ಹಾರುತ್ತಿದ್ದೇನೆ ನೀಲ ಆಕಾಶದ
ಮಂಡಲದ ತುಂಬ ನನಗೆ
ನಿಮ್ಮ ದ್ವಂದ್ವ ಧನಿಗಳು ಕೇಳಿಸುತ್ತಿಲ್ಲ
ಹಕ್ಕಿ ಹಾಡುಗಳು ಇಂಪಾಗಿ ಎದೆಗೆ ಅಮರಿದೆ.

ನಾನು ಹಾರುತ್ತಿದ್ದೇನೆ ನಿಧಾನವಾಗಿ
ತೆಳು ಮೋಡದ ಹಾಯಿಯಲ್ಲಿ ನನಗೆ
ನಿಮ್ಮ ಉರಿವ ನೋಟಗಳು ಕಾಣಿಸುತ್ತಿಲ್ಲ
ಹನಿ ಹನಿ ಮಳೆ ಎದೆಯ ಅಂಗಳ ತೋಯಿಸಿದೆ.

ನಾನು ಹಾರುತ್ತಿದ್ದೇನೆ ಮೆಲುವಾಗಿ
ನೀಲರಾಶಿಯ ನಭದಲಿ ನನಗೆ
ನಿಮ್ಮ ಕ್ರೂರ ಹಿಂಸೆಯ ಬದುಕು ತಪ್ಪಿಸಿಕೊಂಡಿದೆ
ಮಲ್ಲಿಗೆಯ ಕಂಪು ಶೃಂಗಾರ ಕಾವ್ಯ ಹಾಡಿದೆ.

ನಾನು ಹಾರುತ್ತಿದ್ದೇನೆ ಸರಳವಾಗಿ
ಬೆಚ್ಚನೆಯ ಕಿರಣಗಳ ಮಧ್ಯೆ ನನಗೆ
ನಿಮ್ಮ ಸುಡುವ ಹೊಗೆಯ ಗೂಡು ಬೇಕಾಗಿಲ್ಲ.
ಮೌನದಲಿ ಹಸಿರುತೋರಣ ಕಟ್ಟಿದ ಮಾಮರದ ಕೋಗಿಲೆ.

ನಾನು ಹಾರುತ್ತಿದ್ದೇನೆ ಏಕಾಂಗಿಯಾಗಿ
ಲೋಕದ ಎಲ್ಲ ಜಂಜಡಗಳ ದಾಟಿ ಮೆಲ್ಲಗೆ
ನಿಮ್ಮ ಗೌಜುಗದ್ದಲದ ವ್ಯಾಪಾರ ನನಗೆ ಬೇಕಿಲ್ಲ
ವಸಂತನ ಚೈತ್ರಬಟ್ಟೆ ಹಾರಾಡಿವೆ ಸಂಭ್ರಮದಲ್ಲಿ ಭಾನುಭುಮಿಯ
ತುಂಬಿ.
*****