿರೀಶ – ಎಲ್ಲರೂ ಮುಖ್ಯವೇ ಆಗುತ್ತಾರೆ. ಮೋಹನನ ಆಫೀಸಿನ ಪರಿಸರ, ಆಫೀಸಿನಿಂದ ರುಕ್ಷ್ಮಿಣಿ ತನ್ನ ಮನೆಗೆ ಹೋಗುವ ದಾರಿ, ಪಿಲ್ಲೂ ವಾಲಿಯಾಳ ಹೂದೋಟ, ಪ್ರತಿಯೊಂದೂ ನಮಗೆ ಆತ್ಮೀಯವಾಗುತ್ತಾ, ಹೃದಯದಲ್ಲಿಳಿಯುತ್ತಾ ಹೋಗುತ್ತದೆ. ರುಕ್ಷ್ಮಿಣಿ, ಮದುವೆಯಾಗಿ ಒಂದು ವರ್ಷಕ್ಕೆ ಗಂಡನನ್ನೂ ಅನಂತರದ ಒಂದು ವರ್ಷಕ್ಕೆ ಮಗನನ್ನೂ ಕಳೆದುಕೊಂಡ ನತದೃಷ್ಟೆ. ಋತುಸ್ನಾನದ ದಿನ ಸತ್ತ ಮಗನ ನೆನಪಿನಲ್ಲಿ ಅವಳು ಆಫೀಸಿನ ಕೆಲಸದಲ್ಲಿ ಮಾಡಿದ ತಪ್ಪಿನ ಮೂಲಕ ಮೋಹನನಿಗೆ ಅವಳ ಬಗ್ಗೆ ಅನುಕಂಪ ಹುಟ್ಟುತ್ತದೆ. ಅವನ ಅನಾರೋಗ್ಯದಿಂದಾಗಿ ಅವನ ಮನೆಗೇ ಆಫೀಸಿನ ಕೆಲಸಕ್ಕೆಂದು ಹೋದ ರುಕ್ಷ್ಮಿಣಿ ತನ್ನ ಸಂಸಾರದ ಹಲ್ಲಂಡೆಯನ್ನು ಅವನಿಗೆ ತಿಳಿಸಿದಾಗ, ಅವಳ ತಾಯಿ ಸತ್ತ ದಿನ ಅವಳ ಮನೆಗೆ ಬ೦ದ ಮೋಹನ, ಅವಳಿಗೆ ಆತ್ಮೀಯನಾಗುತ್ತಾನೆ. ಒಳಗೊಳಗೇ ಅವನನ್ನು ಆರಾಧಿಸುತ್ತಿದ್ದ ರುಕ್ಷ್ಮಿಣಿಗೆ ಪಿಲ್ಲೂ ವಾಲಿಯಾ ಬಾಯಿ ಚಪಲಕ್ಕೆಂದು ಹೇಳಿದ ‘ರಾವ್‌ನ ಪ್ರೀತಿಯ ಹುಡುಗಿ’ ಎಂಬ ಮಾತಿನಿಂದ ಬದುಕಿನಲ್ಲಿ ಉತ್ಸಾಹ ಮೂಡುತ್ತದೆ. ರುಕ್ಷ್ಮಿಣಿಯ ಬಗ್ಗೆ ಮೋಹನರಾವ್‌ಗೆ ಆಸಕ್ತಿ ಹುಟ್ಟಿದ್ದೇ ಹೇಮಾವತಿಯ ಮುಖದ ಹೋಲಿಕೆಯಿಂದ. ಅಲ್ಲದೇ ಹೆಂಡತಿಯನ್ನು ಕಳೆದುಕೊಡು ಡೋರಿಸ್ ವಾರ್ಟ್ ಜೊತೆ ಸಂಬಂಧವೂ ಇರುವ ಮೋಹನನಿಗೆ ಹೇಮಾಳ ಸಲುಗೆ ಇಷ್ಟವಾಗುತ್ತದೆ. ಡೋರಿಸ್ ದೇಶಬಿಟ್ಟು ಹೋಗಿದ್ದೂ ಇದಕ್ಕೆ ಪೂರಕ. ಅಕ್ಕತಂಗಿಯರ ಸ್ವಭಾವವನ್ನೇ ಹೋಲಿಸುತ್ತಿದ್ದ ಅವನಿಗೆ ರುಕ್ಷ್ಮಿಣಿಯ ಮಡಿವಂತಿಕೆ ಇಲ್ಲದಿರುವುದರಿಂದ ರುಕ್ಷ್ಮಿಣಿಯ ಮತ್ತು ಅವನ ಭಾವನೆಗಳು ಎಂದೂ ಒಂದುಗೂಡುವಂಥವಲ್ಲ ಎಂಬ ಅರಿವು ಓದುಗರಿಗೇ ಮೊದಲಿನಿಂದಲೂ ಆಗುತ್ತದೆ. ಸಾವಿತ್ರಮ್ಮ ಸತ್ತ ದಿನದಿಂದ ಹೇಮಾ ಅವನ ಬದುಕಿನಲ್ಲಿ ಪ್ರವೇಶ ಮಾಡಿ, ಅವನ ಮತ್ತು ಅವಳ ಸಂಬಂಧ ಅನಿರೀಕ್ಷಿತ ತಿರುವು ತೆಗೆದುಕೊಳ್ಳುವಾಗಲೇ ರುಕ್ಮಿಣಿಯ ದುರಂತ ಸೂಚಿತವಾಗಿದೆ. ಇದರ ಜೊತೆಗೆ ತಾಯಿಯ ಸಾವು, ತಂಗಿಯ ಭವಿಷ್ಯ, ಹೇಮಾಳ ಬದುಕಿನ ಅನಿಶ್ಚಯತೆ, ಈ ಎಲ್ಲದರ ನಡುವೆ ಊರುಗೋಲಾಗಿದ್ದ ಮೋಹನನನ್ನು ಹೇಮಾ ಜೊತೆಗೆ ಕಂಡಷ್ಟರಿಂದಲೇ ಅವಳ ಕನಸಿನ ಸೌಧ ಬಿದ್ದಂತಾಗಿ ನೇಣು ಹಾಕಿಕೊಳ್ಳುವ ರುಕ್ಮಿಣಿ ಈ ಕಾದಂಬರಿಯ ಒಂದು ಅತಿಯಾದರೆ ಹೇಮಾ ಇನ್ನೊಂದು ಅತಿ, ಆಗ ಅವಳಿಗೆ ಅಣ್ಣ ಸತ್ತಿರುವುದೂ ತಿಳಿದಿರುವುದಿಲ್ಲ. ಅದೇ ಹೇಮಾ ಅಣ್ಣ, ಅಕ್ಕ ಸತ್ತುದನ್ನು ತಿಳಿದೂ ತಂಗಿ ಗೌರಾ ಬಗ್ಗೆಯೂ ಯೋಚಿಸದೇ ದೆಹಲಿಯ ರೈಲು ಹತ್ತುತ್ತಾಳೆ. ಆ ವಿಷಯವನ್ನು ಮೋಹನ ಪತ್ತೆ ಮಾಡಿಸಿದ್ದಾನೆ. ರುಕ್ಷ್ಮಿಣಿಯ ಸಾವಿಗಾಗಲೀ ಗೋವಿಂದನ ಸಾವಿಗಾಗಲೀ ಮೋಹನನ ಬಳಿಯಲ್ಲಿ ಒಂದು ದುಃಖದ ಮಾತಿಲ್ಲ. ಬದಲಾಗಿ ಹೇಮಾಗೆ ಅವಳ ದಾರಿ ಗುರಿ ಗೊತ್ತಿದೆ ಎಂಬ ಭರವಸೆ ಅವನಿಗಿದೆ. ಜೊತೆಗೆ ಅವನು ಕಂಪೆನಿಗೆ ರಾಜೀನಾಮೆ ಕೊಟ್ಟಿದ್ದಾನೆ. ಮುಂದಿನದನ್ನು ಊಹಿಸುವವರು ಊಹಿಸ ಬಹುದು. ಆದರೆ ಕಾದಂಬರಿಯ ಕೊನೆಯ ವಾಕ್ಯ ಜೊತ್ಸ್ನಾ ಜೊತೆ ಅವನು ಆಡುವ ಮಾತೇ ಆಗಿದೆ.

