ಹರಿದ ಸಂಜೆಯ ಗುಂಗು
ಪರಿಮಳಕ್ಕೆ ಅರಳಿದ ಹೂ
ಸುಳಿಸುಳಿದ ಬಯಲ ಬೆಟ್ಟಗಾಳಿ
ನಾನಿನ್ನ ನೋಟದೊಳಗೆ ಇಳಿದು
ನೀಲ ಬಾನಲಿ ಕಾಮನಬಿಲ್ಲು.

ಅತ್ತ ಕಂದನ ಮೃದು ಕೆನ್ನೆಯಲಿ
ಇಳಿದ ಹನಿಬಿಂದು ಎದೆಯ ಹಾಲು
ನಿನ್ನುಸಿರು ತಾಗಿದ ನವಜೀವ
ನಗುತ ಪ್ರೇಮದೌತಣ ಉಂಡು
ಘನವಾಗಿ ಇಳಿದ ರಮ್ಯ ಚೇತನ.

ಚಿತ್ರ ವಿಚಿತ್ರ ಲೋಕ ಸಂಸಾರದಲಿ
ತೇಲಿದ ಗಾಳಿಪಟ ಹರಿದ ನದಿ
ದಟ್ಟಕಾಡು ದಾಟಿ ಬಯಲು ಹಸಿರು
ತಂಗಾಳಿಯ ಒರೆತ ಅಂಗಳದ
ರಂಗೋಲಿ ಚಿಕ್ಕಿ ನಕ್ಷತ್ರಗಳ ಸಂಧ್ಯೆ.

ಎಲ್ಲಾ ಪುಟಗಳಲಿ ನಾನು ನೀನು
ಬರದ ಮಹಾ ಖಂಡ ಕಾವ್ಯ
ಇಲ್ಲ ಹೌದು ಎಂಬ ಅಹಂಕಾರ
ಭಾಷೆ ಒದ್ದೆಯ ಕಣ್ಣಿವೆಗಳು
ಎದೆಯ ತುಂಬ ಮೀಟಿದ ನಾಲ್ಕು ತಂತಿ.

ಬೆಳದಿಂಗಳ ಕೆನೆಮೊಸರ ಅನ್ನ
ಪ್ರತಿ ರಾತ್ರಿ ನೆರಳು ಕರಳು ಆಟ
ಅದು ಕಳ್ಳುಬಳ್ಳಿ ದುಮ್ಮಾನ ಓಟ
ಉಳಿಯುವ ನೋಟದಲಿ ನನ್ನನಿನ್ನ
ಗರಿಕೆ ಬೇರು ಬೆಸೆದ ಸಂಬಂದ ಅನುಬಂಧ.
*****