ಹೀಗೆ ನೀನು ನನ್ನ ಬಿಟ್ಟು ಹೋಗಬೇಡ.
ಹೋಗಲ್ಲ ಅನ್ನು, Please, ಹೋಗೋದಿಲ್ಲ ಅನ್ನು.
ನಿನ್ನ ಮೃದುವಾದ ರೆಕ್ಕೆಗೆ ಬಿಸಿಲು ತಗುಲದ ಹಾಗೆ,
ನಿನ್ನ ಕಣ್ಣಿಗೆ ಗಾಳಿಯಿಂದ ಧೂಳು ಬೀಳದ ಹಾಗೆ,
ನಿನಗೆ ರಾತ್ರಿ ಹೊತ್ತು ಚಳಿ ಆಗದ ಹಾಗೆ,
ಯಾವುದೂ ಭಯ ಆಗದ ಹಾಗೆ
ನಾನು ನಿನ್ನ ಸುತ್ತಲೂ ಕೋಟೆಯಾಗಿ ನಿಂತು
ನಿನ್ನನ್ನು ಕಾಪಾಡಿಕೊಂಡಿದ್ದೇನೆ.

ನೀನು ಹೋದರೆ ನಿನ್ನನ್ನು ಬೇಟೆ ಆಡಿ
ಬೇಯಿಸಿ ತಿಂದು ಬಿಡುತ್ತಾರೆ. ಪ್ರಪಂಚ ಕೆಟ್ಟದ್ದು,
ನಾನು ನಿನಗೆ ಸಿಗುವ ಮುಂಚೆ ನೀನು ಹೇಗಿದ್ದೆ,
ಜ್ಞಾಪಿಸಿಕೋ. ನಿನಗೆ ಇನ್ನೇನು ಬೇಕು ಹೇಳು-
ನಾನು ನಿನ್ನದೇ ಕನಸು ಕಾಣುತ್ತೇನೆ
ನಿನ್ನನ್ನು ಉಸಿರಾಡುತ್ತೇನೆ
ನಿನ್ನನ್ನು ಪ್ರೀತಿಸುತ್ತೇನೆ
ನೀನು ಇಲ್ಲೇ ಇರಬೇಕು.

ನಿನಗೋಸ್ಕರ ನಾನು ನನ್ನನ್ನೂ ಲೆಕ್ಕಿಸದೆ, ನನ್ನನ್ನೂ
ಲೆಕ್ಕಿಸದ ಹಾಗೆ ತ್ಯಾಗ ಮಾಡಿದ್ದೇನೆ, ತ್ಯಾಗ-ಗೊತ್ತಾ ?
ನಿನ್ನ ಕಾಡಿನ ಬೋಳುಮರಕ್ಕಿಂತ ಈ ಅರಮನೆ ದೊಡ್ಡದಲ್ಲವಾ ?
ನೀನು-ಹೋಗಲ್ಲ ನಿಮ್ಮನ್ನು ಬಿಟ್ಟು ಹೋಗೋದೇ ಇಲ್ಲ
ಅಂತಲೇ ಅನ್ನಬೇಕು ತಿಳಿಯಿತಾ ?

ಅದು ನನ್ನ ಹತ್ತಿರವೇ ಇರಲಿ ಅಂತ ನಾನು
ತೆಳ್ಳನೆದಾರ,
ತೆಳ್ಳನೆ ಕೆಂಪು ಸಿಲ್ಕಿನ ದಾರದಲ್ಲಿ
ಅದರ ಕಾಲು ಕಟ್ಟಬಾರದಾಗಿತ್ತಾ ?
ನಾನು ಹಗಲೂ ಸಂಜೆ ನನ್ನ ಕೈಯಿಂದಲೇ ಕೊಟ್ಟ ಕಾಳು
ಅದಕ್ಕೆ ಬೇಡ ಅನ್ನಿಸಿತಾ ; ಈ ಅರಮನೆಗಿಂತ
ಇನ್ನು, ಯಾವ ಸುಖಬೇಕಾಗಿತ್ತು ಅದಕ್ಕೆ ? ಆ ಪಾರಿವಾಳ
ದಿನಾ ದಿನಾ ಜಾಸ್ತಿ ಅಳುತ್ತಿದ್ದದ್ದು ಯಾಕೆ?
ಅದು ಸತ್ತು ಹೋಗಿದ್ದು ಯಾಕೆ ಅಂತ ಯಾರಿಗಾದರೂ ಗೊತ್ತಾ? ಗೊತ್ತಾ?

ಅದು ನನ್ನ ಬಿಟ್ಟು ಹೋಗುತ್ತಲ್ಲಾ ಅಂತ
ಸಹಿಸುವುದಕ್ಕೆ ಆಗದೆ, ಪ್ರೀತಿಯಿಂದ,
ತುಂಬಾ ಪ್ರೀತಿಯಿಂದ ನಾನೇ ಕೊಂದು ಹಾಕಿದೆ.
*****

Latest posts by ನಾಗಭೂಷಣಸ್ವಾಮಿ ಓ ಎಲ್ (see all)