ಬಲ್ಲಾಳರ ಎಲ್ಲ ಕಾದಂಬರಿಗಳಲ್ಲೂ ಮುಂಬಯಿಯ ವಿವರವಾದ ಚಿತ್ರಣ ಬರುತ್ತದೆ. ಹಾಗೆ ನೋಡಿದರೆ ಬೆಂಗಳೂರನ್ನೇ ಇದುವರೆಗೂ ಯಾವ ಕಥೆಗಾರರೂ ಹಾಗೆ ವರ್ಣಿಸಿಲ್ಲವಂತೆ. ಅಪರಿಚಿತ ಊರೊಂದು ನಮ್ಮೊಳಗಿಳಿಯುವ ಪರಿಗೆ ‘ಉತ್ತರಾಯಣ’ದಿಂದ ಒಂದು ಉದಾಹರಣೆ – ರೈಲ್ವೇ ಸ್ಟೇಷನ್ನಿನ ಒಂದು ಚಿತ್ರ (ಪುಟ ೨೪) : ದಿನದ ದುಡಿಮೆ ಮುಗಿಸಿ ಮನೆ ಸೇರುವ ಆಸೆಯಿಂದ, ನಿತ್ಯದ ನಿಯಮಿತ ಗಾಡಿ ಹಿಡಿಯುವ ಆಸೆಯಿಂದ, ನಿಲ್ಮನೆಯ ಮಹಾದ್ವಾರಗಳಿಂದ ಒಳಗೆ ನುಗ್ಗುತ್ತಿದ್ದ ಜನಪ್ರವಾಹ, ಎಂಥೆಂಥ ಜನ, ಸಮವಸ್ತ್ರದಂತೆ, ಪ್ಯಾಂಟು, ಶರ್ಟುಗಳಿಂದ ಅಲಂಕೃತರಾಗಿ ಸಾಗುತ್ತಿದ್ದ ಸಾವಿರಗಟ್ಟಲೆ ಜನ. ಅಲ್ಲಿ ಕೂಡ ಎಂಥ ವೈವಿಧ್ಯ! ಬಕ್ಕತಲೆ, ಗುಂಗುರು ಕೂದಲು, ನೆರೆತ ಕೂದಲು, ವೇಷಭೂಷಣಗಳಲ್ಲಿ ಟೈ, ಟೊಪ್ಪಿಗೆಗಳ ಹಲವಾರು ಮಾದರಿಗಳು, ಮಾತು ಕೂಡಾ ಮರಾಠಿ, ಇಂಗ್ಲೀಷ್, ಮಲೆಯಾಳೀ, ಗುಜರಾತಿ, ಕನ್ನಡ – ಪರಿಚಿತ ವಾಸನೆ, ಅವರ ಜೊತೆಗೇ ತೇಲಿಕೊಂಡು ಬರುತ್ತಿದ್ದ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣುತ್ತಿದ್ದ ಬಾಡಿದ ಮೊಗ್ರಾ ದಂಡೆಗಳ ಸುಗಂಧ – ಬೆವರು, ಪೌಡರ್‌, ಪರಿಮಳದ ಕೂದಲೆಣ್ಣೆಗಳ ಮಿಶ್ರಣದಿಂದಾಗಿ ಹರಡಿದ್ದ ಪರಿಚಿತ ಕಂಪು-ಬಲ್ಲಾಳರ ಅಭಿಪ್ರಾಯದಲ್ಲೇ ಮುಂಬಯಿ ಎಂದರೆ “ಕನಸು ಭ್ರಮೆಗಳನ್ನು ಹೊಂದಿಸುವ ಮಹಾನಗರ, ದೇಶದ ಬೊಕ್ಕಸಕ್ಕೆ ನಲವತ್ತು ಸಾವಿರ ಕೋಟಿಗಳಿಗಿಂತಲೂ ಹೆಚ್ಚಿನ ಆದಾಯ ಹೊಂದಿಸುವ ಈ ಮಹಾನಗರ ದೇಶದ ವಾಣಿಜ್ಯ ರಾಜಧಾನಿ ಇದು ತಂದ, ತರುತ್ತಿರುವ ಸಾಮಾಜಿಕ ಕ್ರಾಂತಿಯ ಒಳನೋಟಗಳು ಜಾತೀಯತೆ ಮೀಸಲಾತಿಗಳ ಪ್ರಶ್ನೆಯನ್ನು ಅದು ಎದುರಿಸುತ್ತಿರುವ ರೀತಿ ಇಂದು ಪ್ರಸ್ತುತ”. ತಮ್ಮ ವ್ಯಕ್ತಿತ್ವ ರೂಪಿಸಲು ನೆರವಾದ, ಅನುಭವ ಪ್ರಪಂಚದ ವಿಸ್ತಾರಕ್ಕೆ ಕಾರಣವಾದ, ತನ್ನ ಪರಿಧಿ ಇರುವಲ್ಲೆಲ್ಲಾ ತನ್ನ ಚುಂಬಕ ಶಕ್ತಿಯನ್ನುಳಿಸಿಕೊಂಡು ನಾಡಿನ ಎಲ್ಲ ಭಾಗಗಳಿಂದ ಬದುಕಿನ ದಾರಿ ಹುಡುಕಿಕೊಂಡು ಬರುವವರಿಗೊಂದು ಆಶ್ರಯವನ್ನಾಗಿ ಮುಂಬಯಿಯನ್ನು ಅವರು ಕಾಣುತ್ತಾರೆ. ‘ಪ್ರಜಾವಾಣಿ’ ಪತ್ರಿಕೆಯನ್ನು ನಡೆಸಿಕೊಂಡು ಬಂದವರಿಗೂ ಬಾರದಿರುವ ಅನುಭವವನ್ನು ಅವರಿಗಿತ್ತ ಪತ್ರಿಕೆ ‘ನುಡಿ’ ಕಂಪನಿ ನೌಕರಿ ಮಾಡುವುದರೊಂದಿಗೇ ನಾಡಿನ ಇತಿಹಾಸ, ಪ್ರಸಕ್ತ ಆಗುಹೋಗುಗಳ ಅಧ್ಯಯನದಲ್ಲಿ ತೊಡಗಿದ್ದ ಬಲ್ಲಾಳರಿಗೆ ಮುಂಬಯಿ ಆದರ್ಶವಾದಿ ಯುವಕರ ತಂಡವೊಂದು ಆರಂಭಿಸಿದ್ದ ‘ನುಡಿ’ ಕನ್ನಡ ಸಾಪ್ತಾಹಿಕದಲ್ಲಿ ೧೯೪೭ರ ಮೌಂಟ್‌ ಬ್ಯಾಟನ್ ಯೋಜನೆಯನ್ನು ವಿರೋಧಿಸಿ ಪ್ರಕಟವಾದ ಇವರ ಲೇಖನದಿಂದ ಬುದ್ಧಿಜೀವಿಗಳ ಚಿಂತನಕಾರರ ಗಮನಸೆಳೆಯುವುದರೊಂದಿಗೆ ಅಂದಿನ ಮುಂಬಯಿ ಸರ್ಕಾರದ ತೀವ್ರ ಗಮನಕ್ಕೂ ಗುರಿಯಾದರು. ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ‘ನುಡಿ’ ಪತ್ರಿಕೆಯ ಸಂಪಾದಕರಾಗಿ ದುಡಿದರು. ನಲ್ಲೆಯ ಪ್ರೀತಿ, ಮುನಿಸು ಎರಡೂ ದಾಂಪತ್ಯದ ಸೊಗಸಿಗೆ ಕಾರಣವಾಗುವಂತೆ ಮುಂಬಯಿಯ ಸಹ್ಯ ಅಸಹ್ಯ ಮುಖಗಳೆರಡೂ ಅದರ ಆಕರ್ಷಣೆಯನ್ನು ಹೆಚ್ಚಿಸುವ ಸಾಧನಗಳಾಗಿವೆ ಎಂಬ ಬಲ್ಲಾಳರ ಮಾತುಗಳಿಗೆ ಅವರ ಪ್ರತಿಯೊಂದು ಕಾದಂಬರಿಯೂ ಉದಾಹರಣೆಯಾಗಿದೆ. ಆದ್ದರಿಂದಲೇ ಮುಂಬಯಿಯನ್ನು ಬೈಯುವವರೂ ಅದನ್ನು ಬಿಟ್ಟು ಹೋಗುವುದಿಲ್ಲವಂತೆ.

“ಮುಂಬಯಿ ನಂಟು ಮತ್ತು ಕನ್ನಡ” ಎಂಬ ಅವರ ಕೃತಿಯ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಿದರೆ ಅಪ್ರಸ್ತುತವಾಗಲಾರದು. “ನನ್ನ ಸೃಜನಶೀಲತೆಯನ್ನು ಪ್ರಚೋದಿಸಿ ಪೋಷಿಸಿ ಬೆಳೆಸಿದ ಮಹಾನಗರ, ನನ್ನ ಕಾರ್ಯಕ್ಷೇತ್ರ, ಈ ಮಹಾನಗರದಲ್ಲಿ ಕಂಡ ಬದುಕಿನ ಹಲವು ಮಗ್ಗುಲುಗಳು, ಮೊದಮೊದಲು ಸರಿಯಾಗಿ ಅರ್ಥವಾಗದಿದ್ದರೂ ಸೆಳೆಯುತ್ತಿದ್ದ ಜೀವಂತಿಕೆ, ಬೇರೆ ಬೇರೆ ರೀತಿಯ ಜೀವನ ಕ್ರಮಗಳು, ಹೊಂದಿಕೊಳ್ಳುತ್ತಿದ್ದ, ಹೊಂದಿ ಕೊಳ್ಳಲು ಚಡಪಡಿಸುತ್ತಿದ್ದ ಹೊಸ ಹೊಸ ಅವಿಷ್ಕಾರಗಳನ್ನು ತಳೆಯುತ್ತಿದ್ದ ರೀತಿ, ಸಮ್ಮಿಶ್ರ ಜನಜೀವನದಲ್ಲಿ ಸಂಬಂಧಗಳು ಬೆಸೆಯುವ ಬಿರುಕೊಡೆಯುವ ರೀತಿ….. ನನ್ನ ಸಾಹಿತ್ಯ ಕೃಷಿಗೆ ನೀರೆರೆಯಿತು. ಈ ಮಹಾನಗರದಲ್ಲಿ ಬದುಕು ಮುಖ್ಯ. ಇಲ್ಲಿಯ ಎಲ್ಲರೂ ಒಂದು ಅರ್ಥದಲ್ಲಿ ಅಪರಿಚಿತರೇ. ಆದರೆ ಇಂತಹ ಅಪರಿಚಿತತೆಯೇ ಒಂದು ಅವ್ಯಕ್ತ ಆದರೂ ಸ್ಪಷ್ಟ ಪರಿಚಿತತೆಯನ್ನು ಸಾರ್ವತ್ರಿಕವಾಗಿ ಬೆಳೆಸಿದೆ”. ಈ ಹಿನ್ನೆಲೆಯಲ್ಲಿ ‘ಉತ್ತರಾಯಣ’ದಂತಹ ಸಂಕೀರ್ಣ ಕೃತಿಯನ್ನು ವಿಶ್ಲೇಷಿಸುವಾಗ ಮುಂಬಯಿಗಿಂತಲೂ ಬದುಕು ದೊಡ್ಡದು ಅನ್ನಿಸ ತೊಡಗುತ್ತದೆ ಏಕೆ ?

ಬದುಕು ಸರಳವಲ್ಲ ಎಂದು ಸೂಚಿಸಲು ಇಲ್ಲಿ ಹಲವಾರು ಆಯಾಮಗಳಿವೆ. ಗೋವಿಂದ ಬುದ್ದಿವಂತ ಅದೇಕೋ ಓದುಬಿಟ್ಟು ಮುನಿಸಿಪಲ್ ಗುಮಾಸ್ತನಾಗುತ್ತಾನೆ. ಅಲ್ಲಿ ಮದುವೆಯಾಗಿರುವ ಹುಡುಗಿಯೊಂದಿಗೆ ಸ್ನೇಹ, ಅಲ್ಲುಂಟಾದ ನಿರಾಶೆಯಿಂದ ಬುದ್ಧಿಸ್ಥಿಮಿತ ತಪ್ಪಿ, ಚಿತ್ತವಿಕಾರವಾಗುತ್ತದೆ. ಅವನನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದರೆ ಗುಣವಾಗುತ್ತಿತ್ತು ಎಂದು ನಮಗಾದರೂ ಅನಿಸುತ್ತದೆ. ವೈದ್ಯರೂ ಹಾಗೇ ಹೇಳುತ್ತಾರೆ. ಹೇಮಾ ಮತ್ತು ಮೋಹನನ ಅಭಿಪ್ರಾಯವೂ ಅದೇ, ರುಕ್ಷ್ಮಿಣಿ ಮಾತ್ರ ಇದಕ್ಕೆ ವಿರೋಧ. ಅವನನ್ನು ಮನೆಯಲ್ಲಿಟ್ಟುಕೊಂಡೇ ಸುಧಾರಿಸಬಲ್ಲೆ ಎಂಬ ಅವಳ ಭಾವನೆಯಲ್ಲಿ ಭಾವನಾತ್ಮಕ ಯೋಚನೆಗಳೊಂದಿಗೆ ಮೂಢನಂಬಿಕೆಯೂ ಬೆರೆತಿದೆ ಎಂದೇ ಹೇಳಬೇಕಾಗುತ್ತದೆ. ಅವಳ ಆಲೋಚನಾ ಧಾಟಿಯೇ ತಪ್ಪು ಎಂಬುದು ಮೇಲುನೋಟಕ್ಕೆ ತೋರುವ ಸತ್ಯ. ಕಾದಂಬರಿಯ ಕೊನೆಯ ಭಾಗದಲ್ಲಿ ಹೇಮಾ ಮೋಹನ ಸೇರಿ ಅವನನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಸುಧಾರಿಸುವ ಸೂಚನೆಗಳಿವೆ ಎಂದು ವೈದ್ಯರೇ ಹೇಳಿದ್ದೂ ಅವನು ಸಾಯುತ್ತಾನೆ. ಹಾಗೇಕೆ ? ಇದಲ್ಲವೇ ಬದುಕಿನ ಸಂಕೀರ್ಣತೆ ?

