ಪ್ರೀತಿಯ ಗೆಳೆಯಾ,

ಮಳೆ ಬಂದಿಲ್ಲ. ಬಾಂಬೆಯಲ್ಲಿ ಭಾರಿ ಮಳೆ ಅಂತೆ. ಘಟ್ಟದ ಮೇಲೆ ಘಟ್ಟದ ಕೆಳಗೆ ಕರಾವಳಿಯಲ್ಲಿ ಭಾರಿಮಳೆ ಅಂತ ಚಿಕ್ಕಿ ಕಾಗದ ಹಾಕಿದ್ದಾಳೆ. ಕಪ್ಪಾದ ಪಡುಕೋಣೆಯಲ್ಲಿ ಭೋರೆಂದು ಸುರಿಯುವ ಮಳೆಯಲ್ಲಿ ಚಿಕ್ಕಿಯರು ಹಲಸಿನ ಹಣ್ಣು ಸುಲಿಯುವಾಗ, ನಮ್ಮ ಪುಟ್ಟ ಪುಟ್ಟ ಕೈಗಳು ಹಣ್ಣಿನ ತೊಳೆಗಾಗಿ ಕಿಟಕಿಯ ದಳಿಗಳ ಸಂದಿಯಿಂದ ಚಾಚಿದಾಗ, ಒಂದೇ ತೊಳೆ ಕೈಗೆ ಬೀಳುತ್ತಿತ್ತು. ಕಡುಬು ಮಾಡಲು ತೊಳೆಗಳು ಕಡಿಮೆ ಆಗುತ್ತವೆ ಅಂತ ಮಕ್ಕಳನ್ನು ಬರೀಗೈಯಲ್ಲಿ ಕಳುಹಿಸುತ್ತಿದ್ದದ್ದು, ಯಾಕೋ ಊರಿನಲ್ಲಿ ಮಳೆ ಬಿದ್ದಾಗಲ್ಲೂ ಬಹಳ ನೆನಪಾಗುತ್ತದೆ. ಈಗ ಕೊಂಡು ತಿನ್ನಬೇಕೆಂದರೂ ಆರೋಗ್ಯದ ಕಸಿವಿಸಿ. ತಿನ್ನುವಾಗ ತಿನ್ನಲು ಸಿಕ್ಕುತ್ತಿರಲಿಲ್ಲ. ಈಗ ತಿನ್ನುವ ಭಾಗ್ಯವೇ ಇಲ್ಲ.

ದೋಸ್ತ, ನೀನೊಮ್ಮೆ ಚಿಕ್ಕಿಯ ಕಾಗದ ಓದಬೇಕು. ಇಡೀ ಕುಟುಂಬದ ಟೊಂಗೆಗಳು ಎಲ್ಲೆಲ್ಲಿ ಹರಡಿಕೊಂಡಿವೆ, ಯಾರಾರು ಯಾವ ಯಾವು ಜಾತಿಯವರನ್ನು ಮದುವೆ ಆದರು. ಯಾರಾರು ಅಮೇರಿಕದಿಂದ ಊರಿಗೆ, ಮದುವೆ, ಮುಂಜವೆ, ಮಕ್ಕಳ ದೇವತಾಕಾರ್ಯಕ್ಕೆ ಬಂದಿದ್ದಾರೆ, ಯಾರಾರ ಮಕ್ಕಳು ಇಂಪೋಸಿಸ್, ಐ.ಟಿ.ಬಿ.ಟಿ. ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದ್ದಾರೆ. ಬೆಂಗಳೂರಿನಲ್ಲಿ ಮನೆಗಳನ್ನು ಕಟ್ಟಿಸಿದ್ದಾರೆ, ಹೇಗೆ ಅಪ್ಪ ಅಮ್ಮಂದಿರನ್ನು ಸಾಕುತ್ತಾರೆ, ತಾತ್ಸಾರ ಮಾಡುತ್ತಾರೆ, ಮತ್ತೆ ಯಾರಾರ ಮನೆಯಲ್ಲಿ ವೈಕುಂಠ ಸಮಾರಾಧನೆ, ದೇವಸ್ಥಾನದಲ್ಲಿ ರಂಗಪೂಜೆ, ಚಂಡೀ ಹೋಮ ನವಗ್ರಹ ಶಾಂತಿ, ಅಗ್ರಹಾರದಲ್ಲಿ ಎಂತಹ ಹೊಸಗಾಳಿ, ಮಳೆಯ ಜೋರು, ಹೂವು ತರಕಾರಿ ಹಣ್ಣುಗಳ ಬೆಲೆ, ಕಾಯಿಸಿ ಆರಿಸಿ ನೀರು ಕುಡಿಯುವ ಬಗ್ಗೆ, ವಾರಕ್ಕೆ ಎರಡು ಸಲ ತಪ್ಪದೇ ತಲೆಸ್ನಾನ ಮಾಡುವ ಬಗ್ಗೆ, ದಿನಾಲೂ ತಪ್ಪದೇ ತೆಗೆದುಕೊಳ್ಳುವ ಮಾತ್ರೆಗಳ ಬಗ್ಗೆ, ಬೆಡ್ ಸೀಟ್ ಬಟ್ಟೆಗಳನ್ನು ಬೇರೆ ಬೇರೆ ತೋಯುಸುವ ಬಗ್ಗೆ, ಹಣ ಉಳಿತಾಯದ ಬಗ್ಗೆ, ನಾನು ಬರೆಯುವ ಕಥೆಗಳ ಬಗೆಗೆ, ಒಂದೇ ಎರಡೇ. ಈ ಐವತ್ತು ವರ್ಷಗಳಲ್ಲಿ ಅಮ್ಮನಿಲ್ಲದಿದ್ದರೂ, ಚಿಕ್ಕಿಗಳಿಬ್ಬರೂ ಎಂತಹದೋ ಹೇಳಲಾಗದ ಕೌದಿಯಲ್ಲಿ ಹೆಣೆದಿದ್ದಾರೆ. ನಾನು ಇದ್ದ ಒಬ್ಬ ಮಗಳಿಗೆ ಒಂದೂ ಪತ್ರ ಬರೆದಿಲ್ಲ. ಯಾಕೆಂದರೆ ಅವಳು E mail. ನಾನು ಬರೀ Mail, ಯಾವ ಲೇಖನದ ಯಾವ ಕವಿತೆಯ ಯಾವ ಕಥೆಯ ಸಾಲುಗಳು ಯಾರ ಎದೆಯ ಕೊಳದಲ್ಲಿ ತಾವರೆ ಹೂವುಗಳನ್ನು ಅರಳಿಸುತ್ತದೆಯೋ? ನಿನಗೆ ಗೊತ್ತಾ. ನನಗೆ ಅಕ್ಷರಗಳನ್ನು ಬರೆದು ಕಾಗದದ ದೋಣಿ ತೇಲಬಿಡುವುದು ಬಹಳ ಇಷ್ಟ. ನಾನು ಎಷ್ಟೊಂದು ದೋಣಿಗಳನ್ನು ತೇಲಿಬಿಟ್ಟಿದ್ದೇನೆ. ಯಾರೂ ತಿರುಗಿ ನನಗೆ ತಮ್ಮ ಕಾಗದದ ದೋಣಿಗಳನ್ನು ಕಳುಹಿಸಲೇ ಇಲ್ಲ. ನನಗೆ ಆವಾಗ ಜೋರಾಗಿ ಸಿಟ್ಟು ಬರುತ್ತದೆ. ಎಲ್ಲರ ಗೆಳೆತನ ನಿಲ್ಲಿಸಬಿಡಬೇಕು ಎನಿಸುತ್ತದೆ. ಪತ್ರಗಳ ತಾವು ತಾವಾಗೇ ಟೇಬಲ್ಲಿನ ಮೇಲೆ ಬಂದು ಕುಳಿತುಬಿಡುತ್ತವೆ. ಮತ್ತೆ ಅಕ್ಷರಗಳನ್ನು ತೇಲಿಸುತ್ತೇನೆ. ಈ ತೇಲುವ ತೇಲಿಸುವ ಕೆಲಸ ಎಷ್ಟೊಂದು ಖುಷಿಯ ತರಂಗಗಳನ್ನು ಹುಟ್ಟಿಹಾಕಿ ಬಿಡುತ್ತದೆ ದೋಸ್ತ, ಇಡೀ ವಾರದ ಬೆಳುಕು ಮತ್ತೆ ಅದೇ ಉಲ್ಲಾಸದಲ್ಲಿ ಕಿರಣಗಳನ್ನು ಹರಡುತ್ತದೆ. ಮತ್ತೆ ನೆನಪುಗಳು ಮುಖಗಳು ನಗು ತಮಾಶೆ ಎಲ್ಲವೂ ಅಂಗಳದಲ್ಲಿ ರಂಗೋಲಿ ಮೂಡಿಸುತ್ತವೆ.

ಚಿಕ್ಕಿ ಬರೆಯುತ್ತಾಳೆ ತೋಡಿಗಿಳಿದ ಬಣ್ಣ ಮೂಡಿಸುವ ಸೂರ್ಯ, ತೇಲುವ ಬಣ್ಣದ ಮೀನುಗಳ, ತೋಡಿಯು ಪಕ್ಕದಲ್ಲಿದ್ದ ನೇರಳೆ ಹಣ್ಣಿನ ಮರ ಕಡಿದಾಗ ಸ್ವಲ್ಪದಿಂದ ಗೋಚರಿಸಲೇ ಇಲ್ಲ. ಹಣ್ಣುಗಳನ್ನು ಚೆಲ್ಲಾಡಿ ಬಡಿದಾಡಿ ತಿನ್ನುತ್ತಿದ್ದ ಮೀನುಗಳು ಮರ ಇಲ್ಲದಾಗ ಸಮುದ್ರ ಕಡೆಗೆ ಹರಿದು ಹೋದ ಬಗ್ಗೆ, ದಿನಾಲೂ ದೋಸೆ ತಂಡುಗಳಿಗೆ ಪಾಗರದ ಮೇಲೆ ಓಡಿ ಬರುವ ಒಂದು ಅಳಿಲುಮರಿ ಕಾಣೆಯಾದ ಬಗ್ಗೆ, ಅಜ್ಜಿಯ ಮನೆಯ ಗೌರಿ ಇದ್ದಕ್ಕಿಂದ್ದಂತೆ ದೊಪ್ಪೆಂದು ಬಿದ್ದು ಸತ್ತು ಹೋದ ಬಗ್ಗೆ, ಮರಲಿ ಸಣ್ಣ ಬಾವಿಗೆ ಬಿದ್ದ ಬಗ್ಗೆ, ಅವಳ ಆತಂಕಗಳು ಪ್ರಾಣಿಗಳ ಬಗ್ಗೆ, ನನ್ನಲ್ಲಿ ವಿಸ್ಮಯ ಹುಟ್ಟಿಸುತ್ತದೆ. ತಂಗಿ ದಿನಾಲೂ ಬಟ್ಟೆ ಒಗೆಯುವ ಕಲ್ಲಿನ ಹತ್ತಿರ ಹಕ್ಕಿ ಪಕ್ಷಿಗಳಿಗೆ ಬಕೇಟಿನಲ್ಲಿ ತಪ್ಪದೇ ನೀರು ತುಂಬಿ ಆಫೀಸಿಗೆ ಹೋಗುತ್ತಾಳೆ. ಇಂತಹ ಕಕ್ಕುಲತೆಯ ಜೀನ್ಸ ಚಿಕ್ಕಿಯಿಂದ ತಂಗಿಗೆ ಬಂದಿರ ಬಹುದೇ?

