ಅಂತರ್‍ಜಲ ಮಾಲಿನ್ಯ

ಅಂತರ್‍ಜಲ ಮಾಲಿನ್ಯ

ಸದಾ ನಾವು ವಾಯುಮಾಲಿನ್ಯ, ನೆಲಮಾಲಿನ್ಯ, ನದಿಮಾಲಿನ್ಯಗಳ ಬಗ್ಗೆ ಚಿಂತಿಸುತ್ತೇವೆ. ನೆಲದೊಳಗಿನ ನೀರಿನ ಆಕರಕ್ಕೇ ವಿಷ ಚೆಲ್ಲುತಿದ್ದೇವೆಂಬುದು ಗೊತ್ತೆ? ಕೆಳಗಿನ ಈ ಘಟನೆಗಳನ್ನು ಓದಿ:

* ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯೂಯಾರ್‍ಕ್ ಸಿಟಿಯಲ್ಲಿ ೧೯೮೨ರಲ್ಲಿ ಮಲಿನ ಬಾವಿ ನೀರನ್ನು ಕುಡಿದು ಕಾಲರಾ ಪೀಡಿತರಾಗಿ ೫೦೦ ಜನರು ಪ್ರಾಣತೆತ್ತರು.

* ವಿಷಕಾರಿ ರಾಸಾಯನಿಕಗಳ ಮಾಲಿನ್ಯದಿಂದಾದ ಅನಾಹುತವು ಇತ್ತೀಚೆಗೆ ಆಂಧ್ರಪ್ರದೇಶದ ರಾಜಧಾನಿ ಹೈದ್ರಾಬಾದ್‌ನಿಂದ ೩೦ ಕಿ.ಮೀ. ದೂರದಲ್ಲಿರುವ ಮೇದಕ್‌ಪಲ್ಲಿಯ ಪಟನ್ ಚೆರುವಿನಲ್ಲಿ ಜರಗಿತು. ಅಂತರ್‍ಜಲ ಮಾಲಿನ್ಯದ ಘೋರ ಪರಿಣಾಮಗಳಲ್ಲಿ ಇದೊಂದು.

ಅದು ಹೇಗಾಯಿತೆಂದರೆ ಅಲ್ಲಿಯ ಸುಮಾರು ೩೦೦ ಔದ್ಯೋಗಿಕ ಸಂಕೀರ್‍ಣದಲ್ಲಿಯ ರಾಸಾಯನಿಕ ಕಾರ್‍ಖಾನೆಗಳಿಂದ ವಿಸರ್‍ಜಿತವಾದ ರಾಸಾಯನಿಕ ನೀರು ಅಂತರ್‍ಜಲ ಸೇರಿ ಮಲಿನವಾಯಿತು. ಅದರ ಸುತ್ತಮುತ್ತಲಿನ ೧೪ ಹಳ್ಳಿಗಳಲ್ಲಿ ಮಾಲಿನ್ಯವುಂಟಾಗಿ ನೀರು ಹಸುರು ಬಣ್ಣಕ್ಕೆ ತಿರುಗಿತು ಮತ್ತು ಗ್ರೀಸ್‌ನ ಛಾಯೆಗಳು ಕಂಡುಬಂದವು. ಈ ನೀರನ್ನು ಕುಡಿದಿದ್ದ ಹಲವಾರು ಪ್ರಾಣಿಗಳು ಅಸುನೀಗಿದ್ದವು. ಜನರಲ್ಲಿ ಬೇಧಿ, ವಾಂತಿ, ಕಾಮಾಲೆ, ಅತಿಸಾರ ಮತ್ತು ಕಣ್ಣುರಿತಕ್ಕೆ ಕಾರಣವಾಯಿತು.

* ಇತ್ತೀಚೆಗೆ ೧೯೮೬ರಲ್ಲಿ ಲಕ್ನೋದ ಇಂಡಸ್ಟ್ರಿಯಲ್ ಟಾಕ್ಸಿಕಾಲಾಜಿಕಲ್ ರಿಸರ್‍ಚ್ ಸೆಂಟರ್‍ ನೀಡಿದ ವರದಿಯ ಪ್ರಕಾರ ಭಾರತದ ಬಾವಿಗಳಲ್ಲಿಯ ನೀರು ಮ್ಯಾಂಗನೀಸ್‌ನಿಂದ ಕಲುಷಿತಗೊಂಡಿದೆ.

* ಪಂಜಾಬ್‌ನ ಲೂಧಿಯಾನದಲ್ಲಿಯ ಜಲ ಮಾಲಿನ್ಯವು ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಹೆಚ್ಚು.

* ೧೯೭೭ ರಲ್ಲಿ ನವದೆಹಲಿಯ ಜನಕಪುರಿಯಲ್ಲಿ ಕುಡಿಯುವ ನೀರು ಗ್ರಾಮಸಾರದೊಂದಿಗೆ ಕೂಡಿ ಮಲಿನವಾಗಿದ್ದರಿಂದ ಹಿಪಟೈಟಸ್ ಎಂಬ ಭಯಂಕರ ರೋಗ ಹರಡಿತು.

* ಜಪಾನ್ ಮತ್ತು ಇರಾಕ್ ದೇಶಗಳ ಅನೇಕ ಭಾಗಗಳಲ್ಲಿ ಅಂತರ್‍ಜಲವು ಪಾದರಸ ಮಾಲಿನ್ಯದಿಂದ ಅನೇಕ ರೋಗಗಳನ್ನು ಹರಡಲು ಕಾರಣವಾಗಿದೆ.

ಅಂತರ್‍ಜಲ ಮಾಲಿನ್ಯದಿಂದ ದೇಶ-ವಿದೇಶಗಳಲ್ಲಿ ಅನೇಕ ಘೋರ ಪರಿಣಾಮಗಳು ಜರಗಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಈವರೆಗೆ ಓದಿದ್ದೀರಿ.

ವಿಜ್ಞಾನದ ಬೆಳವಣಿಗೆ, ಔದ್ಯೋಗಿಕರಣ ಮತ್ತು ಜನಸಂಖ್ಯಾ ಒತ್ತಡಗಳು ನೀರಿನ ಸಂಪನ್ಮೂಲಗಳ ಬೇಡಿಕೆಯನ್ನು ಹೆಚ್ಚಿಸಿವೆ. ನಿಸರ್‍ಗದ ಅತ್ಯುನ್ನತ ಕೊಡುಗೆಯಾದ ಅಂತರ್‍ಜಲವು ಒಳಸೂಸುವಿಕೆ, ಜಿನುಗುವಿಕೆ ಮತ್ತು ಆವೀ-ಬಾಷ್ಪೀಕರಣ ಒಳಗೊಂಡಂತೆ ೨೧೦ ಬಿಲಿಯನ್ ವಿಸ್ತೀರ್‍ಣದಲ್ಲಿ ಲಭ್ಯವಿದೆ. ಇದರಲ್ಲಿಯ ಒಂದನೇ ಮೂರು ಭಾಗದಷ್ಟು ಜಲವು ನೀರಾವರಿ, ಔದ್ಯೋಗಿಕ ಮತ್ತು ಗೃಹಬಳಕೆಯ ಉಪಯೋಗಕ್ಕೆ ಬಳಸಲಾಗಿದ್ದು, ನೀರಿನ ಹೆಚ್ಚಿನಂಶವು ಪುನರುದ್ಭವವಾಗೆ ನದಿಯನ್ನು ಸೇರುತ್ತದೆ.

ಮಳೆಯ ನೀರು ನೆಲದೊಳಕ್ಕೆ ಇಳಿದು ಶೇಖರವಾಗುತ್ತದೆ. ಇದೇ ಅಂತರ್‍ಜಲ. ಇದು ಹೇಗೆಂದರೆ ಮಳೆಯ ನೀರಿನ ಸ್ವಲ್ಪ ಭಾಗ ಮಾತ್ರ ಭೂಮಿಯಲ್ಲಿಯ ಶಿಥಿಲಗೊಂಡ ಭಾಗಗಳು, ಬಿರುಕುಗಳು ಹಾಗೂ ಶಿಲೆಯಲ್ಲಿನ ರಂಧ್ರಗಳ ಮುಖಾಂತರ ಭೂಮಿಯೊಳಗೆ ಸೇರುತ್ತದೆ. ಭೂಮಿಯ ಮೇಲೆ ಲಭ್ಯವಿರುವ ನೀರಿನಲ್ಲಿ ಸುಮಾರು ೯೮% ರಷ್ಟು ಸಿಹಿನೀರು ಅಂತರ್‍ಜಲದಲ್ಲಿ ಅಡಗಿದೆ. ಆದುದರಿಂದ ಅಂತರ್‍ಜಲವು ನೈಸರ್‍ಗಿಕ ಸಂಪನ್ಮೂಲದಲ್ಲಿ ಅಮೂಲ್ಯವಾದುದೆಂದು ಹೇಳಬಹುದು. ಉಳಿದ ೨%ರಷ್ಟು ನೀರು ಸರೋವರ, ನದಿ, ಹಳ್ಳ-ಕೊಳ್ಳ ಮತ್ತು ಜಲಾಶಯಗಳಲ್ಲಿ ಅಡಗಿದೆ. ಮೇಲ್ಮೈಯ ಸಿಹಿನೀರಿನಲ್ಲಿ ಸುಮಾರು ೯೦% ರಷ್ಟು ‘ಅಂತರ್‍ಜಲ’ ಎಂದು ಕರಸಿಕೊಳ್ಳುತ್ತದೆ.

ಅಂತರ್‍ಜಲವು ಜಲಾಶಯದ ರೂಪದಲ್ಲಿ ಭೂಮಿಯ ಸ್ತರಗಳಲ್ಲಿ ಸಂಚಯಿಸಿದೆ. ಮೇಲ್ಮೈ ನೀರಿನಂತೆ ಅಂತರ್‍ಜಲಕ್ಕೂ ಹರಿವು ಇದೆ. ತೇಲು ವಸ್ತುಗಳನ್ನು ಮತ್ತು ಬ್ಯಾಕ್ಟೀರಿಯಾ ಕಲ್ಮಶವನ್ನು ತಡೆಗಟ್ಟುವುದರೊಂದಿಗೆ ನೀರಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ಬಾವಿ, ಬುಗ್ಗೆಗಳ ನೀರಿನ ಉಗಮವಾಗಿದ್ದು ಗೃಹಬಳಕೆಯ ಉಪಯೋಗಕ್ಕೆ ಬಳಕೆಯಾಗುತ್ತದೆ.

ಅಂತರ್‍ಜಲ ಮಾಲಿನ್ಯ

ಮಾನವನ ನಿರಂತರ ಚಟುವಟಿಕೆಗಳಿಂದ ಔದ್ಯೋಗಿಕ, ಗೃಹಬಳಕೆಯ ಮತ್ತು ಕೃಷಿಯ ತ್ಯಾಜ್ಯ ವಸ್ತುಗಳು ಅಂತರ್‍ಜಲಕ್ಕೆ ಅಪಾಯದ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಅಂತರ್‍ಜಲವು ಒಮ್ಮೆ ಕಲುಷಿತವಾಯಿತೆಂದರೆ ಮತ್ತೆ ಶುದ್ಧೀಕರಣವಾಗುವುದು ತುಂಬ ಕಷ್ಟ. ಅಂತರ್‍ಜಲದ ಅತಿ ಖನೀಜಿಕರಣದಿಂದ ನೀರಿನ ಗುಣಮಟ್ಟ ಕುಂಠಿತವಾಗಿ ಅದಕ್ಕೆ ಅನಪೇಕ್ಷಿತ ರುಚಿ, ಬಣ್ಣ ಮತ್ತು ಹೆಚ್ಚಿನ ಗಡಸುತನ ಬರುತ್ತದೆ.

