ಪ್ರೇಮ ಹೀಗೊಂದು ವ್ಯಾಖ್ಯಾನ

ಪ್ರೇಮ ಹೀಗೊಂದು ವ್ಯಾಖ್ಯಾನ

ಕಾಂಪೌಂಡ್ ನಲ್ಲಿರುವ ಗಿಡದಲ್ಲಿನ ಮೊಗ್ಗು ಹೂವಾಗಿ ಅರಳೋದನ್ನು ನೋಡಿದ್ದೀರಾ. ಕತ್ತಲು ಕರಗಿ ಬೆಳಗಾಗುವ ಪರಿಯನ್ನು ಕಂಡಿದ್ದೀರಾ, ಮನೆಯ ಮುಂದಿನ ಬೋಳಾದ ಮರ ಚೈತ್ರದಲ್ಲಿ ನೋಡುನೋಡುತ್ತಲೆ ಚಿಗುರೋಡೆದು ಹಸಿರುಡುವುದನ್ನು ವೀಕ್ಷಿಸಿದ್ದೀರಾ ಇವೆಲಾ ಕಾದು ಕುಳಿತರೆ ಕಾಣುವಂತದ್ದಲ್ಲ, ಕಾಣದಿದ್ದರೂ ಸೃಷ್ಟಿಕ್ರಿಯೆ ನಿಲುವಂತದಲ್ಲ, ಕಾಲ ನಮಗಾಗಿ ಎಂದೂ ಕಾಯುವಂತದ್ದೇ ಅಲ್ಲ. ಇವೆಲ್ಲಾ ಒಂತರಾ ವಿಸ್ಮಯ ಅನಿಸುತ್ತಲ್ಲವೆ. ಹಾಗೆ ಯಾವಾಗಲೋ, ಯಾರ ಹೃದಯದಲ್ಲೋ, ಅದಾವ ಅಮೃತಗಳಿಗೆಯಲ್ಲೋ ಪ್ರೇಮದ ಟಿಸಿಲೊಡೆದು ಸಾಮಾನ್ಯನೊಬ್ಬ / ಸಾಮನ್ಯಳೊಬ್ಬಳು ‘ಪ್ರೇಮಿ’ಯಾಗಿ ಬಿಡುವುದು ಕೂಡ ಇಂಥದ್ದೇ ವಿಸ್ಮಯ. ನಿನ್ನೆವರೆಗಿನ ಅಪರಿಚಿತರು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಅನ್ಯಜಾತಿ ವಿಭಿನ್ನ ರುಚಿ, ಅಂತಸ್ತುಗಳ ಅಂತರ, ಹಲವು ವಿರೋಧಗಳನ್ನೂ ಲೆಕ್ಕಿಸದೆ ಪ್ರೇಮಿಗಳಾಗಿ ಬಿಡುವುದು, ಸಂಭ್ರಮಿಸುವುದು, ಸಂಕಟಪಡುವುದು ಎಂಥಾ ಸಾಹಸಕ್ಕೂ ಅಣಿಯಾಗುವುದು, ಹೆತ್ತವರನ್ನು ಒಡಹುಟ್ಟಿದವರನ್ನು ಕಳೆದುಕೊಂಡರೂ “ಸೈ” ಪ್ರೇಮವನ್ನು ಪಡೆಯಲು ಹಾತೊರೆಯುವುದು ಸಾಮಾಜಿಕ ಸವಾಲನ್ನು ಸ್ವೀಕರಿಸುವುದು. ಸರಸ – ವಿರಸ ವಿರಹಗಳಾಚೆಗೆ ದಾಟಿ ಪ್ರಾಣ ಕೊಡಲೂ ಸಿದ್ದರಾಗಿಬಿಡುವುದು ಎಂತಹ ವಿಸ್ಮಯ!