ಲೋಕವನ್ನು ಹಿಂಜಲು ನಮ್ಮ ಮನಸ್ಸು ಸಿದ್ದವಾಗ ಬೇಕು ಅಂತ ಗೆಳೆಯ ಜಯಂತ್ ಆಗಾಗ್ ಹೇಳುತ್ತಾರೆ. ಆದರೆ ಅಲ್ಲಿ ಮಾತನ್ನು ತುಂಡರಿಸಿ ಮೌನದ ಟಾರ್ಚಬೆಳಕು ಬೇಕು ಅಂತಲೂ ಹೇಳುತ್ತಾರೆ. ನಾವೇನು ಅವಡುಗಚ್ಚಿ ಬದುಕನ್ನು ಗ್ರಹಿಸಬೇಕಾಗಿಲ್ಲ. ಸಹಜ ಮನಸ್ಸಿನಿಂದ ಬದುಕಿದಾಗ, ಬರೆದಾಗ ಧ್ವನಿ ಪೂರ್ಣವಾಗುತ್ತದೆ. ದೊಸ್ತ, ನಮ್ಮದೇ ಆದ ಜಗತ್ತು ನಮ್ಮನ್ನು ಪೋಷಿಸುವ ಧ್ವನಿಗಳು, ರಾಗಗಳು, ನೋಟಗಳು, ಕೂಟಗಳು, ಎಲ್ಲವೂ ಸಹಜವಾಗಿ ಗರಿಕೆದರಿದರೆ ಹಸಿರು ಬನ ಚಿಗುರುವುದು ಅಂತಃಕರಣದಲ್ಲಿ. ನಿಮ್ಮ ಐ.ಟಿ.ಬಿ.ಟಿ ಕಂಪನಿಗಳಲ್ಲಿ ಚಿಗುರುವ ಸಹಜತೆಗಳಾವವು ದೋಸ್ತ. ನನಗೆ ಮೊದಲಿನಿಂದಲು ಇತಿಹಾಸ ಓದುವಾಗಿನಿಂದಲೂ ಈ Company ಎಂಬ ಶಬ್ದ ಬಹಳ ಇರುಸು ಮುರುಸು ಹುಟ್ಟಿಹಾಕಿದೆ. ಕಂಪನಿಗಳ ವ್ಯವಹಾರದ ಹಕೀಕತ್ತುಗಳು ನನ್ನ ಮಂಡೆಗೆ ಹೊಳೆಯುವದಿಲ್ಲ. ಗೆಳೆಯಾ, ಚಿಕ್ಕಿ ಪ್ರತೀ ಕಾಗದದಲ್ಲೂ ಬರೆಯುತ್ತಾಳೆ. ದಿನಾಲು ಸಂಜೆ ಸ್ವಲ್ಪ ಹೊತ್ತು ಧ್ಯಾನಮಾಡು, ಅದರಿಂದ ಎಲ್ಲೋಲ್ಲೋ ಓಡುವ ಮನಸ್ಸು ಗಕ್ಕನೆ ನಿನ್ನ ತೆಕ್ಕೆಗೆ ಸಿಕ್ಕುತ್ತದೆ ಎಂದು. ನನಗೆ ಸಂಜೆ ಹೊತ್ತಿನಲ್ಲಿ ಹಾಗೆ ಏಕಾಂತದ ಲೋಕಾಂತ ನನ್ನ ರೀತಿಯಲ್ಲೇ ಸಾಗಬೇಕು. ಟೇರೆಸ್ಸಿನ ಮೇಲೆ ಹತ್ತಿ ಸುಮ್ಮನೆ ಹಾರುವ ಹಕ್ಕಿಗಳು ಮಜಾ ಮಜಾ ಆಗಿ ಬದಲಾಗುವ ಮೋಡಗಳ ಹಿಂಡು, ಒಮ್ಮೊಮ್ಮೆ ಹೆದರಿಕೆ ಹುಟ್ಟಿಸುವ ಪೂರ್ತಿ ಘಾಡ ನೀಲಿಯಲ್ಲಿ, ಒಂದೇ ಹೊಳೆಯುವ ಚಿಕ್ಕಿ, ಮತ್ತೆ ಎದುರು ಮನೆಯ ಟಾರಸಿ ಮನೆಯಲ್ಲಿದ್ದ ಮೆಡಿಕಲ್ ಓದುವ ಹುಡುಗಿಯ ಕೈಯಲ್ಲಿದ್ದ ಮೊಬೈಲ್, ಮತ್ತೆ ಆ ಸಂಜೆ ಅವಳು ನಿರಾಳವಾಗಿ ಮಾತನಾಡಿ ಕಿಸಕ್ಕನೆ ನಗುವ ಪರಿ, ಮತ್ತೆ ನೀಲ ಆಕಾಶದಲ್ಲಿ ಮೊಸರು ಚೆಲ್ಲಿದಂತೆ ಹೊಗೆ ಮೂಡಿಸುತ್ತ ಸಾಗುವ ವಿಮಾನ, ಎ ಸೀಟಿನಲ್ಲಿ ಕನ್ನಡಕ ಓರೆಯಾಗಿ ಓದುವ ಕೂಚುಭಟ್ಟ ನೀನು, ಎಲ್ಲವೂ ಕಾಣಬೇಕು. ಅಲ್ಲಿ ಲತಾ ರಫಿಯರ ಪ್ರೇಮಗೀತೆಗಳ ಯುಗಳ ಗೀತೆಗಳ ಝಳಕು ಕಿವಿಯಲ್ಲಿ ಗುಂಯ್ ಗುಡಬೇಕು. ಇದು ಖುಷಿ ಕೊಡುವ ನನ್ನ ಧ್ಯಾನ, ಅಲ್ಲಿ ನನ್ನ ಮಂಡಿನೋವು, ಸಕ್ಕರೆ ಖಾಯಿಲೆ, ಥೈರಾಯ್ಡ್ ಸಮಸ್ಯೆ ಮುಟ್ಟು ನಿಂತ ಧಾವಂತ, ಸಂಜೆಯ ತೀರಮೌನಗಳು, ಎಲ್ಲವೂ ಉರಿಯುವ ಸೂರ್ಯನೊಂದಿಗೆ ಆಗಲೇ ಸಮುದ್ರದಲ್ಲಿ ಮುಳುಗಿ ಹೋಗಿರುತ್ತದೆ.

ಬರೆದು ತೆರೆದು ಕೊಳ್ಳುವುದು ತುಂಬ ಸರಳ, ಅಲ್ಲಿ ಕೇಳಿಸಿಕೊಳ್ಳುವ ಮರು ಉತ್ತರ ನೀಡುವ ಹಿಪೋಕ್ರಸಿ ಇರುವುದೇ ಇಲ್ಲ. ಅನುಭವಗಳನ್ನು ಬರೆಯುವುದು, ಮನಸ್ಸು ಆ ಕ್ಷಣದಲ್ಲಿ ಒಂದಾಗುವುದು, ಸಂಕೋಲೆ ಇಲ್ಲದ ನಿರಾಳ ಕ್ಷಣಗಳು, ಬಿಟ್ಟಿದೂರ ಎಸೆದ ಅಂಗಿಗಳಂತೆ ಒಂಥರಾ ತಂಗಾಳಿ ಎದೆಯ ಬದುವಿಗೆ ತೀಡುತ್ತದೆ. ಬರೆಯುವುದು