ಅಂತರ್‍ಜಲ ಮಾಲಿನ್ಯಕ್ಕೆ ಪರಿಣಾಮ ಬೀರುವ ಅಂಶಗಳು:

೧) ಮಳೆಯ ಸುರಿತದ ನಮೂನೆ
೨) ಅಂತರ್‍ಜಲದ ಆಳ
೩) ಮಾಲಿನ್ಯದ ಮೂಲ ಇರುವ ದೂರ
೪) ಮಣ್ಣಿನ ಗುಣಲಕ್ಷಣಗಳಾದ ಸಂರಚನೆ, ರಚನೆ, ಸೋಸುವ ದರ ಇತ್ಯಾದಿ.

ಅಂತರ್‍ಜಲ ಮಾಲಿನ್ಯ ಆಕರಗಳು:

ಕುಡಿಯುವ ನೀರಿನ ಅಂತರ್‍ಜಲ ಇದು. ಮುಖ್ಯವಾಗಿ ನಗರ ಮತ್ತು ಹಳ್ಳಿಗಳಲ್ಲಿ ಅತ್ಯಂತ ಹೆಚ್ಚು ಮಾಲಿನ್ಯಕ್ಕೊಳಗಾಗಿದೆ:
೧) ಗೃಹಬಳಕೆಯ ತ್ಯಾಜ್ಯ
೨) ಔದ್ಯೋಗಿಕ ತ್ಯಾಜ್ಯ
೩) ಕೃಷಿಯ ತ್ಯಾಜ್ಯ
೪) ಪಟ್ಟಣದ ಹರಿದು ಬರುವ ಮಲಿನತೆ

ಗೃಹಬಳಕೆಯ ವ್ಯರ್‍ಥ ಪದಾರ್‍ಥಗಳು ಮತ್ತು ಅವುಗಳ ಬಿಡುಗಡೆ ನಗರ ಪ್ರದೇಶಗಳಲ್ಲಿ ಮಾಲಿನ್ಯಕ್ಕೆ ಬಹುಮುಖ್ಯ ಕಾರಣವಾಗಿದೆ.

ಘನ ತ್ಯಾಜ್ಯವಸ್ತುಗಳು ಅರ್‍ಧಮರ್‍ಧ ಉರಿದು ಮತ್ತು ಅರ್‍ಧಮರ್‍ಧ ವಿಘಟಿತವಾದವು ಅಂತರ್‍ಜಲಕ್ಕೆ ಅಪಾಯ ತರುತ್ತವೆ. ಇವು ಅಂತರ್‍ಜಲ ಮಾಲಿನ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಹೆಚ್ಚು ಕಾರ್‍ಖಾನೆಗಳು ವಿಷಯುಕ್ತ ಭಾರ ಲೋಹಗಳು, ಕಾರ್‍ಬಾನಿಕ್, ಅಕಾರ್‍ಬಾನಿಕ್ ಮತ್ತು ವಿಷವಸ್ತುಗಳನ್ನು ವಿಸರ್‍ಜಿಸುತ್ತವೆ. ಈ ರಾಸಾಯನಿಕಗಳು ಅಂತರ್‍ಜಲಕ್ಕೆ ಸೇರಿ ಕಲುಷಿತಗೊಳಿಸುತ್ತವೆ.

