ದೂರ ದೂರ ದೂರ ಮುಗಿಲ
ದೂರ ದೂರ ನೋಡುವಾ
ಆಳ ಆಳ ಆಳ ಕಡಲ
ಆಳ ಆಳ ಸೇರುವಾ

ದಂಡೆ ಇಲ್ಲ ಬಂಡೆ ಇಲ್ಲ
ಆದಿ ಅಂತ ದಾಟುವಾ
ನಾದವಿಲ್ಲ ನೋಟವಿಲ್ಲ
ಮೌನವೀಣೆ ಮೀಟುವಾ

ರಸದ ವಿಶ್ವ ಋತದ ವಿಶ್ವ
ಸತ್ಯ ಶಾಂತಿಯನುಪಮಾ
ಶಿವನ ಜ್ಯೋತಿ ಶಿವನ ಪ್ರೀತಿ
ತಂಪು ತನನ ನಿರುಪಮಾ

ನಾನು ಬಿಂದು ನೀನು ಬಿಂದು
ರಸದ ಸಿಂಧು ಜೇನ್ಮಳೆ
ನಾನು ತಂಪು ನೀನು ಇಂಪು
ಸೊಂಪು ಸುಖದ ಶಾಮಲೆ

ಹಂಚು ದೇಹ ಬಿಚ್ಚಿ ಹೋಗಿ
ವಿಮಲ ಕಮಲ ತೆರೆಯಿತು
ಆತ್ಮ ದೀಪ ದೀಪ್ತಿ ಚಿಮ್ಮಿ
ದೇವ ಬುಗ್ಗೆ ಸುರಿಯಿತು

ತಲೆಯ ಸೊಟ್ಟೆ ಒಡೆದು ಹೋಗಿ
ದಿವ್ಯ ರತ್ನ ತೋರಿತು
ಶೂನ್ಯ ಶೂನ್ಯ ಶೂನ್ಯದಾಚೆ
ಶಿವನ ಚೆಲುವು ಚಿಗುರಿತು