ಯಾವುದಿಲ್ಲ ಯಾವುದುಂಟು
ಎಲ್ಲ ನಂಟೂ ನನ್ನೊಳುಂಟು

ಇಂಗ್ಲೇಂಡಿನ ಹಳಿಯಲ್ಲಿ
ನಾ ಬಯಸುವ ಹೆಂಡವುಂಟು
ಸ್ಪೇನ್ ದೇಶದ ಪೇಟೆಯಲ್ಲಿ
ನಾ ಮೆಚ್ಚುವ ಹುಡುಗಿಯುಂಟು

ಯಾರದೋ ಚೆಂದುಟಿಗಳಲ್ಲಿ
ನಾ ಹಾಡುವ ಪದ್ಯವುಂಟು
ಅರಬೀ ಸಮುದ್ರದಲ್ಲಿ
ನಾನೇರುವ ನೌಕೆಯುಂಟು

ವೈಶಾಖದ ಬಾನಿನಲ್ಲಿ
ನಾ ಕಾಯುವ ತಾರೆಯುಂಟು
ದಟ್ಟವಾದ ಕತ್ತಲಲ್ಲಿ
ನಾ ಹುಟ್ಟಿದ ಗ್ರಾಮವುಂಟು

ಯಾವುದಿಲ್ಲ ಯಾವುದುಂಟು
ಎಲ್ಲ ನಂಟೂ ನನ್ನೊಳುಂಟು
*****