ಕಣ್ಣು ತೆರೆದುಕೊಂಡು ಮಾಡುವ ಧ್ಯಾನ. ಅಲ್ಲ ಎಷ್ಟೊಂದು ನೋಟಗಳು ಕೂಟಗಳು ದರ್ಶನವಾಗುತ್ತದೆ. ಬರೆದಾಗ ನಮಗೆ ತಿಳಿಯದಂತೆ ಧ್ಯಾನದ ಆಳವಾದ ಪರಿಣಾಮ ಉಂಟಾಗಿ, ನಾವು ಖುಷಿಯಿಂದ ಶಾಂತರಾಗಿ ಬಿಡುತ್ತೇವೆ. ಮನಸ್ಸಿನ ಕಣ್ಣುಗಳಿಗೆ ತಂಬೆಳಕು ಹರಡುತ್ತದೆ. ನಾನಂತೂ ಬರೆದಾಗ ತಣ್ಣನೆಯ ನೀರಿನ ಕೊಳದಲ್ಲಿ ಮಿಂದ ಅನುಭವ ಹೊಂದುತ್ತೇನೆ. ಅದಕ್ಕೆ ಚಿಕ್ಕಿ ವಾರಕ್ಕೆ ಒಂದೋ, ತಿಂಗಳಿಗೆ ಎರಡೋ ಪತ್ರ ಬರೆಯುತ್ತಾಳೆ. ನೀನು ಪೆದ್ದು, ನಾನು ಎಷ್ಟೊಂದು ಪತ್ರಗಳನ್ನು ಬರೆದರೂ ಉತ್ತರಿಸುವುದೇ ಇಲ್ಲ. ಬಹುಶಃ ನಿನಗೆ ಮೀಯುವ ಆಟ ಸೇರುವದಿಲ್ಲ ಅಂತ ಕಾಣುತ್ತದೆ. ಒಮ್ಮೆ ನಸುಕಿನಲ್ಲಿ ನೀನು ಚಹಾದ ಕಪ್ಪು ಹಿಡಿದು ಕುಡಿಯುವ ಮೊದಲು ನನ್ನ ಕಾಗದ ಓದು. ಮತ್ತೆ ಬರೀ ತಿಳಿವಳಿಕೆ ಓದುವುದರಿಂದ ಬರುವದಿಲ್ಲ. ಬರೆಯುವದರಿಂದ ಬರುತ್ತದೆ. ಪಾಟೀ ಮೇಲೆ ಬರದ ಮಗ್ಗಿ ಕೈಗಳು, ಶ್ರಮದ ಕೆಲಸಮಾಡಲು ಹುರಿಗೊಳ್ಳುತ್ತವೆ. ಬರೆಯುವ ಕೆಲಸ ಎಲ್ಲರಿಗೂ ದಕ್ಕವದಿಲ್ಲ. ಅದರ ದಾರಿ ರೂಢಿಸಿಕೊಳ್ಳಬೇಕಲ್ಲ. ಶಾಲೆಯಲ್ಲಿ ಈಗಿನ ಮಕ್ಕಳು ಬರೆಯಲು Bore ಅಂತ ನಾನು ಕೇಳಿದಾಗ ಪೆದ್ದು ಪೆದ್ದಾಗಿ ಪಿಳಿಪಿಳಿ ನೋಡುತ್ತೇನೆ. ನೀನು ಹಾಗೆ ಬರೆಯದೇ ಪಾಸಾದೆ ಏನೊ ಗೆಳೆಯಾ? ಬರೀ ಕಂಪ್ಯೂಟರ್ ಬಟನ್ಸ್ ಕುಟ್ಟುತ್ತಿಯಲ್ಲ.