ಮೋಹನನ ವಿಷಯದಲ್ಲಿ ರುಕ್ಷ್ಮಿಣಿ ತಾಳಿದ್ದ ಮಿತಿಗಳು ಅವಳ ಮಡಿವಂತಿಕೆಯನ್ನು ಸೂಚಿಸುತ್ತವೆ. ಇದು ನಮ್ಮ ಸಮಾಜವೇ ರೂಪಿಸಿರುವ ಮಡಿವಂತಿಕೆಯಾದುದರಿಂದ ಇದನ್ನು ನಾವು ಸರಳವಾಗಿ ಒಪ್ಪುತ್ತೇವೆ. ಹಾಗೇ ಡೋರಿಸ್‌ ವಾರ್ಟಳ ಪ್ರೀತಿ ಪಡೆದು ಕೃತಕೃತ್ಯ(!)ನಾದ ಮೋಹನ ಜ್ಯೋತ್ಸ್ನಾಳ ಮಧ್ಯ ಪ್ರವೇಶದ ನಂತರ ಅವಳ ವಿಷಯಕ್ಕೆ ಮಡಿವಂತಿಕೆ ತೋರುತ್ತಾನೆ. ಇದು ಅಪೇಕ್ಷಣೀಯವಲ್ಲವಾದುದರಿಂದಲೇ ಡೋರಿಸ್‌ಳನ್ನು ಜ್ಯೋತ್ಸ್ನಾ ಹೇಳುವಂತೆ ‘ಬಿಚ್’ ಎಂಬಂತೆ ಚಿತ್ರಿಸಲಾಗಿದೆ. ಆದರೆ ಅದೇ ಸ್ವಭಾವದ ಹೇಮಾ (ಜ್ಯೋತ್ಸ್ನಾ ಇವಳನ್ನು ತಿರಸ್ಕಾರದಿಂದ ಕಂಡರೂ) ಮೋಹನನಿಗೆ ಬೇಕಾಗುತ್ತಾಳೆ. ತನ್ನಿಂದಾಗಿಯೇ ರುಕ್ಷ್ಮಿಣಿ ಸತ್ತಿರಬಹುದು ಎಂಬ ಕಿಂಚಿತ್ ಅಪರಾಧೀ ಪ್ರಜ್ಞೆಯೂ ಮೋಹನನಿಗಿಲ್ಲ. ಹೇಮಾಗೂ ಇಲ್ಲ. ಗೋವಿಂದನ ಬಗ್ಗೆ ಮಾತ್ರ ಹೇಮಾ ಪರಿತಪಿಸುತ್ತಾಳೆ, ಮೋಹನ ಅದೂ ಮಾಡುವುದಿಲ್ಲ. ಇಂಥ ಅಮಾನವೀಯ ವ್ಯಕ್ತಿಗಾಗಿ ರುಕ್ಮಿಣಿ ಪ್ರಾಣ ಕೊಟ್ಟಳೇ ಎಂಬ ಪ್ರಶ್ನೆ ಎದ್ದರೆ ಆ ಪ್ರಶ್ನೆಯೇ ಅಪ್ರಸ್ತುತವೆನ್ನುವಂತೆ ಕೊನೆಯ ಅಧ್ಯಾಯದಲ್ಲಿ ಮೋಹನನ ವ್ಯಾವಹಾರಿಕ ಕಾರ್ಯವೈಖರಿ ಚಿತ್ರಿತವಾಗಿದೆ. ರಾಜೀನಾಮೆ ಕೊಡುವ ದಿನದವರೆಗೂ ಅವನು ಅಲ್ಲಿ ಮೊದಲಿನಂತೆಯೇ ನಿಷ್ಠೆಯಿಂದ, ದಕ್ಷತೆಯಿಂದ ದುಡಿಯುತ್ತಿದ್ದಾನೆ. ಹೇಮಾ ಬಗ್ಗೆ ಮಾತ್ರ ಅವನಿಗೆ ಕಾಳಜಿಯಿದೆ ಎಂದೇ ಅವಳೆಲ್ಲಿಗೆ ಹೋಗಿದ್ದಾಳೆ ಎಂದು ಹುಡುಕಿಸುತ್ತಿದ್ದಾನೆ. ಬದುಕಿರುವವರ ಬಗ್ಗೆ ಅವನ ಕಾಳಜಿ, ಸತ್ತವರ ಬಗ್ಗೆ, ಕಳೆದುಹೋದವರ ಬಗ್ಗೆ, ತಮ್ಮನ್ನೇ ಕಳೆದುಕೊಂಡವರ ಬಗ್ಗೆ ಅಲ್ಲ, ಅದು ಅವನ ಸ್ವಭಾವ ಅಷ್ಟೇ.