ಗೊಬ್ಬರಗಳು, ಕೀಟನಾಶಕಗಳು, ಪೀಡೆನಾಶಕಗಳು, ಸಸ್ಯನಾಶಕಗಳು ಮತ್ತು ಪ್ರಾಣಿಗಳ ವ್ಯರ್‍ಥ ಪದಾರ್‍ಥಗಳು ಇತ್ಯಾದಿ ನೀರಿಗೆ ನಿರಂತರವಾಗಿ ಸೇರುತ್ತವೆ. ಕೃಷಿ ಭೂಮಿಯಲ್ಲಿಯ ಕ್ಷಾಲನಗೊಂಡ ನೈಟ್ರೇಟುಗಳು, ಫಾಸ್ಫೇಟುಗಳು ಮತ್ತು ಪೊಟಾಶ್, ಜಿನುಗುವ ನೀರಿನೊಂದಿಗೆ ಕೆಳಗೆ ಹರಿದು ಅಂತರ್‍ಜಲ ಸೇರಿ ವಿಷಯುಕ್ತವಾಗಿಸುತ್ತವೆ.

ಪಟ್ಟಣಗಳಲ್ಲಿ ಮನೆಗಳಿಂದ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ಹರಿದುಬರುವ ಎಣ್ಣೆ, ಗ್ರೀಸ್, ಪೋಷಕಾಂಶಗಳು, ಭಾರಲೋಹಗಳು ಮತ್ತು ಡಿಟರ್‍ಜೆಂಟ್‌ಗಳು, ಪಟ್ಟಣದ ಮನೆಗಳಿಂದ ಹರಿದುಬರುವ ತ್ಯಾಜ್ಯವಸ್ತುಗಳು, ನೀರಲ್ಲಿ ವಿಲೀನವಾಗಿ ಮಣ್ಣಿನಲ್ಲಿ ಜಿನುಗಿ ಅಂತರ್‍ಜಲ ಸೇರುತ್ತವೆ. ಹೊಂಡಗಳಲ್ಲಿ ಹಾಕುವ ಘನ ಹೊಲಸು ವಸ್ತುಗಳು ಸರೋವರ, ಹೊಂಡ ಅಥವಾ ಹಳ್ಳಿಗಳ ನೀರು ಬಸಿಯುವಿಕೆಯಿಂದ ಅಂತರ್‍ಜಲ ಮಲಿನಗೊಳ್ಳಬಹುದು. ಮಳೆನೀರು ದೂಳು ಮತ್ತು ಗಾಳಿಯಿಂದ ಮಲಿನಕಾರಕಗಳೊಂದಿಗೆ ಕೂಡಿ ಅಂತರ್‍ಜಲ ಸೇರಬಹುದು.

ಭಾರತದಲ್ಲಿ ಕುಡಿಯುವ ನೀರಿನ ಅಂತರ್‍ಜಲ ಮೂಲವು ಅತಿಯಾಗಿ ಮಾಲಿನ್ಯವಾಗಿದೆ. ಅಂತರ್‍ಜಲ ಮಾಲಿನ್ಯ ಕುರಿತು ಅನೇಕ ವಿಜ್ಞಾನಿಗಳು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿದ್ದಾರೆ. ಉತ್ತರ ಪ್ರದೇಶ, ಗುಜರಾತ್, ದೆಹಲಿ, ಮುಂಬಯಿ ಮತ್ತು ಕೊಲ್ಕತ್ತಾಗಳಲ್ಲಿ ಅಧ್ಯಯನ ನಡೆದಿದೆ.

