ಮಲಗಿದಾಗಲೆಲ್ಲಾ ಅವೇ
ಕನಸುಗಳು ಮರುಕಳಿಸಿ
ಅಂಕು ಡೊಂಕು ಕತ್ತಲೆದಾರಿ
ಕಂದರದಲಿ ನನ್ನೊಗಿದು ಬಿಡುತ್ತದೆ
ಬೆಚ್ಚಿ ಬಿದ್ದು ಎದ್ದು ಕೂರುತ್ತೇನೆ.

ಮುಳುಗಿದನೋ ತೇಲಿದನೋ
ಈಜಿದನೋ ಕಿತ್ತು ಕಿತ್ತು
ಕಿಬ್ಬೊಟ್ಟೆಯ ನರಗಳೆಲ್ಲಾ
ಪರ್ವತದ ಗುಡ್ಡೆ ರಾಶಿ
ಕತ್ತಲ ಲೋಕದಲಿ ನಾನೀಗಿ ಬತ್ತಲೆ.

ಸರ್ವಸ್ವ ಎಲ್ಲವೂ ಎಲ್ಲೋ ಕಳೆದ
ಕಳವಳ ಭವಬಂಧನ
ದಾರಿ ತುಂಬ ಹಬ್ಬಿದ ಸೀಕುಜಾಲಿ
ಕೇಳಿ ಆಲಿಸಿದ ಶಬ್ದಗಳೆಲ್ಲಾ
ಕೆಸರಲ್ಲಿ ಸಿಲುಕಿ ನನ್ನೊಳಗೆ ಗದ್ದಲದ ಕಾಡು,

ಪದೇ ಪದೇ ಚಕ್ಕಂದವಾಡಿದ
ಜೋಕಾಲಿ ಜೇಕು ಎದೆ ಅಂಗಳದಲಿ
ಬಿರುಗಾಳಿ ಬೀಸಿ ಮುರಿದ ಮಲ್ಲಿಗೆ ಚಪ್ಪರ
ಹೂಹಸಿರಿಗಳಿಲ್ಲದ ಮರಭೂಮಿ
ಏನಹೇಳ ಬೇಕೆಂದರೂ ಶಬ್ದಗಳಗೆ ಸಿಗದ ಸಪ್ನಗಳು.
*****