ಕಡಲ ಕಪ್ಪೊಳಗೆ
ನಕ್ಷತ್ರಗಳು ಅರಳಿದ್ದವು
ಒಂಟಿ ಮೋಡಗಳು
ರೆಕ್ಕೆ ಬೀಸುತ್ತಿದ್ದವು,
ಚಂದಿರ ಈಸುತ್ತಿದ್ದ.
ಸಾವಿರ ಸಾವಿರ ಹಳ್ಳಕೊಳ್ಳಗಳು
ಕಡಲನ್ನು ಹೆಣೆದವು.
ಅದೇ ಕಡಲು ಹೊಳೆಯಾಗಿ
ಹಾಳೆಯ ಮೇಲೆ ಹನಿದು, ಹರಿದು
ಪದ್ಯವಾಯಿತು.
ಕಪ್ಪು ಕಡಲ ಮೊಗದಲ್ಲಿ
ಕಣ್ಣುಗಳು ನಕ್ಷತ್ರಗಳಂತೆ ಅರಳಿದ್ದವು.
ಮುಂಗುರುಳು ರೆಕ್ಕೆ ಬೀಸುವ
ಒಂಟಿ ಮೋಡಗಳ ಹಾಗೆ
ತುಟಿಯಂಚಿನಲ್ಲಿ ಬೆಳದಿಂಗಳ ನಗೆ.
ಕಣ್ಣು, ತುಟಿ, ಮುಂಗುರುಳು
ಹೊಳೆಹೊಳೆದು ಹಾಳೆಯ ಮೇಲೆ
ಪದ್ಯವಾಯಿತು.
ತಾರೆಯರು, ಮೋಡಗಳು
ಪದ್ಯವಾದವು,
ಕಣ್ಣುಗಳು, ಮುಂಗುರುಳು
ಪದ್ಯವಾದವು.
ಪದ್ಯವಾಗಬೇಕು ಅಂತ
ನನಗೂ ಅನಿಸಿತು
ಕಡಲ ಕನ್ನಡಿಯೊಳಗೆ ಇಣುಕಿದೆ
ಬಿಂಬಿ ಕಾಣಲಿಲ್ಲ.
ಕಣ್ಣ ಕನ್ನಡಿಯೊಳಗೆ ಇಣುಕಿದೆ
ನನ್ನ ಬಿಂಬವಾಗಿರಲಿಲ್ಲ.
ನಾನು ಪದ್ಯವಾಗಲಿಲ್ಲ.
Latest posts by ಸವಿತಾ ನಾಗಭೂಷಣ (see all)
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021