ಲಿಂಗದೊಳಗೆ ಮನವಿಡದಿನ್ನಾ ವರದ
ಇಂಗಿತ ತಿಳಿಯದವಗೇನು ಫಲ?
ಜಂಗಮ ಜಂಗುಕಟ್ಟಿ ಹಿಂಗದೆ ತಿರುಗಲು
ಸಂಗನ ಶರಣರಿಗೇನು ಫಲ? ||ಪ||

ಮೂರ ಮನಿಯ ಭಿಕ್ಷ ಬೇಡದಲೇ ಮ-
ತ್ತಾರ ಭಕ್ತರೊಡನಾಡದಲೇ
ಚಾರು ತರದ ಪಂಚಾಕ್ಷರಿ ಜಪವನು
ಬಾರಿ ಬಾರಿಗೆ ಮಾಡದಲೇ ||೧||

ಭಂಡ ಭವಿಗಳನು ಖಂಡಿಸದೇ ಸುಳ್ಳೇ
ಹಿಂಡುಗಟ್ಟಿ ತಿರುಗೇನು ಫಲ?
ತುಂಡುಗಂಬಳಿಯ ಹೊತ್ತು ಹೆಗಲಿನೊಳು
ಮಂಡಿಬೋಳಿಸಿದರೇನು ಫಲ? ||೨||

ಪೊಡವಿಯೊಳಗೆ ಶಿಶುನಾಳಧೀಶನ
ಅಡಿಯ ಪೂಜಿಸದಲೇನು ಫಲ?
ಕಡುತರದಾಸೆಯ ಸುಡದೆ ವಿರಕ್ತಿಯ
ಪಡೆದು ಮಠದೊಳಲಿರಲೇನು ಫಲ? ||೩||

****