ಹೂವು ಮುಳ್ಳಿನ ಬಗ್ಗೆ
ಮುಳ್ಳು ಹೂವಿನ ಬಗ್ಗೆ
ಏನು ಹೇಳುತ್ತಿದೆಯೋ
ಅರ್‍ಥವಾಗುತ್ತಿಲ್ಲ.

ಹಗಲು ರಾತ್ರಿಯ ಬಗ್ಗೆ
ರಾತ್ರಿ ಹಗಲಿನ ಬಗ್ಗೆ
ಏನು ಹೇಳುತ್ತಿದೆಯೊ
ಅರ್‍ಥವಾಗುತ್ತಿಲ್ಲ.

ನಗು ಅಳುವಿನ ಬಗ್ಗೆ
ಅಳು ನಗುವಿನ ಬಗ್ಗೆ
ಏನು ಹೇಳುತ್ತಿದೆಯೊ
ಅರ್‍ಥವಾಗುತ್ತಿಲ್ಲ.

ಬುತ್ತಿ ಬೆಂಕಿಯ ಬಗ್ಗೆ
ಬೆಂಕಿ ಬುತ್ತಿಯ ಬಗ್ಗೆ
ಏನು ಹೇಳುತ್ತಿದೆಯೊ
ಅರ್‍ಥವಾಗುತ್ತಿಲ್ಲ.

ಉದಾಹರಣೆಗೆ
ಸಾಗರ ಸಂಸಾರ
ಬಯಲು ಬೆಳದಿಂಗಳು.

ಇಡಿಯಾಗಿ ಬೆಳದಿಂಗಳನ್ನು
ತುಂಬಿಕೊಂಡ ಕಣ್ಣಿಗೆ
ಹರ್‍ಷ ಉಲ್ಲಾಸ
ನಿರಂತರ ಮೊರೆತ ಆಲಿಸುತ್ತಿರುವ
ಕಿವಿಗಾದರೋ ಆತಂಕ ದುಃಖ.

ಕಣ್ಣಿಗೆ ಕಿವಿಯ ಭಾಷೆ
ಕಿವಿಗೆ ಕಣ್ಣಿನ ಆಶೆ
ಎಂತು ತಿಳಿಯುವುದೋ….
ಮೊರೆತ, ಬೆಳದಿಂಗಳು
ಅದೆಂತು ಸೇರುವುದೊ….
ಅರ್‍ಥವಾಗುತ್ತಿಲ್ಲ.
*****

Latest posts by ಸವಿತಾ ನಾಗಭೂಷಣ (see all)