ಗಾಜಿನೊಳಗೆ ಸಿಕ್ಕಿಬಿದ್ದ ಪ್ರತಿಬಿಂಬ

ಗಾಜಿನೊಳಗೆ ಸಿಕ್ಕಿಬಿದ್ದ ಪ್ರತಿಬಿಂಬ

ಈಗ ಎಲ್ಲವೂ ಮಸಕು ಮಸಕಾಗುತ್ತಿವೆ; ಒಂದು ದಿನ ನಾನು ಎಲ್ಲವನ್ನೂ ಮರೆತುಬಿಡುತ್ತೇನೆ. ಆದರೂ ಕೆಲವೊಂದು ನೆನಪುಗಳು ಇನ್ನೂ ಗಾಢವಾಗಿ ಉಳಿದುಕೊಂಡಿವೆ. ಅವನ್ನು ದಾಖಲಿಸುವ ತವಕವೋ ತಿಳಿಯದು; ಅವು ಧುಮ್ಮಿಕ್ಕಿ ಬರುತ್ತವೆ. ಕೆಲವು ವರ್ಷಗಳ ಹಿಂದೆ ನಾನು ಪಾಠಪ್ರವಚನ ಮುಗಿಸಿ ಗ್ರಂಥಾಲಯಕ್ಕೆ ಬಂದು ಗಂಟೆಗಟ್ಟಲೆ ಕೂತು ಓದುತ್ತಿದ್ದೆ. ಕಿಂಗ್ ಸೊಲೊಮನ್ ಹೇಳುವಂತೆ ಎಲ್ಲದಕ್ಕೂ ಒಂದೊಂದು ಕಾಲ. ಅದು ನನ್ನ ಓದಿನ ಹುಚ್ಚಿನ ಕಾಲ. ಗ್ರಂಥಾಲಯದಲ್ಲಿ ನನಗೊಂದು ಶೆಲ್ಫ್ ಸಹಿತದ ಮೇಜು ಮತ್ತು ಕುರ್ಚಿ ಕೊಟ್ಟಿದ್ದರು. ಶೆಲ್ಫ್‌ನಲ್ಲಿ ನಾನು ಓದುವ, ಓದಬೇಕೆಂದಿದ್ದ, ಹಾಗೂ ಮತ್ತೆ ಮತ್ತೆ ಓದುತ್ತಿದ್ದ ಹಲವಾರು ಪುಸ್ತಕಗಳಿದ್ದುವು. ನಾನಲ್ಲಿ ಇಲ್ಲದಿದ್ದಾಗ ಈತ ಏನು ಓದುತ್ತಿದ್ದಾನೆ ಎನ್ನುವ ಕುತೂಹಲದಿಂದ ಕೆಲವು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಸಹೋದ್ಯೋಗಿಗಳು ಬಂದು ನೋಡುವುದಿತ್ತು. ಭಾಷಾವಿಜ್ಞಾನ, ತತ್ವಜ್ಞಾನ, ಇತಿಹಾಸ, ಕಾವ್ಯ, ಕಾದಂಬರಿ ಮುಂತಾಗಿ ಅಲ್ಲಿರುವ ಪುಸ್ತಕಗಳನ್ನು ನೋಡಿ ಅವರು ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಒಂದು ದಿನ ನನ್ನ ವಿದ್ಯಾರ್ಥಿನಿಯೊಬ್ಬಳು ನಾನು ಕುಳಿತಲ್ಲಿಗೆ ಬಂದಳು; ಯಾಕೆ ಇಂಥ ಪುಸ್ತಕಗಳನ್ನು ಓದುತ್ತೀರಿ? ಎಂದು ಆತಂಕದ ಧ್ವನಿಯಲ್ಲಿ ಕೇಳಿದಳು. ಅವಳು ಉದ್ದೇಶಿಸಿದ್ದು ಫ್ರಾಂಝ್ ಕಾಫ್ಕಾ, ಸಾಮ್ಯುವೆಲ್ ಬೆಕೆಟ್, ಜೇಮ್ಸ್ ಜಾಯ್ಸ್ ಮುಂತಾದವರ ಪುಸ್ತಕಗಳು. ಈ ಯುರೋಪಿಯನ್ ಲೇಖಕರ ಮತ್ತು ನನ್ನ ನಂಟು ಹಲವು ವರ್ಷಗಳಷ್ಟು ಹಿಂದಿನದು. ಕಾಫ್ಕಾನ ‘ಮೆಟಾಮಾರ್ಫಾಸಿಸ್’ (ರೂಪಾಂತರ) ಮತ್ತು ‘ಪೀನಲ್ ಕಾಲನಿ’ (ದಂಡನಾಶಿಬಿರ) ಮುಂತಾದ ಕೆಲವೇ ಕೆಲವು ವ್ಯಕ್ತ ಅತಿರೇಕಗಳನ್ನು ಬಿಟ್ಟರೆ ಉಳಿದ ರಚನೆಗಳನ್ನೆಲ್ಲಾ ನಾನು ಬಹುವಾಗಿ ಮೆಚ್ಚುವವ. ನಾನು ಯಾವುದೇ ಕತೆ ಬರೆದಾಗಲೂ ಅದರಲ್ಲಿ ಕಾಫ್ಕಾನ ಒಂದು ಛಾಯೆ ಈಗಲೂ ಇರುತ್ತದೆ. ಇದು ನನಗೆ ಗೊತ್ತೇ ಇರುವ ಕಾರಣ ಇದರಿಂದ ನನಗೆ ವ್ಯಥೆಯೇನೂ ಇಲ್ಲ. ಅದೇ ರೀತಿ ಸಾಮ್ಯುವೆಲ್ ಬೆಕೆಟ್ ಕೂಡಾ ನನಗೆ ಇಷ್ಟದ ಲೇಖಕ. ಅವನ ‘ವೈಟಿಂಗ್ ಫಾರ್ ಗೊದೋ’ (ಗೊದೋವಿನ ನಿರೀಕ್ಷೆಯಲ್ಲಿ) ಎಂಬ ನಾಟಕವನ್ನು ನಾನು ಹಲವು ಬಾರಿ ಓದಿದರೂ ಇನ್ನೂ ಅರ್ಥಮಾಡಿಕೊಳ್ಳದೆ ಇದ್ದೇನೆ. ಇದನ್ನೆಲ್ಲ ಈ ನನ್ನ ವಿದ್ಯಾರ್ಥಿನಿಗೆ ಹೇಗೆ ಹೇಳಲಿ? ‘ಇಂಥ ಪುಸ್ತಕಗಳು ನಮ್ಮನ್ನು ಇನ್ನಷ್ಟು ಖಿನ್ನರನ್ನಾಗಿ ಮಾಡುತ್ತವೆ; ಓದಬೇಡಿ’ ಎಂದಳು. ನಾನು ಅವಳಿಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಆದರೆ ನನಗೆ ಗೊತ್ತಿತ್ತು: ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಗಂಡನಿಂದ ವಿಚ್ಛೇದನಕ್ಕೆ ಒಳಗಾದ ಈ ಮುಸ್ಲಿಮ್ ಹುಡುಗಿ ತವರುಮನೆ ಸೇರಿ, ಯಾವುದೋ ಖಾಸಗಿ ಕಾಲೇಜೊಂದರಲ್ಲಿ ಅಲ್ಪ ಸಂಬಳಕ್ಕೆ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಳಲ್ಲದೆ ತಾನೂ ಪಿ.ಎಚ್‌ಡಿ. ರಿಸರ್ಚಿಗೆ ಸೇರಿಕೊಂಡು ಅಭ್ಯಾಸ ನಡೆಸಿದ್ದಳು. ವಿವಾಹ ಜೀವನವಿಡೀ ನರಕ ಅನುಭವಿಸಿದ ಇವಳಿಗೆ ವಿಚ್ಛೇದನದ ನಂತರವೂ ಮಾಜಿ ಪತಿಯಿಂದ ಕಿರುಕುಳ ತಪ್ಪಿರಲಿಲ್ಲ. ಇಂಥವಳಿಗೆ ನಾನೇನೆನ್ನಲಿ?