ಅಸ್ಸಾಂ, ಓರಿಸ್ಸಾ, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಅತಿಯಾಗಿ ಮಳೆ ಸುರಿಯುವ ಪ್ರದೇಶಗಳಲ್ಲಿ ಅಂತರ್‍ಜಲವು ಕಬ್ಬಿಣ ಅಂಶದ ನೈಸರ್‍ಗಿಕ ಕಾರಣದಿಂದಾಗಿದೆ. ಅಂತರ್‍ಜಲ ಮಾಲಿನ್ಯದ ಇತರ ಮೂಲಗಳೆಂದರೆ:
* ತ್ಯಾಜ್ಯ ನೀರು ಶುದ್ಧೀಕರಿಸುವ ಘಟಕಗಳು
* ಸಾರಿಗೆ ಅಪಘಾತಗಳು
* ಬಸಿಯುವ ಹೊಂಡಗಳು
* ಗ್ರಾಮೀಣ ಮತ್ತು ನಗರ ಕೊಳಚೆ
* ಸೆಪ್ಟಿಕ್ ಟ್ಯಾಂಕ್‌ಗಳು
* ತ್ಯಾಜ್ಯ ವಸ್ತು ಶೇಖರಿಸುವ ಸ್ಥಳ
* ಮಲಿನಕಾರಕಗಳು ಕ್ಷಾಲನ ಮತ್ತು ಅಂತರ್‍ಜಲಕ್ಕೆ ಹರಿಯುವಿಕೆ

ಅಪಾಯಕಾರಿ ಪರಿಣಾಮಗಳು

ಈಗಾಗಲೇ ತಿಳಿಸಿದಂತೆ ಅಂತರ್‍ಜಲ ಮಾಲಿನ್ಯವು ಮಣ್ಣು, ಸಸ್ಯ ಮತ್ತು ಪ್ರಾಣಿಗಳಿಗೆ (ಮಾನವನನ್ನು ಒಳಗೊಂಡಂತೆ) ಸುಧಾರಿಸಲಾಗದ ಹಾನಿ ಉಂಟು ಮಾಡುತ್ತದೆ.

ಅಂತರ್‍ಜಲ ಮಾಲಿನ್ಯದಿಂದ ಮಾನವನಲ್ಲಿ ಸಾಂಕ್ರಾಮಿಕ ಮತ್ತು ಬೇರೂರಿರುವ ರೋಗಗಳನ್ನು ಹರಡಲು ಮುಖ್ಯ ಕಾರಣವಾಗಿದೆ. ಇದು ಟೈಫಾಯ್ಡ್, ಕಾಮಾಲೆ, ಬೇಧಿ, ಅತಿಸಾರ, ಕ್ಷಯ ಮತ್ತು ಹೆಪಟೈಟಸ್ ಹರಡಿಸಬಲ್ಲದು.

ನಾರುಗಳಿಂದ ಕಲುಷಿತಗೊಂಡ ನೀರು ಅಸ್‌ಬೆಸ್ಟಾಸಿಸ್ ಮತ್ತು ಪುಪ್ಪುಸ ಕ್ಯಾನ್ಸರ್‍ ಹರಡಲು ಕಾರಣವಾಗುತ್ತದೆ.

ಪಂಜಾಬ್, ಲೂಧಿಯಾನ, ಹರ್‍ಯಾಣ, ಅಂಬಾಲ ಮತ್ತು ಸೊನೇಪೇಟಗಳಲ್ಲಿ ಉಣ್ಣೆ ತಯಾರಿಸುವ ಕಾರ್‍ಖಾನೆಗಳು ಪಾದರಸ, ನಿಕಲ್, ತಾಮ್ರ, ಕ್ರೋಮಿಯಂ, ಕಬ್ಬಣ ಮತ್ತು ಸೈನೈಡ್‌ಗಳಂತಹ ವಿಷಕಾರಿ ಲೋಹಗಳು ಅಂತರ್‍ಜಲಕ್ಕೆ ಕೊಡುಗೆಯಾಗಿ ನೀಡುತ್ತಿವೆ. ಇದರಿಂದ ಚರ್‍ಮ ಮತ್ತು ಅನ್ನನಾಳಕ್ಕೆ ಸಂಬಂಧಿಸಿದ ರೋಗಗಳು ಬರುತ್ತವೆ.

ಮಲಿನಕಾರಕ ಅಂತರ್‍ಜಲವನ್ನು ಕೃಷಿಯಲ್ಲಿ ಬಳಸುವುದರಿಂದ ಬೆಳೆಗಳು ನಾಶವಾಗಿ, ಬೀಜಗಳ ಉತ್ಪಾದನೆ ಕುಂಠಿತವಾಗುತ್ತದೆ.

