ಜೋಗುಳದ ಹರ್ಷದಲಿ ಜಲಬಾಣ ಹೊಡೆದಂತೆ
ಓ ಕೇಳು ಓ ಹುಡುಗ ನಿನ್ನ ನಾಡು
ಚೈತನ್ಯ ಚಿಲುಮೆಗಳು ಚಿಜ್ಞಾನ ನವಿಲುಗಳು
ಥಾಥೈಯ್ಯ ಕುಣಿದಂತೆ ಶಕ್ತಿ ಬೀಡು

ಸತ್ತವರು ಸತ್ತಿಲ್ಲ ಸುಜ್ಞಾನ ಬಿತ್ತಿಹರು
ಇತಿಹಾಸ ಹಾಡಿಹುದು ಭವ್ಯಗಾನ
ಹಿಮಶೈಲ ಮುಡಿಯಿಂದ ಸಹ್ಯಾದ್ರಿ ಜಡಿಯಿಂದ
ಕನ್ನಡತಿ ಟೊಂಕಕ್ಕೆ ಗಂಧಗಾನ

ಭಾರತಿಯ ಉಡಿಯಲ್ಲಿ ಮೊಲೆಯುಂಡು ಆಡಿದರೆ
ಚಂದ್ರ ಸೂರ್ಯರ ಕೀರ್ತಿ ನಮ್ಮ ಮೇಲೆ
ಮಾನವನ ಅಂಗಳದಿ ದೇವರಾಜನ ಲಗ್ನ
ಬೆಸೆದಿಹುದು ಭೋಗಕ್ಕೆ ಯೋಗಮಾಲೆ

ಮ್ಯಾಗಣದ ಗಣದೋರು ಕೆಳಗಣದ ಕುಲದೋರು
ಉಳ್ಳವರು ಉಳಿದವರು ಬೇಡತಾಯಿ
ಪಕ್ಷಿಯಿಂಚರವಾಗಿ ಮರತುಂಬ ಹೂವಾಗಿ
ಈ ಹುಸಿಯ ಮಸಿಯಾಟ ಸಾಕುತಾಯಿ

ಮಡಲಕೆ ಪಡುವಣಕೆ ತೆಂಕಣಕೆ ಬಡಗಣಕೆ
ಕೈಲಾಸ ಸಾಗರಕೆ ಜಯಭಾರತಿ
ಜೀಕೋಣು ಕೂಗೋಣು ಜಯಘೋಷ ಹಾಕೋಣು
ಓಂ ಸತ್ಯ ಶಿವಯುಗಕೆ ಜಯಭಾರತಿ
*****