ಬಂಧನದ ಬಲೆಯೊಳಗೆ ಸಿಲುಕಿ ನರಳದೆ ಸುಳಿವ
ಪಕ್ಷಿ ಕೂಟವೆ! ನಿಮ್ಮ ಬಾಳ್ವೆ ಲೇಸು
ರೆಕ್ಕೆಗಳ ಪಸರಿಸುತ ಕುಪ್ಪಳಿಸಿ ನೆಗೆದೋಡಿ
ಬಯಲೊಳಗೆ ಸಂಚರಿಪ ಬದುಕೆ ಲೇಸು

ಗೆಳೆಯರೆಲ್ಲರು ಕೂಡಿ ಸೊಗದ ಬನಗಳ ಸೇರಿ
ಚಿಲಿಪಿಯ ಧ್ವನಿಗೈವ ಪರಿಯೆ ಲೇಸು
ಮರದಿಂದ ಮರಕೋಡಿ ದೊರೆತ ಫಲಗಳ ಕಚ್ಚಿ
ಬಾಯಿ ಬಾಯಿಗೆ ಕೊಡುವ ಮಮತೆ ಲೇಸು

ಗಿರಿಶಿಖರಗಳ ದಾಟಿ ಭ್ರಮರಗಳ ತೆರದಂತೆ
ಆಗಸದಿ ಸುತ್ತುವಾ ಅರ್ತಿ ಲೇಸು
ಸಹಚರಿಗಳೊಡಗೂಡಿ ಕ್ಷಣಕಾಲ ಧರೆಗಿಳಿದು
ಎಡಬಲಕೆ ಕಣ್ಣಿಡುವ ಸೊಬಗೆ ಲೇಸು

ವಾಯು ವೇಗದಿ ಸಾಗಿ ಹಿಂಡು ಹಿಂಡಾಗಿ ನಿಡು
ಸಾಗರವ ದಾಟುವಾ ಪಯಣ ಲೇಸು
ಹಕ್ಕಿಗಳೆ ಬಿಸಿಲೊಳಗೆ ರೆಕ್ಕೆಗಳನರಳಿಸುತ
ಮಕ್ಕಳಿಗೆ ನೆರಳೀವ ಪ್ರೀತಿ ಲೇಸು

ಮೃಗ ಕೀಟಗಳ ಜನರ ಬಾಧೆ ನಿಮಗಿಲ್ಲ
ಲೋಹನಿರ್ಮಿತದಿಚ್ಛೆಗಳಿಗೆ ಸಿಲುಕದೆಯೆ
ಬಗೆಬಗೆಯ ನೋಟಗಳ ನೋಡಿ ನಲಿಯುವಿರಿ
ಜನಕಜೆಗೆ ನಿಮ್ಮ ಜೀವನವೆ ಬಹುಸೊಗಸು
*****

ಜನಕಜೆ
Latest posts by ಜನಕಜೆ (see all)