ಮೊಟ್ಟೆಯಾಗಿ ಮೊದಲಿನವಸ್ಥೆ
ಆಗ ಪ್ರೇಮಗೀತೆಗಳಲ್ಲಿ
ವೀರ ಗಾಥೆಗಳಲ್ಲಿ
ಅವನ ಆಸ್ಥೆ

ಒಡೆದು ಆಗುವನು ಹುಳ
ಭಾರಿ ಕಳವಳಗೊಂಡು
ತನ್ನದಾಗಿಸಿಕೊಂಡು
ಜಗದ ದುಃಖಗಳ

ಕ್ರಮೇಣ ಸುತ್ತ ಕೋಶ-
ಬೆಳೆದು ಅಂತರ್ಮುಖಿ
ಸ್ವಾಂತ ಸುಖಿ
ನಿದ್ರಾವಸ್ಥೆಗೆ ವಶ

ನಾಲ್ಕನೆಯದೇ ಪತಂಗ
ಬಲಿತು ಪಕ್ಕೆ
ಬಣ್ಣ ಬಣ್ಣದ ರೆಕ್ಕೆ
ಹಾರುವುದಕ್ಕೆ ಮಿತಿಯಿರದ ರಂಗ

ಇನ್ನು ಕೆಲವರ ಬದುಕು
ಧಾವಿಸಿ ಬೆಳಕಿನತ್ತ
ಭಗ್ಗನುರಿಯುತ್ತ
ಕಾವ್ಯವಾಗುವುದು ನಿಜಕು
*****