ಕಾಫ್ಕಾನ ಸಮಕಾಲೀನನಾದ ಇನ್ನೊಬ್ಬ ಲೇಖಕ ಇದ್ದಾನೆ: ಇವನೇ ಆಸ್ಟ್ರಿಯಾದ ಆಲ್‌ಫ್ರೆಡ್ ಕುಬಿನ್. ಮೂಲತಃ ಚಿತ್ರಕಲಾವಿದನಾದ ಕುಬಿನ್ ಬರೆದುದು ಒಂದು ಕಾದಂಬರಿ ಮಾತ್ರ. Die Andere Seite ಎಂಬ ಈ ಜರ್‍ಮನ್ ಕಾದಂಬರಿಯ ಇಂಗ್ಲಿಷ್ ಅನುವಾದವನ್ನು ಓದಿ ಪ್ರಭಾವಿತನಾದ ನಾನು ಅದನ್ನು ‘ಆಚೆ ಬದಿ’ ಎಂಬ ಹೆಸರಲ್ಲಿ ಕನ್ನಡಕ್ಕೆ ತಂದಿದ್ದೇನೆ. ಕಾಫ್ಕಾನ ಭ್ರಮಾಲೋಕದಂತೆಯೇ, ಆದರೆ ಎಂದೂ ಸಂಭವಿಸಬಹುದಾದಂಥ, ವಿಲಕ್ಷಣ ಘಟನೆಗಳನ್ನೊಳಗೊಂಡ ಮಬ್ಬಿನ ಪ್ರಪಂಚವೊಂದನ್ನು ಕುಬಿನ್ ಇದರಲ್ಲಿ ಚಿತ್ರಿಸುತ್ತಾನೆ. ಈ ಕೃತಿಯನ್ನು ಓದಿದಾಗ ನನಗೆ ತಟ್ಟನೆ ಅನಿಸಿದ್ದು ಕಾಫ್ಕಾ ಖಂಡಿತ ಕುಬಿನ್‌ನ ಪ್ರಭಾವಕ್ಕೆ ಒಳಗಾಗಿದ್ದ ಎಂದು. ಈ ಕುರಿತು ಯಾವ ವಿಮರ್ಶಕರೂ ಏನೂ ಹೇಳದಿದ್ದರೂ ಇದು ನಿಜವಿರಲೇಬೇಕು. ಯಾಕೆಂದರೆ, ಕುಬಿನ್‌ನ ಕಾದಂಬರಿ ಕಾಫ್ಕಾ ಬರೆಯಲು ಸುರುಮಾಡುವ ಮೊದಲೇ ಪ್ರಕಟವಾಗಿದ್ದುದು ಮಾತ್ರವಲ್ಲ, ಆ ಕಾಲದಲ್ಲಿ ಸಾಕಷ್ಟು ಪ್ರಸಿದ್ಧವೂ ಆಗಿತ್ತು. ಕುಬಿನ್ ಮತ್ತು ಕಾಫ್ಕಾ ಪರಸ್ಪರ ಅಪರಿಚಿತರೂ ಅಲ್ಲ; ಇಬ್ಬರೂ ಒಂದೇ ಸಾಹಿತ್ಯವಲಯದಲ್ಲಿ ಸಂಚರಿಸುತ್ತಿದ್ದವರು. ತಾನು ಕುಬಿನ್‌ನನ್ನು ಭೇಟಿಮಾಡಿದ ಬಗ್ಗೆ ಸ್ವತಃ ಕಾಫ್ಕಾನೇ ತನ್ನ ಡೈರಿಯಲ್ಲಿ ಎರಡು ಮೂರು ಕಡೆ ಪ್ರಸ್ತಾಪಿಸುತ್ತಾನೆ. ಆದರೆ ಕನ್ನಡದಲ್ಲಿ ಕಾಫ್ಕಾ ಪ್ರಸಿದ್ಧನಾಗಿದ್ದರೂ ಕುಬಿನ್‌ನ ಹೆಸರು ಯಾರಿಗೂ ತಿಳಿಯದು-ಬಹುಶಃ ಓದಿನಲ್ಲಿ ಎಣೆಯಿಲ್ಲದ ವಾಚಸ್ಪತಿ ಎಸ್. ದಿವಾಕರ್ ಒಬ್ಬರನ್ನು ಬಿಟ್ಟರೆ! ಆದ್ದರಿಂದ ನನ್ನ ಅನುವಾದ ಸಮುದ್ರದಲ್ಲಿ ಬಿದ್ದ ಮಳೆಹನಿಯಂತೆ ಕಾಣಿಸದಾಯಿತು. ಇಲ್ಲಿ ಕುಬಿನ್‌ನನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ, ಅವನ ಈ ಕಾದಂಬರಿಯೂ ಓದುಗರಿಗೆ ಜೀವನೋತ್ಸಾಹವನ್ನಾಗಲಿ ಭರವಸೆಯನ್ನಾಗಲಿ ನೀಡುವ ಕೃತಿಯಲ್ಲ ಎನ್ನುವುದಕ್ಕೆ.

ಈಚೆಗೆ ಅಮೇರಿಕದ ಮೂವತ್ತರ ದಶಕದ ಕಾದಂಬರಿಕಾರ ನಥನೇಲ್ ವೆಸ್ಟ್‌ನ The Day of the Locust (ಮಿಡಿತೆಯ ದಿನ) ಎಂಬ ಪ್ರಸಿದ್ಧ ಕೃತಿಯನ್ನು ಇನ್ನೊಮ್ಮೆ ಓದಿದಾಗ ನನಗನಿಸಿದ್ದು ಬೆಕೆಟ್‌ನ ಕಾದಂಬರಿಗಳು ಮತ್ತು ನಾಟಕಗಳು ಇದಕ್ಕೆ ಎಷ್ಟು ಹತ್ತಿರವಾಗಿವೆ ಎಂದು. ಇವರಿಬ್ಬರ ಕೃತಿಗಳಲ್ಲೂ ಸೋತವರೇ ಪ್ರಧಾನ ಪಾತ್ರಗಳು. ನಿಜ, ಇದರಲ್ಲೇನೂ ಹೊಸತಿಲ್ಲ, ಆಧುನಿಕ ಸಾಹಿತ್ಯದ ಮುಖ್ಯ ಭೂಮಿಕೆಯೇ ಸೋಲು. ಸಾಲ್ ಬೆಲ್ಲೋ, ಬರ್ನಾರ್ಡ್ ಮಲಮೂಡ್ ಮುಂತಾದವರ ಕೃತಿಗಳನ್ನು ಓದಿದಾಗಲೂ ಇದೇ ನಮಗೆ ಅನಿಸುವುದು. ತಮ್ಮ ಸೋಲಿನಲ್ಲಿ ಈ ಕಥಾಪಾತ್ರಗಳು ಕೆಲವೊಮ್ಮೆ ತಿಳಿ ಹಾಸ್ಯಕ್ಕೆ ಒಳಗಾಗುವುದಿದೆ-ಆಗ ಇವು ಸಂಜೆಯ ಸೂರ್ಯನ ಇಳಿ ಬೆಳಕು ಹಾಯ್ದಂತೆ ಕೆಲವು ಕ್ಷಣ ತೊಳಗುತ್ತವೆ.

ಫ್ರಾನ್ಸಿಸ್ ಬೇಕನ್ ಎಂಬ ಆಧುನಿಕ ಬ್ರಿಟಿಷ್ ಚಿತ್ರಕಲಾವಿದನೊಬ್ಬ ಇದ್ದಾನೆ; ಇವನ ಹೆಸರು ಎಲಿಜಬೆತನ್ ಕಾಲದಲ್ಲಿದ್ದ ಇದೇ ಹೆಸರಿನ ಪ್ರಸಿದ್ಧ ಬ್ರಿಟಿಷ್ ತತ್ವಜ್ಞಾನಿಯನ್ನು ನೆನಪಿಗೆ ತಂದರೆ ಅದಕ್ಕೆ ಕಾರಣ ಅವನದೇ ವಂಶಕ್ಕೆ ಈ ಕಲಾವಿದನೂ ಸೇರಿದವನು ಎನ್ನುವುದು. ಅಮೇರಿಕದಲ್ಲಿ ನಾನಿರುವಾಗ ಬೇಕನ್‌ನ ಸಂದರ್ಶನ ಗಳಿರುವ ಪುಸ್ತಕವೊಂದನ್ನು ಕೊಂಡುಕೊಂಡೆ. ಕಲೆಯ ಕುರಿತಾದ ಅವನ ವಿಚಾರಗಳು ಮತ್ತು ಅನುಭವಗಳು ಅವನ ಚಿತ್ರಗಳಂತೆಯೇ ವಿಶಿಷ್ಟವಾಗಿವೆ. ಬೇಕನ್‌ನ ಚಿತ್ರಗಳನ್ನು ಯಾವ ರೀತಿಯ ರೂಢಿಮೂಲ ನೆಲೆಗಳಿಂದಲೂ ನಾವು ಆಸ್ವಾದಿಸುವಂತಿಲ್ಲ. ಅವುಗಳಲ್ಲಿನ ಮನುಷ್ಯರೆಲ್ಲಾ ಯಾವುದೋ ಯಮಯಾತನೆಗೆ ಒಳಗಾದವರಂತೆ ಕಾಣಿಸುತ್ತಾರೆ: ಅವರ ಕೈಕಾಲು ಕುತ್ತಿಗೆ ತಲೆ ಮುಂತಾದ ಅಂಗಗಳು ಒಂದಕ್ಕೊಂದು ಸಮತೋಲನವಿಲ್ಲದೆ, ಸಂಬಂಧವಿಲ್ಲದೆ ಬಿದ್ದಿರುತ್ತವೆ. ಬಹುಶಃ ಡಾಂಟೆ ತನ್ನ ಕಾವ್ಯದಲ್ಲಿ ಚಿತ್ರಿಸುವ ನರಕದ ಜೀವಿಗಳಂತೆ ಇವರು ಇದ್ದಾರೆ. ಅರ್ಥಾತ್ ಯಾವುದೇ ಪರಂಪರಾಗತ ಸೌಂದರ್ಯದ ಕಲ್ಪನೆಯಿಂದಲೂ ನಾವು ಈ ಚಿತ್ರಗಳನ್ನು ನೋಡುವುದು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಪಿಕಾಸೋನ ‘ಗೆರ್ನಿಕಾ’ದ ಮುಂದರಿದ ಭಾಗ ಇದು. ಆದರೆ ಪಿಕಾಸೋನ ಚಿತ್ರಕ್ಕೆ ಒಂದು ಸ್ಪಷ್ಟ ಚಾರಿತ್ರಿಕ ಹಿನ್ನೆಲೆಯಿತ್ತು. – ಜರ್ಮನ್ ವಾಯುದಳ ಕಾರಣವಿಲ್ಲದೆ ಒಂದು ಶಾಂತಿಯುತ ಗ್ರಾಮದ ಮೇಲೆ ಬಾಂಬು ಹಾಕಿ ನಾಶಗೊಳಿಸಿದ ಮಾನವ ಹಿಂಸೆಯನ್ನು ಆತ ಚಿತ್ರಿಸಿದ್ದಾಗಿತ್ತು. ಬೇಕನ್‌ನ ಹಿನ್ನೆಲೆ ಇಡೀ ಮಾನವ ಸಮುದಾಯದ ಹಾಗೆ ತೋರುತ್ತದೆ. ಆಮೇಲೆ ಈತನ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಉದ್ದೇಶದಿಂದ ಗ್ರಂಥಾಲಯದಲ್ಲಿನ ಕಲಾವಿಭಾಗದಲ್ಲಿ ಕೆಲವು ವಿಶ್ವಕೋಶಗಳನ್ನು ತಡಕಾಡುತ್ತಿರುವಾಗ, ಅವುಗಳಲ್ಲಿ ಒಂದು ಲೇಖನ ವಿಶೇಷವಾಗಿ ನನ್ನ ಗಮನ ಸೆಳೆಯಿತು. ಕಾರಣ ಖ್ಯಾತ ಕಲಾವಿಮರ್ಶಕನೊಬ್ಬ ಬೇಕನ್‌ನ ಕಲೆಯ ಕುರಿತಾಗಿ ಎತ್ತಿದ ಆಕ್ಷೇಪವನ್ನು ಇದರಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಮರ್ಶಕನ ಆಕ್ಷೇಪವೆಂದರೆ, ಬೇಕನ್‌ನ ಇಂಥಾ ‘ವಿಕೃತಿ’ಗಳ ಉದ್ದೇಶವಾದರೂ ಏನು, ಇವು ಮನುಷ್ಯನನ್ನು ನೈತಿಕವಾಗಿ ಕೀಳುಮಾಡಿ ಘಾಸಿಗೊಳಿಸುವುದಿಲ್ಲವೇ, ಇಂಥ ಚಿತ್ರಗಳು ಎಷ್ಟೇ ಪ್ರತ್ಯೇಕವಾಗಿದ್ದರೂ, ಅವು ಪ್ರತ್ಯೇಕವಾಗಿವೆ ಎಂಬ ಮಾತ್ರಕ್ಕೆ ನಾವವನ್ನು ಕೊಂಡಾಡಬೇಕೇ ಮುಂತಾಗಿ. ಬೇಕನ್‌ನ ಚಿತ್ರಗಳಷ್ಟೇ ನಮ್ಮನ್ನು ಚಿಂತನೆಗೆ ಹಚ್ಚುವ ವಿಚಾರಗಳು ಇವು. ಹಾಗೂ ಈ ಉಲ್ಲೇಖವನ್ನು ಓದುತ್ತಿದ್ದಂತೆ ನನಗೆ ನನ್ನ ಹೈದರಾಬಾದ್ ವಿದ್ಯಾರ್ಥಿನಿಯ ಪ್ರಶ್ನೆಯೂ ಮತ್ತೆ ಎದುರಾಯಿತು. ಆದರೂ ಯಾವುದೋ ವಿವರಿಸಲಾಗದ ಕಾರಣಕ್ಕೋಸ್ಕರ ನಾನು ಈ ಎಲ್ಲ ಬರಹಗಾರರನ್ನೂ ಕಲಾವಿದರನ್ನೂ ಮೆಚ್ಚುತ್ತೇನೆ.

ಅಥವಾ ಪ್ರಜಾಪ್ರಭುತ್ವದ ಮಹತ್ವದ ಇತಿಹಾಸಕಾರ ಅಲೆಕ್ಸಿಸ್ ಟೋಕ್‌ವಿಯ್ (Alexis de Tocqueville) ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲೇ ಹೇಳಿದಂತೆ. ಅರಸೊತ್ತಿಗೆಯ ಕಾಲ ಮುಗಿದು ಮನುಷ್ಯರನ್ನು ಪರಸ್ಪರ ಸಂಬಂಧಗಳಲ್ಲಿ ಹೊಸೆಯುವ ಎಳೆಗಳು ಕಡಿದುಹೋಗಿರುವುದೇ ಇದರ ಕಾರಣ ಎನ್ನಬಹುದೇ? ಟಾಕ್‌ವೀಯ್ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಕವಿತೆಯ (ಅರ್ಥಾತ್ ಕಲೆಯ) ವಸ್ತು ಮನುಷ್ಯನೇ ಆಗಿರುತ್ತಾನೆ. ರಾಜಕೀಯದಲ್ಲಿ ಪ್ರಜಾಪ್ರಭುತ್ವ ನಡೆಸಿದ ಕ್ರಾಂತಿಯ ಸಾದೃಶ್ಯವನ್ನು ಇದಕ್ಕೆ ಮೂರು ಶತಮಾನಗಳ ಹಿಂದೆಯೇ ಕ್ರಿಶ್ಚಿಯನ್ ಧರ್ಮದಲ್ಲಿ ಕ್ಯಾಥೊಲಿಸಿಸಮಿನ ವಿರುದ್ಧ ಪ್ರೊಟೆಸ್ಟಾಂಟಿಸಮ್ ನಡೆಸಿದ ಕ್ರಾಂತಿಯಲ್ಲಿ ಕಾಣುತ್ತೇವೆ; ಯಾಕೆಂದರೆ ಪ್ರೊಟೆಸ್ಟಾಂಟಿಸಮ್ ಮನುಷ್ಯನನ್ನು ಧಾರ್ಮಿಕ ಸಂಸ್ಥೆಗಳ ಮಧ್ಯಸ್ತಿಕೆಯಿಂದ ಬಿಡುಗಡೆಗೊಳಿಸಿ ದೇವರಿಗೆ ನೇರವಾಗಿ ಮುಖಾಮುಖಿಯಾಗಿಸಿತು. ಧಾರ್ಮಿಕವಾಗಿ ಮನುಷ್ಯನ ಏಕಾಂತ ಬಹುಶಃ ಇಲ್ಲಿಂದಲೇ ಆರಂಭವಾಗುತ್ತದೆ. ಇದರೊಂದಿಗೆ ಕ್ಯಾಥೋಲಿಸಿಸಮ್ ದುರ್ಬಲಗೊಳ್ಳುತ್ತ ರಾಜಕಾರಣ ಧರ್ಮಕಾರಣದಿಂದ ಬೇರೆಯಾಗುವುದು ಸಾಧ್ಯವಾಯಿತು ಎನ್ನುವುದು ಕೂಡಾ ಗಮನಾರ್ಹ ಸಂಗತಿ. ಹೀಗೆ ಮನುಷ್ಯ ಎರಡೂ (ಸಂ)ಬಂಧಗಳಿಂದ-ಧರ್ಮ ಮತ್ತು ಅರಸೊತ್ತಿಗೆಯಿಂದ – ಪಡೆದ ಬಿಡುಗಡೆಯೇ ಇಂದಿನ ಸಾಹಿತ್ಯ ಮತ್ತು ಕಲೆಯನ್ನು ನಿರ್ದೇಶಿಸುವಂತೆನಿಸುತ್ತದೆ. ಹಳೆಗನ್ನಡದ ಮತ್ತು ಸ್ವಲ್ಪಮಟ್ಟಿಗೆ ನಡುಗನ್ನಡದ ಕವಿಗಳಿಗೆ ಕೂಡಾ ಇದೊಂದು ಸಮಸ್ಯೆಯೇ ಆಗಿರಲಿಲ್ಲ. ಧರ್ಮ, ಅರಸೊತ್ತಿಗೆ, ಸಾಹಿತ್ಯ ಎಲ್ಲವೂ ಒಟ್ಟಿಗೆ ಮಿಳಿತವಾಗುತ್ತಿದ್ದ ಕಾಲ ಅದು. ಆ ಕಾಲದ ಸಾಹಿತ್ಯವನ್ನು ನಾವು ಈ ರೀತಿಯ ಸಮ್ಯಗ್ ದೃಷ್ಟಿಯಿಂದ ಮಾತ್ರವೇ ಓದುವುದು ಸಾಧ್ಯ. ಪಾಶ್ಚಾತ್ಯ ಸಾಹಿತ್ಯದ ಮೇರು ಕೃತಿಯಾದ ಡಾಂಟೆಯ ‘ಡಿವೈನ್ ಕಾಮೆಡಿ’ಯೂ ಹಾಗೆಯೇ. ಅದೇ ರೀತಿ ಆ ಕಾಲದ ಹಲವಾರು ತೈಲ ಚಿತ್ರಗಳು. ಆದರೆ ನಮ್ಮೀ ಕಾಲದಲ್ಲಿ ಧರ್ಮ, ರಾಜಕೀಯ, ಮತ್ತು ಸಾಹಿತ್ಯ ಇನ್ನೆಂದಿಗೂ ಒಂದಾಗದ ರೀತಿಯಲ್ಲಿ ವಿಘಟನೆಗೊಂಡಿರುತ್ತ ಯಾರಾದರೂ ಧಾರ್ಮಿಕ ಸಾಹಿತ್ಯವನ್ನೋ ರಾಜಕೀಯ ಸಾಹಿತ್ಯವನ್ನೋ ಬರೆಯುತ್ತೇನೆಂದರೆ ಆಶ್ಚರ್‍ಯಪಡಬೇಕಾಗುತ್ತದೆ. ಹಾಗಿದ್ದರೆ ನಮ್ಮ ಕಾಲದ ಕೃತಿಗಳು ಯಾವ ರೀತಿ ಇರಬೇಕು, ಕಾಫ್ಕಾ, ಜಾಯ್ಸ್, ಬೆಕೆಟ್, ಬೇಕನ್‌ನ ತರದ ರಚನೆಗಳು ಮಾತ್ರವೇ ಇಂದು ಸಾಧ್ಯವೇ ಎಂದು ಕೇಳಬಹುದು. ಇವರೆಲ್ಲರೂ ಆಧುನಿಕತೆಯ ಉತ್ತುಂಗ ಸ್ಥಿತಿಯಲ್ಲಿ ಹುಟ್ಟಿಬಂದವರು; ನಮ್ಮದೀಗ ಆಧುನಿಕೋತ್ತರ ಕಾಲ-ಎಂದರೆ ನಾವು ಮತ್ತೆ ನಮ್ಮ ಸ್ಮೃತಿಗಳನ್ನು ಆಧುನಿಕತೆಯೊಂದಿಗೆ ಹೊಂದಿಸಬಯಸುವವರು, ಕಟು ಆಧುನಿಕತೆ ಮಾಡಿದ ಹರಿತಕ್ಕೆ ನಮ್ಮದು ತೇಪೆ ಹಚ್ಚುವ ಕೆಲಸ ಎಂದು ಹೇಳಬಹುದು. ಇದು ಎಷ್ಟೇ ಪ್ರಿಯವಾದ ಕೆಲಸವಾದರೂ, ನಾವು ಮತ್ತೆ ಮೊದಲಿನ ಹಾಗೆ ಹಿಂದಕ್ಕೆ ಮರಳಲಾರೆವು; ಯಾಕೆಂದರೆ ಮುಗ್ಧತೆಯನ್ನು ಕಳೆದುಕೊಂಡವರು ನಾವು. ಆದ್ದರಿಂದಲೇ ಇಂದು ಯಾರಾದರೂ ಕುವೆಂಪು ಅಥವಾ ಕಾರಂತರಂತೆ ಬರೆದರೆ ಅದೊಂದು ಅಣಕವಾಗುತ್ತದೆ.

ನನ್ನೀ ವಿದ್ಯಾರ್ಥಿನಿಗೆ ಇದೆಲ್ಲವೂ ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ಗೊತ್ತಿರಲಿಲ್ಲವೇ? ಖಂಡಿತಾ ಗೊತ್ತಿತ್ತು. ಕಾಫ್ಕಾ ಕಾದಂಬರಿಯ ಪಾತ್ರವೊಂದು ಆಗಬಹುದಾಗಿದ್ದ ಈಕೆ ತಾನು ಗಾಜಿನೊಳಗೆ ಸಿಕ್ಕಿಬಿದ್ದ ಪ್ರತಿಬಿಂಬದಂತೆ ಚಡಪಡಿಸುತ್ತಿದ್ದವಳು. ಅದರಿಂದ ಹೊರಬರುವುದಕ್ಕೆ ಆ ಗಾಜನ್ನು ಓಡೆಯುವುದೇ ಅಥವಾ ಅದರ ಮೂಲವನ್ನೇ ನಾಶಪಡಿಸುವುದೇ ಎಂದು ತಿಳಿಯದೆ ಇದ್ದಳು. ಆದ್ದರಿಂದ ಅವಳ ಮಾತನ್ನು ಅಕ್ಷರಶಃ ತೆಗೆದುಕೊಳ್ಳುವುದು ತಪ್ಪಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೩
Next post ವ್ಯತ್ಯಾಸ

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…