ಮಣ್ಣಿನಲ್ಲಿಯ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮ ಜೀವಿಗಳು ಸಾಯುವುದರಿಂದ ಮಣ್ಣಿನ ಫಲವತ್ತತೆಯು ನಾಶವಾಗುತ್ತದೆ.

ಅಂತರ್‍ಜಲ ಮಲಿನತೆಯಿಂದ ಮಣ್ಣಿನ ಕ್ಷಾರೀಯ ಅಂಶ ಹೆಚ್ಚುತ್ತದೆ.

ಇದು ಸಸ್ಯಗಳಲ್ಲಿಯ ಕ್ರಿಯೆಗಳನ್ನು ಪರಿಣಾಮ ಬೀರುವುದಷ್ಟೇ ಅಲ್ಲದೇ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.

ಇತ್ತೀಚೆಗೆ ಒಂದು ಅಧ್ಯಯನದ ಪ್ರಕಾರ ಮುಂಬಯಿಯ ಮಾರುಕಟ್ಟೆಯಲ್ಲಿ ಖರೀದಿಸಿದ ೨೨ ಮೀನುಗಳಲ್ಲಿ ೬ ರಲ್ಲಿ ಮಾಂಸದ ಪ್ರತಿ ಗ್ರಾಂನಲ್ಲಿ ೪.೬ ರಿಂದ ೨೮೩ ಮಿ.ಗ್ರಾಂ ವರೆಗೆ ಪಾದರಸದ ಅಂಶ ಕಂಡುಬಂದಿದೆ. ಆದುದರಿಂದ ಶಿಲೀಂದ್ರನಾಶಕ, ಬೂಷ್ಟುನಾಶಕಗಳನ್ನು ಬಳಸುವುದನ್ನು ಕೈಬಿಡಬೇಕು.

ಮಲಿನಕಾರಕ ಮೂಲಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು. ಅಂತರ್‍ಜಲ ಮಟ್ಟದ ಅರಿವು ಮತ್ತು ಆಯಾ ಪ್ರದೇಶದ ನೀರು ಜಿನುಗುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಔದ್ಯೋಗಿಕ ಮತ್ತು ಮುನಿಸಿಪಾಲಿಟಿ ತ್ಯಾಜ್ಯ ಜಾಗಗಳನ್ನು ನಿರ್‍ಧರಿಸಬೇಕು.

ಕಾರ್‍ಖಾನೆಗಳ ತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ಸುರಕ್ಷಿತ ಜಾಗಕ್ಕೆ ಸಾಗಿಸಲು ಕಾರ್‍ಖಾನೆಗಳಲ್ಲಿ ಕಾಳಜಿ ವಹಿಸಬೇಕು.

ಕುಡಿಯುವ ನೀರಿಗಾಗಿ ಇರುವ ಬಾವಿಯನ್ನು ಬಹಳ ಜಾಗರೂಕತೆಯಿಂದ ಆರಿಸಬೇಕು ಮತ್ತು ಸುತ್ತಮುತ್ತಲಿನ ಮಲಿನದ ಮೂಲ ಮತ್ತು ಹರಿಯುವ ದಿಕ್ಕನ್ನು ಅನುಸರಿಸಬೇಕು. ಕುಡಿಯುವ ನೀರಿಗಾಗಿ ಮೇಲ್ಮೈ ಮಟ್ಟದ ಜಲಸ್ತರವನ್ನು ಉಪಯೋಗಿಸಲೇಬಾರದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನದೊಳು ಬೆಳೆವ ಸಸ್ಯಕ್ಕೆ ಮಿತಿಯುಂಟೇ?
Next post ಅತ್ತೆಯೆಂದರೆಕೋ ಕಾಣೆ

ಸಣ್ಣ ಕತೆ

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…