ಹರೆಯದ ವಯಸ್ಸಿನ ಉನ್ಮಾದವಿದು ಅಂತಾರೆ ಬದುಕನ್ನು ಅರಿತವರು. ಪ್ರೇಮವಿಲ್ಲದ ಬದುಕು ನಶ್ವರ ಅಂತಾರೆ ಅನುಭವಿಗಳು, ಪ್ರೇಮದ ಅನುಭವವಿಲ್ಲದವರೂ ಈ ಮಾತು ಒಪ್ಪತ್ತಾರೆ. ಭಾಮೆಗಾಗಿ ಕೃಷ್ಣನ ಪರದಾಟ, ಉಮೆಗಾಗಿ ಕೈಲಾಸ ತೊರೆದು ಭೂಮಿಗಿಳಿದ ಭುವನೇಶ್ವರ, ಕೃಷ್ಣನಿಗಾಗಿ ಹತೊರೆದ ರಾಧೆ, ಇವರೆಲ್ಲಾ ಪುರಾಣವನ್ನು ಶೃಂಗರಿಸಿದ್ದಾರೆ. ಕೃಷ್ಣ – ರುಕ್ಕಿಣಿಯನ್ನು ಅಪಹರಿಸಿದರೂ ಅಪರಾಧವಾಗಲಿಲ್ಲ, ಅರ್ಜುನ ಸುಭದ್ರೆಯನ್ನು ಹಾರಿಸಿ ಕೊಂಡೊಯ್ದರೂ ಅಪಹರಣವೆನ್ನಿಸದೆ ಶೌರ್ಯದ ಪ್ರತೀಕವೇ ಆಯಿತು. ಸ್ಮಶಾನವಾಸಿ ಭಿಕ್ಷೆ ಬೇಡುವ ಕಪಾಲಿಯನ್ನೇ ಕೈಹಿಡಿಯಲು ಐಸಿರಿಭೋಗಗಳನ್ನೇ ಕಾಲಲ್ಲಿ ಒದ್ದ ಗಿರಿಜೆಯ ಗುಣವೂ ಪ್ರಶಂಸಾರ್ಹ ಕಾವ್ಯವಾಯಿತು.