ಕನ್ನಡ ಕಾದಂಬರೀ ಲೋಕದ ಪರಿಚಯವಿರುವವರೆಲ್ಲರಿಗೂ ಮುಂಬಯಿ ಎಂದೊಡನೆ ನೆನಪಾಗುವ ಇನ್ನೆರಡು ಹೆಸರುಗಳೆಂದರೆ ಯಶವಂತ ಚಿತ್ತಾಲ ಮತ್ತು ಶಾಂತಿನಾಥ ದೇಸಾಯಿ ಎಂದು ಆಗಲೆ ಹೇಳಿದ್ದೇನೆ. ಅವರಿಬ್ಬರ ಕೃತಿಗಳಲ್ಲಿ ಪ್ರಾತಿನಿಧಿಕವಾಗಿ “ಶಿಕಾರಿ” ಮತ್ತು ‘ಮುಕ್ತಿ’ಗಳನ್ನು ತೆಗೆದುಕೊಂಡು “ಉತ್ತರಾಯಣ”ದ ನಿರ್ವಹಣೆಯೊಂದಿಗೆ ಹೋಲಿಸುವ ಪ್ರಯತ್ನವನ್ನಿಲ್ಲಿ ಮಾಡಬಹುದೆಂದು ತೋರುತ್ತದೆ. “ಶಿಕಾರಿ” ನಾಗಪ್ಪ, ‘ಉತ್ತರಾಯಣ’ದ ಮೋಹನನೊಂದಿಗೆ ಹೋಲಿಕೆ ಪಡೆಯುತ್ತಾನೆ. ಇಬ್ಬರೂ ಬುದ್ಧಿವಂತರು, ಇಬ್ಬರೂ ಸಾಮಾನ್ಯ ದರ್ಜೆಯ ಮನುಷ್ಯರ ಮಟ್ಟವನ್ನು ಮೀರಿದಂತೆ ವರ್ತಿಸುವವರು. ಇಬ್ಬರಿಗೂ ಹೊಸ ಹೊಸ ಆಲೋಚನೆಗಳಿವೆ. “ಶಿಕಾರಿ”ಯ ನಾಗಪ್ಪ ಆಡಳಿತಶಾಹಿಯ ಪೂರ್ವಾಗ್ರಹಗಳಿಗೆ ಕಾದಂಬರಿಯ ಪ್ರಾರಂಭದಲ್ಲೇ ಬಲಿಯಾದರೆ “ಉತ್ತರಾಯಣ”ದ ಮೋಹನ ಜ್ಯೋತ್ಸ್ನಾಳ ಪೂರ್ವಾಗ್ರಹಕ್ಕೆ ಕಾದಂಬರಿಯ ಕೊನೆಯಲ್ಲಿ ಬಲಿಯಾಗುತ್ತಾನೆ. ಆದರೆ ನಾಗಪ್ಪನ ಆಲೋಚನಾಲಹರಿಯಲ್ಲಿ ಕೊಂಚ ಮಟ್ಟಿಗೆ ಪಲಾಯನವಾದವಿದ್ದರೆ ಮೋಹನನದೂ ಪಲಾಯನವೇ. (ಈ ಪಲಾಯನ ರುಕ್ಷ್ಮಿಣಿಯಿಂದ, ಡೇವಿಸ್ ಅಂಡ್ ಬ್ರೌನ್ ಸಂಸ್ಥೆಯಿಂದ) ‘ಶಿಕಾರಿ’ಯ ನಿರ್ವಹಣೆಯಲ್ಲಿ ಅಂತರಂಗದ ವಿವರವಿದ್ದರೂ ಅಂತಃಕರಣ ಕಲಕುವ ಗುಣ ಕಡಿಮೆ. ಹೀಗಿದ್ದೂ ಶಿಕಾರಿ ಮನಸ್ಸನ್ನಾವರಿಸುತ್ತದೆ. “ಉತ್ತರಾಯಣ” ಗಾಢವಾಗಿ ಕಲಕುತ್ತದೆ.

“ಮುಕ್ತಿ”ಯ ಶ್ರೀಕಾಂತ ಅಥವಾ ಗಿರೀಶರಿಬ್ಬರೂ ಬುದ್ಧಿವಂತಿಕೆಯ ಮಟ್ಟದಲ್ಲಿ ಮೋಹನನ ಸಮೀಪ ಬರುವುದಿಲ್ಲ. ಡೋರಿಸ್ ವಾರ್ಟ್ ಡೋಲಿಯ ನೆನಪು ತರುತ್ತಾಳೆ. ಇಬ್ಬರೂ ಬೆಲೆವೆಣ್ಣುಗಳೇ. ಆದರೆ ಡೋಲಿಯ ಸಂಬಂಧ ಗಿರೀಶನಿಗೆ ಜೀವಂತಿಕೆ ತಂದಂತೆ ಡೋರಿಸ್‌ ವಾರ್ಟ್‌ಳ ಸಂಬಂಧ ಮೋಹನನಿಗೆ ತರುವುದಿಲ್ಲ. ಆದ್ದರಿಂದಲೇ ಜ್ಯೋತ್ಸ್ನಾ ಹೇಮಾ ರುಕ್ಷ್ಮಿಣಿ ಈ ಮೂವರ ಪ್ರವೇಶವೂ ಸೇರಿ ಡೋರಿಸ್ ವಾರ್ಟ್‌ಳನ್ನು ದೂರ ಮಾಡುವಲ್ಲಿ ಕಾದಂಬರಿಗಾರರ ಪೂರ್ವಾಗ್ರಹವೇ ಕಾರಣ ಎಂದು “ಮುಕ್ತಿ” ಓದಿದಾಗ ಅನ್ನಿಸದೇ ಇರದು. ಹಾಗಾಗಿಯೇ “ಮುಕ್ತಿ” ಸುಖಾಂತವಾದರೆ ’ಉತ್ತಾರಾಯಣ’ ದುಃಖಾಂತ ವಾಗುತ್ತದೆ. ರುಕ್ಷ್ಮಿಣಿಯ ಸ್ವಭಾವಕ್ಕೂ ಹೇಮಾಳ ಗಂಡ ಗಿರೀಶನ ಸ್ವಭಾವಕ್ಕೂ ತುಂಬಾ ಹೋಲಿಕೆಯಾಗುತ್ತದೆ. ಈ ಒಂದು ವಿವರ ‘ಸಾಕ್ಷಿ’ಯ ನೆನಪು ತರುತ್ತದೆ. ಎಸ್‌.ಎಲ್. ಭೈರಪ್ಪನವರ ‘ಸಾಕ್ಷಿ’ ಕಾದಂಬರಿಯ ಮಂಜಯ್ಯನ ಹೆಂಡತಿ ಸಾವಿತ್ರಿಯ ಸ್ವಭಾವಕ್ಕೂ ಅವಳ ಅಕ್ಕನ ಗಂಡನ ಸ್ವಭಾವಕ್ಕೂ ತುಂಬಾ ಹೊಂದಿಕೆಯಾಗುತ್ತದೆ. ಅದಕ್ಕೇ ಕೊನೆಗೆ ಅವಳು ಗಂಡನನ್ನು ಬಿಟ್ಟು ಭಾವನ ಜೊತೆಗೆ ವಾಸಿಸಲು ನಿರ್ಧರಿಸುತ್ತಾಳೆ. ಮಂಜಯ್ಯನ ಕೊಲೆಯನ್ನು ದುಃಖಾಂತ ಎಂದು ಭಾವಿಸದಿದ್ದ ಪಕ್ಷದಲ್ಲಿ “ಸಾಕ್ಷಿ”ಯೂ ಸುಖಾಂತವೇ. ಆದರೆ “ಉತ್ತರಾಯಣ” ಮತ್ತೆ ದುಃಖಾಂತ.

ಈ ಕಾದಂಬರಿಯ ಹೇಮಾ ರುಕ್ಕಿಣಿಯರಂತೆ ಅಕ್ಕತಂಗಿಯರ ಸ್ವಭಾವದಲ್ಲಿ ಈ ರೀತಿ ಉತ್ತರ ಧ್ರುವ ದಕ್ಷಿಣ ಧ್ರುವಗಳ ವ್ಯತ್ಯಾಸವಿರುವುದು ಬದುಕನ್ನು ಆಳವಾಗಿ ನಿರೀಕ್ಷಿಸಿದವರಿಗೆ ತಿಳಿದಿರುವ ಸಂಗತಿಯೇ. ಅದರ ಕಲಾತ್ಮಕ ಚಿತ್ರಣವೇ ಈ ಕಾದಂಬರಿಯ ಗುಣಾತ್ಮಕ ಅಂಶ. ಆ ಚಿತ್ರಣದ ಮೂಲಕ ಮುಂಬೈ ಬಿಚ್ಚಿಕೊಳ್ಳುವುದಿದೆಯಲ್ಲಾ ಅದು ನನಗೆ ವೈಯಕ್ತಿಕವಾಗಿ ಆಸಕ್ತಿಯ ವಿಷಯ.
*****
ಸುಂದರ ಪ್ರಕಾಶನವು ವ್ಯಾಸರಾಯ ಬಲ್ಲಾಳರ ಬಗ್ಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಬ್ಬಚ್ಚಿ ಸಂಸಾರ
Next post ಪದವಾಗುವ ಪ್ರೀತಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys