ಪಂಚ ಕಳ್ಳರ ತಂದು ಮಂಚದಾ ಮೇಲಿರಿಸಿ
ಈ ಮುಗ್ಧ ಗೋವುಗಳು ಮೆರೆಸಿರುವವು
ಪಂಚ ಪೀಠವ ಕಟ್ಟಿ ಪಂಚ ಪಾಲಕಿ ಕಟ್ಟಿ
ಅಡ್ಡಾಗಿ ಉದ್ದಾಗಿ ಎತ್ತಿರುವವು

ಓ ಮುಗ್ಧ ಸೋದರರೆ ಅತಿಮುಗ್ಧ ಭಾವುಕರೆ
ಈ ಚರ್ಮ ಚೀಲಗಳ ಹೊರುವಿರೇಕೆ
ಆರತಿಯ ತಂದಿರುವ ಓ ಅಕ್ಕ ತಾಯಿಗಳೆ
ಈ ಹೆಣದ ಕುಂಡಗಳ ಪೂಜೆಯೇಕೆ

ಪಾಲಕಿಯ ಹೊತ್ತಿರುವ ಶಿವಭಕ್ತ ಗೋಪುಗಳೆ
ಶಿವನ ಹೆಸರಿಲೆ ಶವದ ಯಾತ್ರೆಯೇಕೆ
ಹೊಗಳಿಕೆಯನುಣಬಂದ ಹಣರಾಶಿ ಬೇಕೆಂದ
ಈ ಪಂಚ ವಂಚಕರ ತೇರುಯೇಕೆ

ತೋರಿಕೆಯ ಯೋಗಿಗಳ ಸೋರಿಕೆಯ ಕಾಮಿಗಳ
ಓ ತಾಯಿ ತಂದೆಗಳ ಸೇರಬೇಡಿ
ಹಾಲು ಕುಡಿಯಲು ಹೋಗಿ ವಿಷವ ಕುಡಿಯಲು ಬೇಡಿ
ಹಗಲು ಸುಲಿಗೆಗೆ ಹೆಗಲು ನೀಡಬೇಡಿ

ಕಾವಿಯುಡುಗರೆಯುಟ್ಟ ಕರಿಯ ಹೆಗ್ಗಣರಿವರು
ಇವರೆದೆಯ ಅಂಗಳದಿ ಪ್ರೀತಿಯಿಲ್ಲ
ಎದೆತೆರೆದ ಹೂವುಗಳ ದನವಾಗಿ ತಿಂದಿಹರು
ಇವರೆದೆಯ ಗುಡಿಯಲ್ಲಿ ದೇವರಿಲ್ಲ

ಶಿವನೊಬ್ಬನೇ ಸತ್ಯ ಸತ್ಯವೊಂದೇ ಶಿವನು
ಈ ಶವದ ಚಟ್ಟಗಳ ಚಲ್ಲಿಬಿಡಿರಿ
ನೀವು ಆತ್ಮನ ದೀಪ ದೇವದೇವನ ದೀಪ
ಈ ಹುಚ್ಚ ಚಿಮಣಿಗಳ ಚಲ್ಲಿಬಿಡಿರಿ