ಎಲ್ಲ ಕಪ್ಪೆಗಳಂತಲ್ಲ
ನಮ್ಮ ಗೂಂಕುರು ಕಪ್ಪೆ
ಇನ್ನುಳಿದ ಕಪ್ಪೆಗಳೆಲ್ಲ
ಇದುರೆದುರು ಬರಿಯ ಸಪ್ಪೆ

ಹೆಬ್ಬಂಡೆಯಂತೆ ಹೇಗೆ
ಕುಳಿತು ಬಿಟ್ಟಿದೆ ನೋಡಿ ಹೀಗೆ
ನಾವು ನಡೆವ ದಾರಿಗಡ್ಡ
ಎಲ್ಲಿಂದ ಬಂತೊ ಈ ಗುಡ್ಡ!

ಮೇಲೆಲ್ಲ ಕಣಿವೆ ಕೊಳ್ಳ
ಅಲ್ಲಿಲ್ಲಿ ಕೆಲವು ಹಳ್ಳ
ಮೂಡಿದರೆ ಕಾಮನಬಿಲ್ಲು
ಪ್ರತಿಫಲಿಸುವುದು ಇರದ ಮೈಯಲ್ಲು?

ಕಣ್ಣುಗಳು ಒಂದೊಂದು ಹವಳ
ಅದರೊಳಗೆ ಬೆಳಕುಗಳು ಬಹಳ
ಎವೆಯಿಕ್ಕದಂಥ ಬಿಡುನೊಟ
ಇಕ್ಕಿದರೆ ಭೂತಗಳ ಕಾಟ

ಯಾವ ದೊರೆ ಮಗನಯ್ಯ ನೀನು?
ದೊರಕೊಂಡ ಶಾಪವಾದರು ಏನು?
ಅಡ್ಡಹಾಯ್ದರೆ ಎಂಥ ಚೆಲುವೆ
ನಿಜ ರೂಪಕೆ ನೀನು ಬರುವೆ?
*****