ಎದುರಿನ ಮನೆಯ ಮೇಲೆ ಕಾಣುವ ನೀಲಿ ಆಕಾಶವನ್ನು ನಾನು ಘಾಡ ಮೌನತುಂಬಿನೋಡುತ್ತೇನೆ. ಬರೆಯುವ ಸುಖದ ನದಿ. ಎದೆಯಲ್ಲಿ ತುಂಬಿ ಹರಿಯುತ್ತದೆ. ಮುಗಿಲದಾರಿ ಬಹುದೂರ. ಒಟ್ಟಿಗೆ ನಡೆಯೋಣ ಬಾ ಗೆಳೆಯ, ಹಚ್ಚಿಕೊಂಡ ಜೀವಕ್ಕೆ ಕೆಲವು ಹಾಯಿಗಳನ್ನು ಕೊಡಬೇಕು. ಹೂ ಬಿಸಿಲು, ನೀಲ ಅಂಬರ ಮಳೆಬಿಲ್ಲು ನೆಕ್ಕಿದಷ್ಟೂ ಕೈ ಬೆರಳ ರುಚಿ ಹೆಚ್ಚಿ ಅನೂಹ್ಯ ಬರಹಲೋಕಕ್ಕೆ ನೆಗೆಯುವ ತುಡಿತ, ಅದಮ್ಯ ಮಿಡಿತ, ಅದು ಸಹಿತ ಸಾಹಿತ್ಯ ಬಾಯಿಕಳೆದು ಕೊಂಡವರಿಗೆಲ್ಲಾ ದೊಡ್ಡ ಆಸ್ತ್ರ, ಬರದರೆ ನೀಲಿ ಎದೆಯೊಳಗೆ ಇಳಿದು ಕಡಲಾಗುತ್ತದೆ. ಅಲ್ಲಿ ಮನಸ್ಸಿನ ಅಲೆಗಳು ದಡಕ್ಕೆ ಅಪ್ಪಳಿಸುತ್ತವೆ. ಬಾಂಬೆಯಲ್ಲಿ ಮಳೆ ಮತ್ತೆ ನಿನ್ನೆ ಆದ ಬಾಂಬ್ ಬ್ಲಾಸ್ಟ್ ಯಾಕೋ ಅಕ್ಷರಗಳನ್ನೇ ನುಂಗಿ ಬಿಟ್ಟವು. ಒಮ್ಮೊಮ್ಮೆ ಬರಹಗಳು ವರ್ತಮಾನಕ್ಕೆ ಭೀಕರ ಸ್ವರೂಪದ ಚಂಡಮಾರುತವನ್ನು ಎಬ್ಬಿಸಿ ಬಿಡುತ್ತವೆ. ರಸ್ದಿ ತಸ್ಲಿಮಾ ಎದೆಯಗೂಡಿನೊಳಗೆ ತಡಕಾಡಿದರು. ವಿವೇಚನೆಯ ಬುಡಕ್ಕೇ ಬರೆ, ಎಲ್ಲಾ ಬಾಂಬು ಸುರಿದಾಗ ನಾವು ಸುಮ್ಮನೆ ಅದನ್ನು ಟಿ. ವಿ. ಯಲ್ಲಿ ನೋಡುತ್ತೇವೆ. ಗುಂಪಿನ ಮುಂಚೂಣಿಯಲ್ಲಿ ರಣಕೇಕೆ ಹಾಕುವವರನ್ನು ನೋಡಿ ಗುಬ್ಬಚ್ಚಿ ಹೆದರಿದಂತೆ ಒಂಟಿಯಾಗಿ ತತ್ತರಿಸುತ್ತೇವೆ. ಜೋಪಡಿಯಲ್ಲಿ ಸತ್ತ ಅಪ್ಪನಿಗೆ ಶವಸಂಸ್ಕಾರಕ್ಕೆ ಹಣವಿಲ್ಲವಂತೆ. ಹೇಗೆ ಕಳಚಿಕೊಳ್ಳಲಿ ಗೆಳೆಯಾ ಈ ಕ್ರೌರ್ಯದ ಎಲ್ಲಾ ಬೇರುಗಳ? ಎಲ್ಲವೂ ಚಲಿಸುತ್ತದೆ ಕಾಲ ಸರಿದಂತೆ ಮೊದಲಿನಂತಲ್ಲ ನೀನು.

ಆದರೂ ಹೊರಗೆ ಹನಿಮಳೆಸುರಿದ ಗಂಧ ಲೇಟದಗಾಳಿ, ಗಟ್ಟಿ ಮಾತು ಕೇಳದ ಮೌನ….. ನಿನ್ನ ಒಂದು ಚಂದದ ಅಪ್ಪಟ ನಗು ಇರದೇ ಹೋಗಿದ್ದರೆ ಈ ಜಗತ್ತು ಎಷ್ಟೊಂದು ಖಾಲಿ ಅನಿಸುತ್ತಿತ್ತು.

ನಿನ್ನ,
ಕಸ್ತೂರಿ
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)