ಸದಾ ತನ್ನ ಆಕಾರ ಬದಲಿಸುತ್ತಾ
ನೋಟಕ್ಕೆ ದಕ್ಕಿ ಕೈಗೆ ನಿಲುಕದ
ಫಳ ಫಳ ಹರಿಯುವ ಹಾಸುಬೀಸು
ತೆಂಗು ಸಾಲುಸಾಲು ಹಕ್ಕಿ ರೆಕ್ಕೆ ಬಿಚ್ಚಿ
ತೇಲಿ ಬಂದು ಮೋಡವಿರದ ಶುಭ್ರನೀಲಿ
ನೆಲಮುಟ್ಟದೇ ಅಲೆಯುತ್ತಿದ್ದಾಳೆ ನೇತ್ರಾವತಿ.

ಗಾಳಿ ತೀಡಿ ಅಂತರಾಳದಿಂದ ನೆಲದಾಳಕೆ
ಗೊತ್ತು ಗುರಿಯಿಲ್ಲದ ದಾರಿಯಲಿ ನಿರಂತರ
ಚಲನೆಯಲಿ ತೊನೆದು ನಲಿದು ಹಾಯಿದೋಣಿ
ಹರಿಯುವ ರಭಸದ ಅಲೆಗಳ ಗುಂಟ
ತುಂಡಾದ ಸೂರ್ಯ ಜರಗುತ್ತ
ಮಂದ ವಿಸ್ಮಯಗಳ ಜಗದ ತಾಯಿ ನೇತ್ರಾವತಿ.

ಮಬ್ಬು ಮುಂಜಾನೆಯ ಬಲೆಯ ಬೀಸಿ
ಹಾಸಿ ಹಿಡಿಯುವ ಮೀನುಗಳ ರಾಶಿ
ತಿರುಗುವ ಕನವರಿಕೆ ಹಕ್ಕಿ ಮೋಡ
ಇಳಿಯುವ ಅನಂತ ನೇರ ಪೂರ್ವಪಶ್ಚಿಮ
ಅಚ್ಚರಿಯಾಗಿದ್ದಾರೆ ಕಂಡ ಅರಿವು ಹರಿವು ಹರಿದು
ಕುಣಿದು ಕುಪ್ಪಳಿಸಿ ಅಂಕು ಡೊಂಕಾಗಿ ಹರಿವ ನೇತ್ರಾವತಿ.

ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸುಳಿ ಸುಳಿವ ಸ್ಪಂದನ
ದಡದಗುಂಟ ಹರಡಿ ಹಬ್ಬಿದ ನಂದಿ ಬಟ್ಟಲು
ಬೆಳೆದು ನಿಂತ ತಾಳೆತೆಂಗಿನ ಮರಗಳಲಿ ಹಕ್ಕಿಗೂಡು
ಭಾರವಾದ ಜೊಂಪಿನಲಿ ತೂಕಡಿಸುತ್ತವೆ ಬಸಿರು
ಬೆಳೆದು ಬೆಳಕಿನ ಬೀಜ ತೇಲಿಸಿ ತೇಲಿಸಿ
ತನ್ನ ಪಾಡಿಗೆ ತಾನು ಹಾದಿಮೂಡಿಸುವಳು ನೇತ್ರಾವತಿ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)