ಒಣ ನದಿಯ ದಂಡೆಯಲಿ ನಡೆದಿರ ನೀವು
ಹೀಗೆಷ್ಟು ಸಾವಿರ ವರುಷ?
ಹಗಲಿಗೆ ದಹಿಸುವ ಸೂರ್ಯನ ಕಾವು
ತಿಂಗಳ ಬೆಳಕಿಗೆ ಆಗಿ ಅನಿಮಿಷ

ಸಿಕ್ಕಿದರು ಸಿಗದಂಥ ಪರ್ವತ ಶಿಖರ
ಹತ್ತಿ ನಿಂತಾದ ಅದೆಷ್ಟು ಹೊತ್ತು?
ನೋಡಬೇಕೆಂದುದನು ನೋಡಿದಿರ
ನೆನಪಿದೆಯೆ ಏನದರ ಸುತ್ತುಮುತ್ತು ?

ಯಾವೂರು ಯಾವ ಹೆಸರಿಲ್ಲದ ಕೋಟೆ
ಕಿಟಕಿ ಬಾಗಿಲುಗಳಿಲ್ಲದ ಒಗಟು
ನಿಂತಲ್ಲೆ ಬೆಳೆಯುವುದು ಎಷ್ಟೆತ್ತರ ಕೋಟೆ
ಎಲ್ಲಿ ಸೇರಿದಿರಿ ನೀವೆಲ್ಲಿ ಹೊರಟು?

ದಣಿದು ಮಲಗಿರಲು ಬರಿ ಮಣಲ ಮೇಲೆ
ಹರಿದು ನಿಮ್ಮೆಡೆಗೆ ಬಂದ ಸಂಗೀತ
ಯಾರು ಹಾಡಿದುದು ಯಾವ ನಾಡಿನ ಬಾಲೆ
ಸ್ವಂತದೊಳಗಿಂದಲೆ ಮೂಡಿತ್ತೆ ಸ್ವಗತ?

ಯಾರೂ ಗೊತ್ತಿರದ ಪಟ್ಟಣದೊಳಗೆ
ಹೆಸರೆತ್ತಿ ಕೂಗಿದುದು ಯಾರೊ ?
ಎಲ್ಲಿಂದ ಬಂದ ನಗು ಎಲ್ಲಿಯ ಹುಸಿನಗೆ
ಬೆನ್ನುಹತ್ತಿದುದಾವ ನಿಟ್ಟುಸಿರೊ?

ಬಂದವರಿದ್ದರೆ ನಿಮ್ಮ ಬೀಳ್ಕೊಡಲು
ಬೀದಿಯ ಕೊನೆಯ ತಿರುವಿನ ತನಕ?
ಮುಂದೆ ಎದ್ದುದು ಯಾವ ಬೆಟ್ಟ ಬಯಲು
ಕಳೆದುಕೊಂಡುದು ಯಾವ ಲೋಕ?
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)