ಲೈಲಾ-ಮಜ್ನು , ಸಲೀಂ-ಅನಾರ್ಕಲಿ, ರೋಮಿಯೋ-ಜೂಲಿಯೆಟ್, ಪೃಥ್ವಿರಾಜ್-ಸಂಯುಕ್ತ, ದುಷ್ಯಂತ-ಶಕುಂತಲೆ ಪ್ರೇಮಕಾವ್ಯವೇ ಆಗಿಹೋದವು. ಪ್ರೇಮ ಶುದ್ಧ ಕುರುಡು ಅಂತಾರೆ, ನಿಜ. ಮಹಾರಾಣಿ ಭಿಕ್ಷುಕನನ್ನು ಪ್ರೇಮಿಸುವುದೆಂದರೇನು ? ಸುರಸುಂದರಿ ಅಷ್ಟಾವಕ್ರನ ಹಿಂದೆ ಸಕಲ ರಾಜ್ಯ ವೈಭೋಗವನ್ನೂ ತ್ಯಜಿಸಿ ಓಡುವುದೆಂದರೇನು! ಅದಕ್ಕೆ ಪ್ರೇಮವೇ ದೇವರು ಅಂತಲೂ ಅಂದಿದ್ದಿರಬಹುದಲ್ಲವೆ. ಒಟ್ಟಿನಲ್ಲಿ ಇದು ಸಹ ದೇಶದಲ್ಲಿನ ಭಯಂಕರ ಸಮಸ್ಯೆಗಳಲ್ಲೊಂದು ಅನ್ನೊದು ಕೂಡ ಸುಳ್ಳಲ್ಲ. ಈ ಸಮಸ್ಯೆ ಪಕ್ಕದಮನೆಯವರದ್ದಾದರೆ ಕುತೂಹಲ, ನಮ್ಮ ಮನೆಗೇ ಕಾಲಿಟ್ಟರೆ ತೀರದ ಕಂಟಕ. ಇಲ್ಲೇ ಇರೋದು ಜೀವನದ ಮಜ, ಪ್ರೇಮ ‘ಬೆಂಕಿ’ ಇದ್ದಹಾಗೆ ಹರೆಯದ ಸಂತೋಷವನ್ನೇ ಸುಟ್ಟು ಸುಡುಗಾಡಿಗೆ ಅಟ್ಟಿಬಿಡುತ್ತದೆ ಎಂದು ಮೂಗು ಮುರಿಯುತ್ತಾರೆ ಹಿರಿಯರು. ಬೆಂಕಿಯೇನೋ ನಿಜ. ಅದರಿಂದ ರುಚಿಯಾದ ತಿನಿಸು ಬೇಯಿಸಿ ತಿನ್ನಬಹುದು, ಬೆಚ್ಚಗೆ ಮೈಕಾಯಿಸಿಕೊಳ್ಳಬಹುದು. ಮನೆ ಬೆಳಗಿಸಿಕೊಳ್ಳಲೂ ಬಹುದಲ್ಲವೆ? ಹರೆಯದ ಜನಾಂಗ ಪ್ರೇಮದ ಬಲೆಗೆ ಬಿದ್ದು ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡುವಲ್ಲಿ ವಿಫಲರಾಗುತ್ತಾರೆ. ಪ್ರೇಮಿಗಳಾರೂ ದೇಶದ ಉನ್ನತ ಹುದ್ದೆಗಳಲ್ಲಿಲ್ಲ. ಗುಮಾಸ್ತರೋ, ಮೇಷ್ಟ್ರುಗಳೋ ಆಗಿಬಿಡ್ತಾರಷ್ಟೆ ಎಂಬ ಹೀಯಾಳಿಕೆಯೂ ಉಂಟು. ಆದರೇನು ಸುಖವಾಗಿರಲು ದೊಡ್ಡ ಹುದ್ದೆಗಳೇ ಆಗಬೇಕಿಲ್ಲ. ದೊಡ್ಡ ಹುದ್ದೆಗಳಲ್ಲಿರುವವರು ದೊಡ್ಡ ಮೊತ್ತದ ವರದಕ್ಷಿಣೆ ಗಿಟ್ಟಿಸಿ ಹೆಂಡತಿ ಗುಲಾಮರಾಗಿಯೋ, ಕುರೂಪಿಗಳ ಗಂಡರಾಗಿಯೋ ನಿಡುಸುಯ್ಯುವ ನತದೃಷ್ಟರೇ ಹೆಚ್ಚು ಅಂತಾರೆ ಪ್ರೇಮಿಗಳು. ಪ್ರೇಮದಲ್ಲಿ ಗೆದ್ದವನು ಜೀವನದಲ್ಲಿ ಸೋಲುತ್ತಾನೆ ಅಂತಾರೆ ಸ್ಥಿತಿವಂತರು. ಪ್ರೇಮವೇ ಜೀವನ ಅಂತಾರೆ ಹೃದಯವಂತರು. ಪ್ರೇಮದಲ್ಲಿ ದುರಂತವೇ ಅಧಿಕ. ಲೈಲಾ – ಮುಜು , ಸಲೀಂ-ಅನಾರ್ಕಲಿ, ರೋಮಿಯೋ-ಜೂಲಿಯೆಟ್, ಸೋಣಿ – ಮಹಿಪಾಲ್ ಎಲ್ಲಾ ಸಫಲರಾಗಿದ್ದೆಲ್ಲಿ ? ಸಾವಿನಲ್ಲಿ ಅಂತ ಉಡಾಫೆ ಮಾಡುವವರೂ ಉಂಟು. ಸಾವನ್ನೇ ಗೆದ್ದವರಿವರು. ಕೋಟೆ ಕೊತ್ತಲುಗಳನಾಳಿದ ರಾಜ ಮಹಾರಾಜರ ಹೆಸರುಗಳು ಅದೆಷ್ಟು ಜನರ ನಾಲಿಗೆಯ ಮೇಲಿದೆ ? ಹೃದಯದಲ್ಲಿ ಅಜರಾಮರವಾಗಿ ಉಳಿದಿದೆ? ಈವತ್ತಿಗೂ ಮುಂದೂ ಪ್ರೇಮಿಗಳು ಅಮರರಾಗಿಯೇ ಉಳಿದಿದ್ದಾರೆ. ಯುಗಯುಗಳಲ್ಲೂ ಯುವಜನಾಂಗದ ಚೈತನ್ಯದ ಚಿಲುಮೆಗಳೆನಿಸಿದ್ದಾರೆ, ಆದರ್ಶವಾಗಿದ್ದಾರೆ. ಮುಳ್ಳುಗಳ ಮಧ್ಯೆಯೇ ಅರಳುವ ಸುಂದರ ಗುಲಾಬಿಯಂತೆ ವಿರೋಧಗಳ ನಡುವೆಯೇ ಪ್ರೇಮ ಇಂದಿಗೂ ಪಲ್ಲವಿಸುತ್ತದೆ. ಹಿಂದೂ ಅಷ್ಟೆ ಶತ್ರು ಪಾಳೆಯಗಳ ನಡುವೆಯೇ ಪ್ರೇಮ ಪಿಸುಕುತ್ತಿದ್ದು ಮಿನುಗುತ್ತಿದ್ದ ಉದಾಹರಣೆಗಳಿವೆ. ಅರ್ಜುನ-ಸುಭದ್ರೆಯಾಗಿರಬಹುದು, ಅಭಿಮನ್ಯು – ಶಶಿರೇಖೆಯಾಗಿರಬಹುದು. ಅಷ್ಟೇಕೆ ಕೃಷ್ಣ – ರುಕ್ಮಿಣಿ, ದಾಕ್ಷಾಯಣಿ – ದಯಾಶಂಕರ, ಕಚ – ದೇವಯಾನಿ ಹೀಗೆ ಪಟ್ಟಿ ಬೆಳೆಸಬಹುದಲ್ಲವೆ. ಸೇಡು, ಮತ್ಸರ, ಹಗೆ, ಹಠ ಘೋರಕಾಳಗಗಳ ಮಧ್ಯೆಯೂ ಸಂಗಮಿಸುವ ಅಪೂರ್ವಶಕ್ತಿ ಇರೋದು ಪ್ರೇಮಕ್ಕೆ ಮಾತ್ರ ಅನ್ನೋದು ವೇದಾಂತವಾಗದ ಸಿದ್ದಾಂತ, ‘ಹೆಲನ್ ಆಫ್ ಟ್ರಾಯ’ ಕೂಡ ಜಗತ್ತಿನ ಮಹಾ ಕಾವ್ಯಗಳಲ್ಲೊಂದಾಗಿಬಿಟ್ಟಿದೆ. ಸಾಮ್ರಾಟನನ್ನು, ಸನ್ಯಾಸಿಯನ್ನೂ ಬಿಡದೆ ಕಾಡುವ ಪ್ರೇಮದಲ್ಲಿ ವಿಚಿತ್ರ ಆಕರ್ಷಣೆ ಇದ್ದೇ ಇದೆ. ಇಲ್ಲದಿದ್ದರೆ ಹೆಣ್ಣಿಗಾಗಿ ಕೂಡ ಘೋರ ಯುದ್ಧಗಳು ಕೊಲೆಗಳು ಆಗುತ್ತಿರಲಿಲ್ಲವಲ್ಲವೆ. ಮನೆತನಗಳೇ ಹಾಳಾಗಿವೆ. ಮನೆತನಗಳು ಉದ್ಧಾರವೂ ಆದದ್ದಿದೆ. ಅದಕ್ಕೆ ‘ಪ್ರೇಮ’ ಇಂದಿಗೂ ಎಂದಿಗೂ ಉಳಿಯುಂತಹ ಅಪರೂಪದ ವಸ್ತು. ಅದು ತನ್ನ ಇರುವನ್ನು
ಸ್ಪಷ್ಟಪಡಿಸಲು ಕೋಮಲವಾದ ಹೃದಯವನ್ನೇ ಆರಿಸಿಕೊಂಡಿದೆ – ಆವರಿಸಿಕೊಂಡಿವೆ. ಅದಕ್ಕೇ
ಏನೋ ಪ್ರೇಮ ಸುಕೋಮಲ, ಇಷ್ಟೆಲ್ಲಾ ಯಾರಿಗೂ ತಿಳಿಯದ ಹೊಸವಿಷಯಗಳೇನಲ್ಲದಿದ್ದರೂ ತಿಳಿದಿದ್ದರೂ ‘ಪ್ರೇಮಿಗಳನ್ನು ಹುಚ್ಚರು’ ಅಂತ ಒಂದೇ ಮಾತಿನಲ್ಲಿ ನೆರೆತ ತಲೆಯವರು ಅಲಕ್ಷಿಸಿ ಬಿಡುತ್ತಾರೆ. ಹೀಗೆ ಆಲಕ್ಷಿಸುವವರನ್ನೇ ಹುಚ್ಚರು ಅಂತ ಆಲಕ್ಷಿಸಿಬಿಡತ್ತಾರೆ ಪ್ರೇಮಿಗಳು.

‘ಪ್ರೇಮ’ ಅದೂ ಒಂದು ವಸ್ತುವೆ! ಪ್ರೇಮದ ಬಗ್ಗೆ ಕಥೆ, ಕಾದಂಬರಿ ಬರೆಯೋದೇ ಅಂತ ತಾತ್ಸಾರದ ಮಾತುಗಳನಾಡುವವರಿಗೆ ತಾಜಾ ಪ್ರೇಮದ ಅನುಭವವೇ ಆಗಿರುವುದಿಲ್ಲವೆಂಬುದು ಕೂಡ ಕನಿಕರದ ವಿಷಯವೆ. ಪ್ರೇಮದ ಬಗ್ಗೆ ಬರೆಯೋದು ಮಹಾ ಸಾಧನೆಯಲ್ಲದಿರಬಹುದಾದರೂ ಸುಲಭ ಸಾಧ್ಯವಂತೂ ಅಲ್ಲ. ಪ್ರೇಮದ ಬಗ್ಗೆ ಬರೆಯುವವನ ಹೃದಯದಲ್ಲಿ ಮಗುವಿನ ಮುಗ್ಧತೆ, ಬಾಲಕನ ಕುತೂಹಲ, ಹೆಣ್ಣಿನ ಅಂತಃಕರಣ, ಗುಲಾಬಿಯ ಕೋಮಲತೆ, ಜೇನಸಿಹಿ, ಪಾದರಸದ ತೀಕ್ಷಣತೆ, ಬಾಣದವೇಗ, ಹಂಸಧ್ವನಿಯ ರಾಗ ಇಂತಹ ಅಪರೂಪದ ನಿಧಿಗಳೆಲ್ಲಾ ತುಂಬಿ ತುಳುಕುತ್ತಿರಲೇಬೇಕು. ಖಾಲಿ ಹೃದಯದವನು ಏನು ಬರೆದಾನು ? ಕಥೆ ಕವನ ಕಾದಂಬರಿ ಹುಟ್ಟುಕೂಡ ಗರ್ಭಿಣಿಯು ಬಸಿರಿಳಿಸಿದಷ್ಟೇ ಪ್ರಯಾಸ – ಸುಹಾಸ, ತಾಯಿಯಾದ ಸಂತಸಕ್ಕೆ ಎಣೆಯುಂಟೆ. ‘ಧನದಿಂದಕ್ಕುಮೆ ಕೃತಿ ಗಾವಿಲ ಭುವನದಾ ಭಾಗ್ಯದಿಂದಂ ಅಕ್ಕುಂ’ ಎನ್ನುವ ಕವಿವಾಣಿ ಸುಳ್ಳಾಗಲು ಸಾಧ್ಯವೆ.

ಯಾರು ಒಪ್ಪಲಿ ಬಿಡಲಿ, ಪ್ರೇಮವೆನ್ನುವುದು ಇಲ್ಲದೆ ಹೋಗಿದ್ದಿದ್ದರೆ ಎಷ್ಟೋ ಜನ ಹೊರಗೆ ಹೋದ ಗಂಡಸರು ಮನೆಗೆ ಹಿಂದಿರುಗುತ್ತಿರಲಿಲ್ಲ, ಹೆಂಗಸರೂ ಕಾದು ಮನೆಯಲ್ಲೇ ಕುಳಿತಿರುತ್ತಿರಲಿಲ್ಲವೇನೋ. ಪ್ರೇಮದ ವಕಾಲತುವಹಿಸಿದ್ದು ಸಾಕೆನಿಸುತ್ತಿದೆ, ವಿರಮಿಸುತ್ತೇನೆ.


Previous post ದೀಪದ ಕುಡಿಗಳು ಎಲ್ಲೆಲ್ಲೂ
Next post ಬಂಜೆ

ಸಣ್ಣ ಕತೆ

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys